ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್: ಆರ್‌ಸಿಬಿ ಬ್ಯಾಟರ್‌ಗಳ ಅಬ್ಬರ

ಚಿನ್ನಸ್ವಾಮಿ ಅಂಗಳದಲ್ಲಿ ಬೃಹತ್ ಮೊತ್ತ ಪೇರಿಸಿದ ಸ್ಮೃತಿ–ಪೆರಿ
Published 4 ಮಾರ್ಚ್ 2024, 19:15 IST
Last Updated 4 ಮಾರ್ಚ್ 2024, 19:15 IST
ಅಕ್ಷರ ಗಾತ್ರ

ಬೆಂಗಳೂರು: ‘ಉದ್ಯಾನನಗರಿ‘ಯ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಎಲಿಸ್ ಪೆರಿ ಅವರ ಜೊತೆಯಾಟಕ್ಕೆ ಯು.ಪಿ. ವಾರಿಯರ್ಸ್‌ ಬೌಲರ್‌ಗಳು ಬಸವಳಿದರು. 

ಸೋಮವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ   20 ರನ್‌ಗಳ ಅಂತರದಿಂದ ಮಂದಾನ (80; 50ಎಸೆತ) ಕೈತಪ್ಪಿಸಿಕೊಂಡರು. ಆದರೆ ಅವರು ಮತ್ತು ಎಲಿಸ್ ಪೆರಿ (58; 37ಎ) ಅವರ 97 ರನ್‌ಗಳ ಜೊತೆಯಾಟದಿಂದಾಗಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 198 ರನ್‌ಗಳ ದೊಡ್ಡ ಮೊತ್ತ ಪೇರಿಸಿತು. 

ಬೆಂಗಳೂರು ಲೆಗ್‌ನ ಕೊನೆಯ ಪಂದ್ಯ ಇದಾಗಿದ್ದರಿಂದ ಸುಮಾರು 25 ಸಾವಿರ ಜನರು ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಿದರು. ಎಲ್ಲೆಲ್ಲೂ ಆರ್‌ಸಿಬಿ..ಆರ್‌ಸಿಬಿ..ಘೋಷಣೆ ಪ್ರತಿಧ್ವನಿಸಿತು. ಅವರನ್ನು ಆರ್‌ಸಿಬಿ ಬ್ಯಾಟರ್‌ಗಳು ನಿರಾಸೆಗೊಳಿಸಲಿಲ್ಲ.

ಕಳೆದೆರಡೂ ಪಂದ್ಯಗಳಲ್ಲಿ ಸೋತಿರುವ ಆರ್‌ಸಿಬಿ ತಂಡಕ್ಕೆ ಈ ಹಣಾಹಣಿಯಲ್ಲಿ ಉತ್ತಮ ಆರಂಭ ದೊರೆಯಿತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಯು.ಪಿ. ವಾರಿಯರ್ಸ್ ಲೆಕ್ಕಾಚಾರ ತಲೆಕೆಳಗಾಯಿತು.

ಆರ್‌ಸಿಬಿಯ ಆರಂಭಿಕ ಜೋಡಿ ಸಬಿನೇನಿ ಮೇಘನಾ (28; 21ಎ, 4X5) ಮತ್ತು ಸ್ಮೃತಿ ತಂಡದ ಮೊತ್ತವನ್ನು ಕೇವಲ 5.2 ಓವರ್‌ಗಳಲ್ಲಿ 50ರ ಗಡಿ ದಾಟಿಸಿದರು. ಅದೇ ಹೊತ್ತಿನಲ್ಲಿ ಅಂಜಲಿ ಸರವಣಿ ಬೌಲಿಂಗ್‌ನಲ್ಲಿ ಶಾರ್ಟ್ ಪಿಚ್ ಎಸೆತವನ್ನು ಬೌಂಡರಿಗೆ ಕಳಿಸುವ ಪ್ರಯತ್ನದಲ್ಲಿ ಎಕ್ಸ್‌ಟ್ರಾ ಕವರ್ಸ್‌ ಬಳಿ ಇದ್ದ ಫೀಲ್ಡರ್ ಚಾಮರಿ ಅಟಪಟ್ಟುಗೆ ಕ್ಯಾಚ್ ಆದರು.  ಯು.ಪಿ. ಆಟಗಾರರ ಸಂಭ್ರಮ ಬಹಳ ಹೊತ್ತು ಉಳಿಯಲಿಲ್ಲ.

ಮಂದಾನ ಜೊತೆಗೆ ಸೇರಿಕೊಂಡ ಎಲಿಸ್ ಪೆರಿ ರನ್‌ಗಳ ಹೊಳೆ ಹರಿಸಿದರು. ಸ್ಮೃತಿ 10 ಬೌಂಡರಿ ಮತ್ತು ಮೂರು ಸಿಕ್ಸರ್‌ ಬಾರಿಸಿದರು. ಟೂರ್ನಿಯಲ್ಲಿ ವೈಯಕ್ತಿಕ ಗರಿಷ್ಟ ರನ್ ಗಳಿಸಿದ ಬ್ಯಾಟರ್ ಆದರು. ಈ ಟೂರ್ನಿಯಲ್ಲಿ ಇದು ಅವರ ಎರಡನೇ ಅರ್ಧಶತಕ.

8ನೇ ಓವರ್‌ನಲ್ಲಿ ಯು.ಪಿ ತಂಡದ ಚಾಮರಿ ಅಟ್ಟಪಟ್ಟು ಮತ್ತು 16ನೇ ಓವರ್‌ನಲ್ಲಿ  ಸೋಫಿ ಎಕ್ಸೆಲ್‌ಸ್ಟೋನ್ ಅವರು ಕ್ಯಾಚ್‌ ಕೈಚೆಲ್ಲಿದ್ದರಿಂದ ಜೀವದಾನ ಪಡೆದ ಮಂದಾನ ಮತ್ತಷ್ಟು ಪ್ರಜ್ವಲಿಸಿದರು.

17ನೇ ಓವರ್‌ನಲ್ಲಿ ಸ್ಮೃತಿ ಅವರು ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಸ್ಲಾಗ್ ಸ್ವೀಪ್ ಮಾಡಿದ ಚೆಂಡನ್ನು ಡೀಪ್  ಮಿಡ್‌ವಿಕೆಟ್‌ ಫೀಲ್ಡರ್ ಪೂನಂ ಖೆಮ್ನರ್ ಹಿಡಿತಕ್ಕೆ ಪಡೆದರು. ಅಲ್ಲಿಗೆ ಸ್ಮೃತಿಯ ಚೆಂದದ ಇನಿಂಗ್ಸ್‌ಗೆ ತೆರೆಬಿತ್ತು.

ನಂತರದಲ್ಲಿ ಪೆರಿ ಆರ್ಭಟ ರಂಗೇರಿತು. 30 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಪೆರಿ ತಂಡದ ಮೊತ್ತವನ್ನು ಹಿಗ್ಗಿಸಿದರು.

19ನೇ ಓವರ್‌ನಲ್ಲಿ ದೀಪ್ತಿ ಎಸೆತವನ್ನು ಪೆರಿ ಸಿಕ್ಸರ್‌ಗೆ ಎತ್ತಿದ ಚೆಂಡು  ಪ್ರಚಾರ–ಪ್ರದರ್ಶನಕ್ಕಾಗಿ ಬೌಂಡರಿಯಾಚೆ ಇಟ್ಟಿದ್ದ ಪಂಚ್‌ ಡಾಟ್ ಇ.ವಿ. ಕಾರಿನ ಕಿಟಕಿಯ ಗಾಜನ್ನು ಪುಡಿ ಮಾಡಿತು. ಪೆರಿ ಸೇರಿದಂತೆ ಮೈದಾನದಲ್ಲಿದ್ದ ಎಲ್ಲ ಆಟಗಾರ್ತಿಯರು  ನಕ್ಕರು.

ಕೊನೆಯ ಓವರ್‌ನಲ್ಲಿ ಪೆರಿ ಔಟಾದರು.

ಸಂಕ್ಷಿಪ್ತ ಸ್ಕೋರು: ರಾಯಲ್ ಚಾಲೆಂಜರ್ಸ್ ಬೆಂಗಳೂರು: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 198 (ಎಸ್. ಮೇಘನಾ 28, ಸ್ಮೃತಿ ಮಂದಾನ 80, ಎಲಿಸ್ ಪೆರಿ 58, ರಿಚಾ ಘೋಷ್ ಔಟಾಗದೆ 21, ಸೋಫಿ ಡಿವೈನ್ ಔಟಾಗದೆ 2)

ಆರ್‌ಸಿಬಿ ತಂಡದ ಎಲಿಸಾ ಪೆರಿ ಬ್ಯಾಟಿಂಗ್‌   –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್
ಆರ್‌ಸಿಬಿ ತಂಡದ ಎಲಿಸಾ ಪೆರಿ ಬ್ಯಾಟಿಂಗ್‌   –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT