ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ | ಕಿರಣ್ ಅಬ್ಬರದ ಆಟ; ವಾರಿಯರ್ಸ್ ಜಯಭೇರಿ

ಡಬ್ಲ್ಯುಪಿಎಲ್: ಮುಂಬೈ ಇಂಡಿಯನ್ಸ್‌ಗೆ ನಿರಾಶೆ; ಹೇಯಲಿ ಅರ್ಧಶತಕ
ಗಿರೀಶ ದೊಡ್ಡಮನಿ
Published 28 ಫೆಬ್ರುವರಿ 2024, 17:37 IST
Last Updated 28 ಫೆಬ್ರುವರಿ 2024, 17:37 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ಸಿಕ್ಸರ್, ಬೌಂಡರಿಗಳ ಚಿತ್ತಾರ ಬಿಡಿಸಿದ ಕಿರಣ್ ನವಗಿರೆ  ಯುಪಿ ವಾರಿಯರ್ಸ್ ತಂಡಕ್ಕೆ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲ ಜಯದ ಕಾಣಿಕೆ ನೀಡಿದರು. 

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಒಡ್ಡಿದ್ದ 162 ರನ್‌ಗಳ ಗೆಲುವಿನ ಗುರಿಯನ್ನು ವಾರಿಯರ್ಸ್‌ ತಂಡವು 22 ಎಸೆತಗಳು ಬಾಕಿಯಿರುವಂತೆಯೇ ಮುಟ್ಟಿತು. 7 ವಿಕೆಟ್‌ಗಳಿಂದ ಜಯಿಸಿತು. ಟೂರ್ನಿಯ ಮೊದಲೆರಡು ಪಂದ್ಯಗಳಲಿ ಜಯಿಸಿದ್ದ ಮುಂಬೈ ಮೊದಲ ಸೋಲು ಅನುಭವಿಸಿತು.

ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡವು  ಹೆಯಲಿ ಮ್ಯಾಥ್ಯೂಸ್ (55; 47ಎ, 4X9, 6X1) ಅವರ ಅಬ್ಬರದ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 161 ರನ್ ಗಳಿಸಿತು.

ಯು.ಪಿ ತಂಡದ ಫೀಲ್ಡರ್‌ಗಳು ಹೆಯಲಿಯ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿ ಪರಿತಪಿಸಿದರು. ಅಲ್ಲದೇ ಬಹಳಷ್ಟು ಮಿಸ್‌ಫೀಲ್ಡ್‌ಗಳನ್ನೂ ಮಾಡಿ ರನ್‌ಗಳನ್ನು ಬಿಟ್ಟುಕೊಟ್ಟರು.

ಆದರೆ  ಆ ಎಲ್ಲ ಲೋಪಗಳನ್ನು ಮರೆಯುವಂತೆ ಮಾಡಿದ್ದು ಮಹಾರಾಷ್ಟ್ರದ ಹುಡುಗಿ ಕಿರಣ್ ನವಗಿರೆ (57; 31ಎ, 4X6, 6X4) ಮತ್ತು ನಾಯಕಿ ಅಲಿಸಾ ಹೀಲಿ (33; 29ಎ, 4X5) ಅವರ ಆಟ. ಮುಂಬೈ ಬೌಲರ್‌ಗಳನ್ನು ದಂಡಿಸಿದರು.

ಮೊದಲ ಪವರ್‌ಪ್ಲೇನಲ್ಲಿಯೇ ವಿಕೆಟ್‌ ನಷ್ಟವಿಲ್ಲದೇ 61 ರನ್‌ಗಳು ತಂಡದ ಖಾತೆಗೆ ಹರಿದುಬಂದವು. ಅದರಲ್ಲೂ ಕಿರಣ್ ಆಟಕ್ಕೆ ಚೆಂಡು ನಾಲ್ಕು ಬಾರಿ ಗ್ಯಾಲರಿಗೆ ಹೋಗಿ ಬಿತ್ತು.

ಪಂದ್ಯ ನೋಡಲು ಸೇರಿದ್ದ  ಏಳು ಸಾವಿರಕ್ಕೂ ಹೆಚ್ಚು ಜನರು ಖುಷಿಯಿಂದ ಕುಣಿದಾಡಿ ಸಂಭ್ರಮಿಸಿದರು. ಇವರಿಬ್ಬರ ಜೊತೆಯಾಟದಲ್ಲಿ ಕೇವಲ 9 ಓವರ್‌ಗಳಲ್ಲಿ ತಂಡವು 94 ರನ್‌ ಸೇರಿಸಿತು.

ಆದರೆ ಹತ್ತನೇ ಓವರ್‌ನಲ್ಲಿ ಅಮೆಲಿಯಾ ಕೆರ್ ಎಸೆತವನ್ನು ಆಡಲು ಮುನ್ನುಗ್ಗಿ ಬೀಟ್ ಆದ ಕಿರಣ್ ಅವರು ಯಷ್ಟಿಕಾ ಭಾಟಿಯಾ ಮಾಡಿದ ಸ್ಟಂಪಿಂಗ್‌ಗೆ ಔಟಾದರು.

ನಂತರದ ಓವರ್‌ನಲ್ಲಿ ಮಧ್ಯಮವೇಗಿ ಐಸಿ ವಾಂಗ್ ಅವರು ತಹಲಿಯಾ ಮೆಕ್‌ಗ್ರಾ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಇನ್ನೊಂದು ಎಸೆತದಲ್ಲಿ ಅಲಿಸಾ ಹೀಲಿ ಅವರು ಬ್ಯಾಕ್‌ವರ್ಡ್ ಪಾಯಿಂಟ್  ಫೀಲ್ಡರ್ ಸೈಕಾ ಇಷಾಕ್ ಅವರಿಗೆ ಸುಲಭ ಕ್ಯಾಚಿತ್ತರು. ಈ ಹಂತದಲ್ಲಿ ಮುಂಬೈ ತಂಡವು ಗೆಲುವಿನ ಹಾದಿಗೆ ಮರಳುವ ವಿಶ್ವಾಸದಲ್ಲಿತ್ತು.

ಆದರೆ, ಅದಕ್ಕೆ ಗ್ರೇಸ್ ಹ್ಯಾರಿಸ್ (ಔಟಾಗದೆ 38; 17ಎ, 4X6, 6X1) ಮತ್ತು ದೀಪ್ತಿ ಶರ್ಮಾ (ಔಟಾಗದೆ 27; 20ಎ)  ಅವಕಾಶ ಕೊಡಲಿಲ್ಲ. ಅವರಿಬ್ಬರೂ ಮುರಿಯದ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 65 ರನ್‌ಗಳನ್ನು ಸೇರಿಸಿದರು. ಅದರಿಂದಾಗಿ ಇನಿಂಗ್ಸ್‌ನಲ್ಲಿ ಇನ್ನೂ 21 ಎಸೆತ ಎಸೆತಗಳು ಬಾಕಿಯಿರುವಾಗಲೇ ಯು.ಪಿ ತಂಡವು ಸಂಭ್ರಮಿಸಿತು.

ಹರ್ಮನ್‌ ವಿಶ್ರಾಂತಿ: ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಸ್ನಾಯುಸೆಳೆತದ ಕಾರಣ ಪಂದ್ಯದಲ್ಲಿ ಆಡಲಿಲ್ಲ. ಅವರ ಬದಲಿಗೆ ನಥಾಲಿ ಶಿವರ್ ಬ್ರಂಟ್ ಅವರು ತಂಡವನ್ನು ಮುನ್ನಡೆಸಿದರು.

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 161 (ಹೆಯಲಿ ಮ್ಯಾಥ್ಯೂಸ್ 55, ಯಷ್ಟಿಕಾ ಭಾಟಿಯಾ 26, ಅಮೆಲಿಯಾ ಕೆರ್ 23, ನಥಾಲಿ ಶಿವರ್ ಬ್ರಂಟ್ 19, ಪೂಜಾ ವಸ್ತ್ರಕರ್ 18, ಐಸಿ ವಾಂಗ್ 15, ಗ್ರೇಸ್ ಹ್ಯಾರಿಸ್ 20ಕ್ಕೆ1) ಯು.ಪಿ. ವಾರಿಯರ್ಸ್: 16.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 163 (ಅಲಿಸಾ ಹೀಲಿ 33, ಕಿರಣ್ ನವಗಿರೆ 57, ಗ್ರೇಸ್ ಹ್ಯಾರಿಸ್ ಔಟಾಗದೆ 38, ದೀಪ್ತಿ ಶರ್ಮಾ ಔಟಾಗದೆ 27, ಐಸಿ ವಾಂಗ್ 30ಕ್ಕೆ2) ಫಲಿತಾಂಶ: ಯು.ಪಿ. ವಾರಿಯರ್ಸ್ ತಂಡಕ್ಕೆ 7 ವಿಕೆಟ್‌ಗಳ ಜಯ.  ಪಂದ್ಯದ ಆಟಗಾರ್ತಿ: ಕಿರಣ್ ನವಗಿರೆ.

ನಾಳೆಯ ಪಂದ್ಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು–ಡೆಲ್ಲಿ ಕ್ಯಾಪಿಟಲ್ಸ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮಹಿಳೆಯರ ಪ್ರೀಮಿಯರ್ ಲೀಗ್ ಪಂದ್ಯ ನಡೆದ ಸಂದರ್ಭದಲ್ಲಿ ಅಭಿಮಾನಿಯೊಬ್ಬ  ಮೈದಾನಕ್ಕೆ ನುಗ್ಗಿದ.  ಪಿಚ್‌ಗೆ ಬರದಂತೆ  ಆತನನ್ನು ಯು.ಪಿ. ವಾರಿಯರ್ಸ್‌ ವಿಕೆಟ್‌ಕೀಪರ್ ಅಲಿಸಾ ಹೀಲಿ ತಳ್ಳಿದರು  – ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಮಹಿಳೆಯರ ಪ್ರೀಮಿಯರ್ ಲೀಗ್ ಪಂದ್ಯ ನಡೆದ ಸಂದರ್ಭದಲ್ಲಿ ಅಭಿಮಾನಿಯೊಬ್ಬ  ಮೈದಾನಕ್ಕೆ ನುಗ್ಗಿದ.  ಪಿಚ್‌ಗೆ ಬರದಂತೆ  ಆತನನ್ನು ಯು.ಪಿ. ವಾರಿಯರ್ಸ್‌ ವಿಕೆಟ್‌ಕೀಪರ್ ಅಲಿಸಾ ಹೀಲಿ ತಳ್ಳಿದರು  – ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ.

ಮೈದಾನಕ್ಕೆ  ನುಗ್ಗಿದ ಅಭಿಮಾನಿ: ಡಬ್ಲ್ಯುಪಿಎಲ್ ಪಂದ್ಯವು ನಡೆಯುತ್ತಿದ್ದ ಸಂದರ್ಭದಲ್ಲಿಯೇ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬ ಮೈದಾನದೊಳಕ್ಕೆ ನುಗ್ಗಿದ ಘಟನೆ ನಡೆಯಿತು. ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಈ ಘಟನೆ ನಡೆಯಿತು. ಡಿ ಕಾರ್ಪೊರೇಟ್ ಗ್ಯಾಲರಿಯಲ್ಲಿದ್ದ ವ್ಯಕ್ತಿಯೊಬ್ಬ  ಬೇಲಿ ದಾಟಿ ಒಳನುಗ್ಗಿದ. ಆತನ ಕೈಯಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಜೆರ್ಸಿ ಇತ್ತು.  ಪಿಚ್‌ನತ್ತ ಧಾವಿಸುತ್ತಿದ್ದ ಆತನನ್ನು ಯು.ಪಿ. ವಾರಿಯರ್ಸ್ ತಂಡದ ವಿಕೆಟ್‌ಕೀಪರ್ ತಡೆಯಲು ಯತ್ನಿಸಿದರು. ನಂತರ  ಭದ್ರತಾ ಸಿಬ್ಬಂದಿಯು ಆತನನ್ನು ವಶಕ್ಕೆ ಪಡೆದು ಹೊರಗೆ ಕರೆದೊಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT