ಮುಂಬೈ: ಇನಿಂಗ್ಸ್‌ನ ಕೊನೇ ಹಂತದಲ್ಲಿ ದಿಢೀರ್ ಕುಸಿತ ಕಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಪಿ ವಾರಿಯರ್ಸ್ ವಿರುದ್ಧ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ. ಇಲ್ಲಿನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇನ್ನೂ ಮೂರು ಎಸೆತ ಬಾಕಿ ಇರುವಂತೆಯೇ ಸರ್ವಪತನ ಕಂಡು ಯುಪಿ ಪಡೆಗೆ 139 ರನ್ ಗುರಿ ನೀಡಿದೆ.
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕಿ ಸ್ಮೃತಿ ಮಂದಾನ ಕೇವಲ 4 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಸೋಫಿ ಡಿವೈನ್ (36) ಮತ್ತು ಎಲಿಸ್ ಪೆರಿ ಎರಡನೇ ವಿಕೆಟ್‌ಗೆ 44 ರನ್ ಕೂಡಿಸಿದರು. ಬಳಿಕ ಬಂದ ಕನಿಕಾ ಅಹುಜಾ (8), ಹೀಥರ್ ನೈಟ್ (2) ಹೆಚ್ಚು ಜೊತ್ತು ನಿಲ್ಲಲಿಲ್ಲ. ಶ್ರೇಯಾಂಕಾ ಪಾಟೀಲ್ (15), ಎರಿನ್ ಬರ್ನ್ಸ್ (12) ಮತ್ತು ರಿಚಾ ಘೋಷ್ (1) ಸಹ ನಿರಾಸೆ ಮೂಡಿಸಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಗಟ್ಟಿಯಾಗಿ ನಿಂತ ಪೆರಿ ಬಿರುಸಿನ ಅರ್ಧಶತಕ ಗಳಿಸಿದರು. ಅವರು 39 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 52 ರನ್ ಗಳಿಸಿದರು.
ದಿಢೀರ್ ಕುಸಿತ
16 ಓವರ್‌ಗಳ ಆಟ ಮುಗಿದಾಗ ಆರ್‌ಸಿಬಿ 124 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. 52 ರನ್ ಗಳಿಸಿದ್ದ ಎಲಿಸ್ ಪೆರಿ ಮತ್ತು ಎರಿನ್ ಬರ್ನ್ಸ್ ಕ್ರೀಸ್‌ನಲ್ಲಿದ್ದರು. ರಿಚಾ ಘೋಷ್ ಇನ್ನಷ್ಟೇ ಬ್ಯಾಟಿಂಗ್‌ಗೆ ಬರಬೇಕಿತ್ತು. ಹೀಗಾಗಿ 150 ರನ್ ಗಳಿಸುವ ಲೆಕ್ಕಾಚಾರದಲ್ಲಿತ್ತು.
ಆದರೆ, 17ನೇ ಓವರ್ ಬೌಲಿಂಗ್‌ಗೆ ಇಳಿದ ದೀಪ್ತಿ ಶರ್ಮಾ ಆರ್‌ಸಿಬಿ ಯೋಜನೆಯನ್ನು ತಲೆಕೆಳಗೆ ಮಾಡಿದರು. ಒಂದೇ ಓವರ್‌ನಲ್ಲಿ ಪೆರಿ ಹಾಗೂ ಬರ್ನ್ಸ್ ವಿಕೆಟ್ ಪಡೆದು ತಿರುವು ನೀಡಿದರು.
ನಂತರದ ಓವರ್ ಹಾಕಿದ ಕನ್ನಡತಿ ರಾಜೇಶ್ವರಿ ಗಾಯಕವಾಡ್, ಮೊದಲ ಎಸೆತದಲ್ಲೇ ಕೋಮಲ್ ಝಂಝಾದ್ ವಿಕೆಟ್ ಪಡೆದರು. 20ನೇ ಓವರ್ ಎಸೆದ ಸೋಫಿ ಎಕ್ಲೆಸ್ಟೋನ್ ಅವರು ರೇಣುಕಾ ಸಿಂಗ್ ಮತ್ತು ಸಹನಾ ಪವಾರ್ ವಿಕೆಟ್ ಪಡೆಯುವುದರೊಂದಿಗೆ ಆರ್‌ಸಿಬಿ ಇನಿಂಗ್ಸ್‌ಗೆ ತೆರೆ ಬಿದ್ದಿತು.
ಕೇವಲ 13 ರನ್ ಅಂತರದಲ್ಲಿ ಕೊನೆಯ 5 ವಿಕೆಟ್ ಪಡೆದದ್ದು ಹಿನ್ನಡೆಯಾಯಿತು.
ಸೋಫಿ ಎಕ್ಲೆಸ್ಟೋನ್ 4 ವಿಕೆಟ್ ಉರುಳಿಸಿದರೆ, ದೀಪ್ತಿ ಶರ್ಮಾ 3 ವಿಕೆಟ್ ಕಿತ್ತರು. ಗಾಯಕವಾಡ್ 1 ವಿಕೆಟ್ ಪಡೆದರು.
ಯುಪಿಗೆ ಉತ್ತಮ ಆರಂಭ
ಗುರಿ ಬೆನ್ನತ್ತಿರುವ ಯುಪಿಗೆ ಅಲಿಸ್ಸಾ ಹೀಲಿ (48) ಮತ್ತು ದೇವಿಕಾ ವೈದ್ಯಾ (17) ಉತ್ತಮ ಆರಂಭ ನೀಡಿದ್ದಾರೆ. ಈ ಜೋಡಿ ಮುರಿಯದ ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 7 ಓವರ್‌ಗಳಲ್ಲೇ 66 ರನ್ ಕಲೆಹಾಕಿದೆ. ಗೆಲುವಿಗೆ ಇನ್ನು 78 ಎಸೆತಗಳಲ್ಲಿ 73 ರನ್ ಗಳಿಸಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.