ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಟಿಂಗ್ ಬಲಾಢ್ಯರ ಮುಖಾಮುಖಿ

ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ವೆಸ್ಟ್ ಇಂಡೀಸ್ ಸವಾಲು
Last Updated 13 ಜೂನ್ 2019, 20:25 IST
ಅಕ್ಷರ ಗಾತ್ರ

ಸೌತಾಂಪ್ಟನ್: ರನ್‌ಗಳ ಹೊಳೆ ಹರಿಸುವ ಬ್ಯಾಟಿಂಗ್ ಬಲಶಾಲಿಗಳು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಶುಕ್ರವಾರ ಇಲ್ಲಿಯ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಮತ್ತು ಜೇಸನ್ ಹೋಲ್ಡರ್ ಮುಂದಾಳತ್ವದ ವೆಸ್ಟ್ ಇಂಡೀಸ್ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿವೆ. ಆತಿಥೇಯ ತಂಡವು ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಎದುರು ದೊಡ್ಡ ಅಂತರದ ಗೆಲುವು ಸಾಧಿಸಿತ್ತು. ಆದರೆ, ಪಾಕಿಸ್ತಾನ ತಂಡದ ಎದುರು ಸೋತಿತ್ತು.

ವಿಂಡೀಸ್ ತಂಡವು ಪಾಕ್ ವಿರುದ್ಧ ಗೆದ್ದಿತ್ತು. ಆಸ್ಟ್ರೇಲಿಯಾ ಎದುರು ಪರಾಭವಗೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಮಾರ್ಗನ್ ಬಳಗದಲ್ಲಿರುವ ಜೇಸನ್ ರಾಯ್, ಜೋ ರೂಟ್ ಮತ್ತು ಜೋಸ್ ಬಟ್ಲರ್ ಶತಕ ಬಾರಿಸಿದ್ದಾರೆ. ಆದರೆ ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಇರುವ ವಿಂಡೀಸ್ ತಂಡದಿಂದ ಇನ್ನೂ ಒಂದು ಶತಕ ದಾಖಲಾಗಿಲ್ಲ. ಕ್ರಿಸ್ ಗೇಲ್, ಶಾಯ್ ಹೋಪ್, ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಈಗಾಗಲೇ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಮೆರೆದಿದ್ದಾರೆ. ಆದರೆ, ಅನುಭವಿ ಡ್ವೆನ್ ಬ್ರಾವೊ, ಶಿಮ್ರೊನ್ ಹೆಟ್ಮೆಯರ್ ಮತ್ತು ಆ್ಯಂಡ್ರೆ ರಸೆಲ್ ಅವರು ಪೂರ್ಣಪ್ರಮಾಣದಲ್ಲಿ ಲಯಕ್ಕೆ ಮರಳಿಲ್ಲ.

ಒಂದೊಮ್ಮೆ ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಆರಂಭಿಸಿದರೆ ಇಂಗ್ಲೆಂಡ್ ಬೌಲರ್‌ಗಳು ಪರದಾಡುವ ಸ್ಥಿತಿ ಬರಬಹುದು. ಬಾರ್ಬಡೀಸ್‌ನ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ. ಅವರು ತಮ್ಮ ‘ತವರು’ ನೆಲದ ಬಳಗಕ್ಕೆ ಯಾವ ರೀತಿ ಸವಾಲೊಡ್ಡಲಿದ್ದಾರೆ ನೋಡಬೇಕಷ್ಟೇ!

ಇಂಗ್ಲೆಂಡ್ ಬಳಗದಲ್ಲಿರುವ ಆರು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಹೋಲ್ಡರ್‌ ಬಳಗದ ಬೌಲರ್‌ಗಳು ವಿಶೇಷ ಯೋಜನೆ ರೂಪಿಸಲೇಬೇಕು. ಶೆಲ್ಡನ್ ಕಾಟ್ರೆಲ್, ಒಷೇನ್ ಥಾಮಸ್ ಅವರ ಶರವೇಗದ ಎಸೆತಗಳನ್ನು ಎದುರಿಸಲು ಆತಿಥೇಯ ಬ್ಯಾಟ್ಸ್‌ಮನ್‌ಗಳು ಸನ್ನದ್ಧರಾಗಿದ್ದಾರೆ.

ಇಲ್ಲಿಯ ಪಿಚ್‌ನಲ್ಲಿ ಇದುವರೆಗೆ ನಡೆದಿರುವ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಮೂನ್ನೂರು ರನ್‌ಗಳಿಗಿಂತ ಹೆಚ್ಚಿನ ಮೊತ್ತವು ಹಲವು ಬಾರಿ ದಾಖಲಾಗಿವೆ.ಆದ್ದರಿಂದ ಎರಡೂ ತಂಡಗಳ ಬೌಲರ್‌ಗಳಿಗೆ ಕಠಿಣ ಸವಾಲು ಇರುವುದು ಖಚಿತ.

ಮಳೆ ಸಾಧ್ಯತೆ: ಟೂರ್ನಿಯಲ್ಲಿ ಈಗಾಗಲೇ ಕೆಲವು ಪಂದ್ಯಗಳನ್ನು ಆಹುತಿ ತೆಗೆದುಕೊಂಡಿರುವ ಮಳೆಯು ಶುಕ್ರವಾರದ ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT