ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ನೆನಪಿನಂಗಳದಲ್ಲಿ ದಿಗ್ಗಜರ ವಿಹಾರ

Last Updated 24 ಜೂನ್ 2020, 9:35 IST
ಅಕ್ಷರ ಗಾತ್ರ

ನವದೆಹಲಿ: ‘ಮೊದಲ ಪ್ರೇಮವನ್ನು ಹೇಗೆ ಮರೆಯಲು ಸಾಧ್ಯವಿಲ್ಲವೋ ಅದೇ ರೀತಿ ಮೊದಲು ಪ್ರಶಸ್ತಿ ಗೆದ್ದ ಸಂಭ್ರಮವನ್ನು ಮರೆಯಲುಂಟೇ...?’ 1983ರಲ್ಲಿ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಮೊದಲ ಪ್ರಶಸ್ತಿ ಗೆದ್ದ ಭಾರತ ತಂತಡದಲ್ಲಿದ್ದ ಸೈಯದ್ ಕಿರ್ಮಾನಿ ಪ್ರತಿಕ್ರಿಯೆ ಇದು.

ಲಾರ್ಡ್ಸ್ ಅಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಕಪಿಲ್‌ದೇವ್ ಬಳಗ ಕಪ್ ಎತ್ತಿಹಿಡಿದದ್ದು ಜೂನ್ 25ರಂದು. ಆ ಸಂಭ್ರಮಕ್ಕೆ ಈಗ 37 ವರ್ಷ ತುಂಬಿದೆ. ವಿಶ್ವಕಪ್‌ ಪ್ರಶಸ್ತಿ ಗೆದ್ದ ನಂತರ ಭಾರತ ಕ್ರಿಕೆಟ್‌ ಮಹತ್ತರವಾದ ಬದಲಾವಣೆಗಳ ಕಡೆಗೆ ಹೆಜ್ಜೆ ಹಾಕಿತು. ಈಗ ಕ್ರಿಕೆಟ್ ಈ ದೇಶದ ಧರ್ಮವೇ ಆಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವದ ಕ್ರಿಕೆಟ್ ಸಂಸ್ಥೆಗಳ ಪೈಕಿ ಶ್ರೀಮಂತ ಸಂಸ್ಥೆ ಎಂದೆನಿಸಿಕೊಂಡಿದೆ.

ವಿಶ್ವಕಪ್ ವಿಜೇತ ಆಗುವ ಮುನ್ನ ಭಾರತವು ಹಾಕಿಪ್ರಿಯರ ದೇಶವಾಗಿತ್ತು. 1948ರಿಂದ 1980ರ ವರೆಗೆ ದೇಶ ಒಲಿಂಪಿಕ್ಸ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದುಕೊಂಡಿತ್ತು. ಆದರೆ 1983ರಲ್ಲಿ ವಿಶ್ವ ಕ್ರಿಕೆಟ್‌ನ ಹೊಸ ಅಧಿಪತಿ ಪಟ್ಟವೂ ಭಾರತಕ್ಕೆ ಲಭಿಸಿತು. ಹಿಂದಿನ ಎರಡು ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಗಳಿಸಿದ್ದು ಏಕೈಕ ಜಯ. ಅದೂ ಪೂರ್ವ ಆಫ್ರಿಕಾ ತಂಡದ ವಿರುದ್ಧ. ಅಂಥ ತಂಡ ಮೂರನೇ ಪ್ರಯತ್ನದಲ್ಲಿ ಗೆದ್ದು ಬೀಗಿದಾಗ ಕ್ರಿಕೆಟ್ ಜಗತ್ತೇ ದಂಗಾಗಿತ್ತು.

‘ಕ್ವಾರ್ಟರ್ ಫೈನಲ್ ವರೆಗೆ ತಲುಪುತ್ತೇವೆ ಎಂಬ ಭರವಸೆಯೂ ಇರಲಿಲ್ಲ. ಅಂದು ತಂಡದಲ್ಲಿದ್ದ ಕೆಲವು ಸಹ ಆಟಗಾರರು ಅದನ್ನು ಹೇಳಿದ್ದರು ಕೂಡ. ಆದರೆ ಅಲ್ಲಿ ಆದದ್ದು ಬೇರೆಯೇ. ಅಂದು ಪ್ರಶಸ್ತಿ ಗೆದ್ದ ಗಳಿಗೆಯನ್ನು ಹೇಗೆ ಮರೆಯಲಿ? 37 ವರ್ಷ ಕಳೆದರೂ ಇಂದಿಗೂ ಆಟಗಾರರಾದ ನಾವು ಮಾತ್ರವಲ್ಲ, ದೇಶವೇ ಆ ಪ್ರಶಸ್ತಿಯನ್ನು ನೆನಪಿಟ್ಟುಕೊಂಡಿದೆ’ ಎಂದು ಹೇಳಿದವರು ಅಂದು ತಂಡದ ವಿಕೆಟ್ ಕೀಪರ್ ಆಗಿದ್ದ ಸೈಯದ್ ಕಿರ್ಮಾನಿ.

‘ಅದೊಂದು ಮಹತ್ವದ ದಿನ. ದೇಶದಲ್ಲಿ ಕ್ರಿಕೆಟ್ ಈಗ ಸಾಕಷ್ಟು ಬೆಳೆದಿದೆ. ಆದರೂ ಯುವ ಪೀಳಿಗೆಯವರು ಕೂಡ ಭಾರತ ಮೊದಲ ವಿಶ್ವಕಪ್ ಪ್ರಶಸ್ತಿ ಗೆದ್ದದ್ದು ಯಾವಾಗ, ಅಂದು ತಂಡದಲ್ಲಿದ್ದ ಆಟಗಾರರು ಯಾರು ಎಂಬುದನ್ನೆಲ್ಲ ತಿಳಿದುಕೊಳ್ಳುವ ಆಸಕ್ತಿ ತೋರುತ್ತಿದ್ದಾರೆ. ಇದು ಮತ್ತಷ್ಟು ಖುಷಿಯ ವಿಷಯ’ ಎಂದು ಕಿರ್ಮಾನಿ ಅಭಿಪ್ರಾಯಪಟ್ಟರು.

‘ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ಬಿಸಿಸಿಐ ಆರ್ಥಿಕವಾಗಿ ಸಬಲವಾಗುತ್ತ ಬಂತು. ಆದ್ದರಿಂದ ಅಂದಿನದು ದೇಶದ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ ಗೆಲುವು ಆಗಿತ್ತು’ ಎಂಬುದು ಅಂದು 14 ಮಂದಿಯ ತಂಡದಲ್ಲಿದ್ದ ಸುನಿಲ್ ವಲ್ಸನ್ ಅಭಿಮತ.

ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಎದುರಿನ ಗುಂಪು ಹಂತದ ನಿರ್ಣಾಯಕ ಪಂದ್ಯದಲ್ಲಿ ಭಾರತ 17 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಪರದಾಡುತ್ತಿತ್ತು. ಕಪಿಲ್ ದೇವ್‌ ಗಳಿಸಿದ ಅಜೇಯ 175 ರನ್ ಆ ಪಂದ್ಯದ ಗತಿಯನ್ನೂ ಭಾರತದ ಭವಿಷ್ಯವನ್ನೂ ಬದಲಿಸಿತು. ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಅಮೋಘ ಆಟವಾಡಿದ ‘ಕಪಿಲ್ಸ್ ಡೆವಿಲ್ಸ್‌’ ಫೈನಲ್‌ನಲ್ಲಿ ಕೇವಲ 183 ರನ್‌ ಗಳಿಸಿದರೂ ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಂಗೆಡಿಸಿ 140 ರನ್‌ಗಳಿಗೆ ಕೆಡವಿತು.

ವೆಸ್ಟ್ ಇಂಡೀಸ್ ತಂಡದ ನಾಯಕ ಕ್ಲೈವ್ ಲಾಯ್ಡ್ ಅವರನ್ನು ಫೈನಲ್‌ ಪಂದ್ಯದಲ್ಲಿ ಎಂಟು ರನ್‌ಗಳಿಗೆ ಔಟ್ ಮಾಡಿದ ರೋಜರ್ ಬಿನ್ನಿ ‘ಆಲ್‌ರೌಂಡರ್‌ಗಳ ಅತ್ಯಪೂರ್ವ ಆಟ ಮತ್ತು ಕಪಿಲ್ ದೇವ್ ನಾಯಕತ್ವ ಅಂದಿನ ಗೆಲುವಿಗೆ ಕಾರಣ’ ಎಂದರು.

ಬೆಳ್ಳಿತೆರೆಗೆ ಬರಲಿದ ಚೊಚ್ಚಲ ಪ್ರಶಸ್ತಿ

ಭಾರತ ತಂಡ ಮೊದಲ ವಿಶ್ವಕಪ್ ಗೆದ್ದ ಕ್ಷಣವನ್ನು ಬೆಳ್ಳಿತೆರೆಯಲ್ಲಿ ಮೂಡಿಸುವ ಪ್ರಯತ್ನ ನಡೆಯುತ್ತಿದ್ದು ಬಾಲಿವುಡ್‌ನಲ್ಲಿ ಆ ಸಂಭ್ರಮ ಸಿನಿಮಾವಾಗಿ ಬರಲಿದೆ. ರಣವೀರ್ ಸಿಂಗ್ ಅವರು ಅಂದಿನ ನಾಯಕ ಕಪಿಲ್ ದೇವ್ ಪಾತ್ರ ನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT