ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಚೆಸ್ಟರ್‌ನಲ್ಲಿ ಮಿನುಗಿದ ಭಾರತ: ಕಪಿಲ್ ಪಡೆಗೆ ‘ವಿಶ್ವಕಪ್’ ಸಂಭ್ರಮ

ವಿಶ್ವಕಪ್‌ ಹೆಜ್ಜೆ ಗುರುತು –10
Last Updated 19 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಜೂನ್‌ 9–10ರಂದು ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಪಂದ್ಯವದು. ‘ಬಿ’ ಗುಂಪಿನ ಆ ಹಣಾಹಣಿಯಲ್ಲಿ ಭಾರತ ತಂಡಕ್ಕೆ ಎರಡು ಬಾರಿಯ ವಿಶ್ವ ಚಾಂಪಿಯನ್‌ ವೆಸ್ಟ್‌ ಇಂಡೀಸ್‌ ಸವಾಲು ಎದುರಾಗಿತ್ತು.ಕಪಿಲ್‌ ದೇವ್‌ ಪಡೆ, ವಿಂಡೀಸ್‌ಗೆ ಸುಲಭ ತುತ್ತಾಗಲಿದೆ ಎಂದು ಪಂದ್ಯಕ್ಕೂ ಮುನ್ನವೇ ‌ಕ್ರಿಕೆಟ್‌ ಪಂಡಿತರು ಷರಾ ಬರೆದುಬಿಟ್ಟಿದ್ದರು.

ಆದರೆ ಅಂದು ನಡೆದಿದ್ದೇ ಬೇರೆ. ಕ್ಲೈವ್‌ ಲಾಯ್ಡ್‌ ಬಳಗಕ್ಕೆ ಆಘಾತ ನೀಡಿದ್ದ ಭಾರತ, ಹೊಸ ಮನ್ವಂತರಕ್ಕೆ ಮುನ್ನುಡಿ ಬರೆದಿತ್ತು.

ಆ ಜಯ, ಕ‍‍ಪಿಲ್‌ ಪಡೆಯ ಚೊಚ್ಚಲ ಪ್ರಶಸ್ತಿಯ ಕನಸಿಗೆ ಬಲ ತುಂಬಿತ್ತು. ಭಾರತದ ಎದುರು ವಿಂಡೀಸ್‌ ಸೋತ ಮೊದಲ ಪಂದ್ಯ ಅದಾಗಿತ್ತು.

* ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಫೀಲ್ಡಿಂಗ್‌ ಮಾಡಲು ನಿರ್ಧರಿಸಿತು.
* ಭಾರತ ತಂಡ 46ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು.
* ಆರಂಭಿಕ ಆಟಗಾರ ಸುನಿಲ್‌ ಗಾವಸ್ಕರ್‌ 44 ಎಸೆತಗಳನ್ನು ಎದುರಿಸಿ 19ರನ್‌ ಗಳಿಸಿದರು.
* ಕೃಷ್ಣಮಾಚಾರಿ ಶ್ರೀಕಾಂತ್‌ 17 ಎಸೆತಗಳಲ್ಲಿ 14ರನ್‌ ಬಾರಿಸಿದರು.
* ಮೊಹಿಂದರ್‌ ಅಮರನಾಥ್‌ ಮತ್ತು ಸಂದೀಪ್‌ ಪಾಟೀಲ್‌ ಮೂರನೇ ವಿಕೆಟ್‌ಗೆ 30ರನ್‌ ಸೇರಿಸಿದರು.
* ಅಮರನಾಥ್‌ 21ರನ್‌ ಗಳಿಸಿದರು. ಅವರು ಎದುರಿಸಿದ್ದು 60 ಎಸೆತ. ಪಾಟೀಲ್‌ 52 ಎಸೆತಗಳಲ್ಲಿ 36ರನ್‌ ಕಲೆಹಾಕಿದರು.
* ಈ ಜೋಡಿ ಔಟಾದ ಬೆನ್ನಲ್ಲೇ, ನಾಯಕ ಕಪಿಲ್‌ (6) ಕೂಡಾ ಪೆವಿಲಿಯನ್ ಸೇರಿಕೊಂಡರು. ಆಗ ತಂಡದ ಮೊತ್ತ 5 ವಿಕೆಟ್‌ಗೆ 141.
* ಒಂದೆಡೆ ವಿಕೆಟ್‌ ಉರುಳುತ್ತಲೇ ಇತ್ತು. ಹೀಗಿದ್ದರೂ ಯಶ್‌ಪಾಲ್‌ ಶರ್ಮಾ ಮಾತ್ರ ಎದೆಗುಂದಲಿಲ್ಲ.
* ಮೈಕಲ್‌ ಹೋಲ್ಡಿಂಗ್‌, ಮಾಲ್ಕಮ್‌ ಮಾರ್ಷಲ್‌, ಆ್ಯಂಡಿ ರಾಬರ್ಟ್ಸ್‌ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಯಶ್‌ಪಾಲ್‌ ಅರ್ಧಶತಕ ಬಾರಿಸಿದರು.
* 133 ನಿಮಿಷ ಕ್ರೀಸ್‌ನಲ್ಲಿದ್ದ ಯಶ್‌ಪಾಲ್‌ 89 ರನ್‌ ಕಲೆಹಾಕಿದರು. 120 ಎಸೆತ ಎದುರಿಸಿದ ಅವರು 9 ಬೌಂಡರಿ ಸಿಡಿಸಿದರು.
* ಕನ್ನಡಿಗ ರೋಜರ್‌ ಬಿನ್ನಿ 27ರನ್‌ ಗಳಿಸಿ ಯಶ್‌ಪಾಲ್‌ಗೆ ಉತ್ತಮ ಬೆಂಬಲ ನೀಡಿದರು. ಮದನ್‌ ಲಾಲ್‌ (ಔಟಾಗದೆ 21; 22ಎ) ಕೂಡಾ ಮಿಂಚಿದರು.
*‌ 60 ಓವರ್‌ಗಳನ್ನೂ ಆಡಿದ ಭಾರತ, 8 ವಿಕೆಟ್‌ಗೆ 262ರನ್‌ ಕಲೆಹಾಕಿತು.
* ವಿಂಡೀಸ್‌ ಪರ ಹೋಲ್ಡಿಂಗ್, ಮಾರ್ಷಲ್‌ ಮತ್ತು ಲ್ಯಾರಿ ಗೋಮೆಸ್‌ ತಲಾ ಎರಡು ವಿಕೆಟ್‌ ಪಡೆದರು.
* ಗುರಿ ಬೆನ್ನಟ್ಟಿದ ಕೆರಿಬಿಯನ್‌ ನಾಡಿನ ತಂಡಕ್ಕೆ ಗಾರ್ಡಾನ್‌ ಗ್ರೀನಿಚ್‌ (24; 55ಎ) ಮತ್ತು ಡೆಸ್ಮಂಡ್‌ ಹೇನ್ಸ್‌ (24; 29ಎ) ಉತ್ತಮ ಆರಂಭ ನೀಡಿದರು.
* ಈ ವಿಶ್ವಕಪ್‌ನಲ್ಲಿ ಭಾರತದ ಪರ ಮೊದಲ ವಿಕೆಟ್‌ ಪಡೆದ ಹಿರಿಮೆ ಬಲ್ವಿಂದರ್‌ ಸಂಧು ಪಾಲಾಯಿತು. ಅವರು ಗ್ರೀನಿಚ್‌ ವಿಕೆಟ್‌ ಉರುಳಿಸಿದರು.
* ರೋಜರ್‌ ಬಿನ್ನಿ ಅವರು ಸರ್‌ ವಿವಿಯನ್‌ ರಿಚರ್ಡ್ಸ್‌ (17) ನಾಯಕ ಲಾಯ್ಡ್‌ (25) ಮತ್ತು ವಿಕೆಟ್‌ ಕೀಪರ್‌ ಜೆಫ್‌ ದುಜೊನ್‌ (7) ವಿಕೆಟ್‌ಗಳನ್ನು ಪಡೆದು ಗೆಲುವು ಭಾರತದ ಪರ ವಾಲುವಂತೆ ಮಾಡಿದರು.
* 12 ಓವರ್‌ ಹಾಕಿದ ರೋಜರ್‌, 48ರನ್‌ ನೀಡಿದರು. ಒಂದು ಓವರ್‌ ಮೇಡನ್‌ ಮಾಡಿದರು.
* ರವಿ ಶಾಸ್ತ್ರಿ ಅವರು ಎದುರಾಳಿ ತಂಡದ ಕೆಳ ಕ್ರಮಾಂಕದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.
* 5.1 ಓವರ್‌ ಬೌಲ್‌ ಮಾಡಿದ ಶಾಸ್ತ್ರಿ, ಮಾರ್ಷಲ್‌ (2), ಹೋಲ್ಡಿಂಗ್‌ (8) ಮತ್ತು ಜೋಯೆಲ್‌ ಗಾರ್ನರ್‌ (37; 29ಎ, 1ಸಿ) ಅವರ ವಿಕೆಟ್‌ ಪಡೆದು ಗಮನ ಸೆಳೆದರು.
* ಶಾಸ್ತ್ರಿ ಬೌಲ್‌ ಮಾಡಿದ 55ನೇ ಓವರ್‌ನ ಮೊದಲ ಎಸೆತದಲ್ಲಿ ಗಾರ್ನರ್‌ ಅವರು ಸೈಯದ್‌ ಕಿರ್ಮಾನಿಗೆ ಕ್ಯಾಚ್‌ ನೀಡುತ್ತಿದ್ದಂತೆ ಭಾರತದ ಪಾಳಯದಲ್ಲಿ ಸಂಭ್ರಮ ಮೇಳೈಸಿತು.
* ವಿಂಡೀಸ್‌, 228ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 34ರನ್‌ಗಳಿಂದ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT