ಶನಿವಾರ, ಆಗಸ್ಟ್ 13, 2022
22 °C

ಖಾಲಿ ಕ್ರೀಡಾಂಗಣದಲ್ಲಿ ಯುವ ಆಟಗಾರರಿಗೆ ಒತ್ತಡ ಕಮ್ಮಿ: ಕ್ಯಾಟಿಚ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಯುವ ಆಟಗಾರರು ಒತ್ತಡರಹಿತರಾಗಿ ಆಡಬಹುದು ಎಂದು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್  (ಐಪಿಎಲ್) ಟೂರ್ನಿಯಲ್ಲಿ ಆಡಲಿರುವ ತಂಡದ ಆಟಗಾರರು ನೆಟ್ಸ್‌ ಆರಂಭಿಸಿದ್ದಾರೆ. ಕ್ಯಾಟಿಚ್ ಮಾರ್ಗದರ್ಶನ ನೀಡುತ್ತಿದ್ದಾರೆ.

‘ಜನರಿಲ್ಲದ ಕ್ರೀಡಾಂಗಣವು ಶಾಂತವಾಗಿರುತ್ತದೆ. ಅದರಿಂದ  ಹೊಸ ಆಟಗಾರರು ಹೆಚ್ಚು ಏಕಾಗ್ರತೆ ಸಾಧಿಸಿಕೊಂಡು ಆಡಲು ಸಾಧ್ಯವಾಗುತ್ತದೆ. ಕಡಿಮೆ ಒತ್ತಡವಿರುತ್ತದೆ’ ಎಂದು ಕ್ಯಾಟಿಚ್ ಆರ್‌ಸಿಬಿಯ ಯೂಟ್ಯೂಬ್‌ ವಾಹಿನಿಯ ‘ಬೋಲ್ಡ್ ಡೈರೀಸ್’ ಕಾರ್ಯಕ್ರಮದಲ್ಲಿ ಹೇಳಿದರು.

‘ಆದರೆ ಅನುಭವಿ ಆಟಗಾರರಿಗೆ ಐಪಿಎಲ್‌ನಂತಹ ಟೂರ್ನಿಯನ್ನು ಖಾಲಿ ಕ್ರೀಡಾಂಗಣದಲ್ಲಿ ಆಡುವುದು ಸವಾಲಿನ ಕೆಲಸವಾಗಲಿದೆ. ಜನದದಟ್ಟಣೆ, ಚಪ್ಪಾಳೆ, ಶಿಳ್ಳೆಗಳ ಸದ್ದು, ಸಂಗೀತದ ಅಬ್ಬರದಲ್ಲಿ ಆಡುವ ರೂಢಿ ಇರುವ ಆಟಗಾರರಿಗೆ ತುಸು ಕಷ್ಟವಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಸ್ವಯಂಪ್ರೇರಣೆ ಮತ್ತು ಏಕಾಗ್ರತೆಗಳಿಂದ ಆಟದಲ್ಲಿ ಲಯ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಮಾನಸಿಕವಾಗಿ ಆಟಗಾರರನ್ನು ಸನ್ನದ್ಧರನ್ನಾಗಿಸುವತ್ತ ನಮ್ಮಿಂದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇವೆ. ಆಟಗಾರರಿಗೂ ಈ ಟೂರ್ನಿಯ ಮಹತ್ವ ಗೊತ್ತಿದೆ. ಕ್ರಿಕೆಟ್‌ ಕ್ಷೇತ್ರದಲ್ಲಿಯೇ ಅತ್ಯಂತ ಪ್ರತಿಷ್ಠಿತ ಲೀಗ್  ಇದು ಎಂಬ ಅರಿವು ಅವರಿಗೆ ಇದೆ. ಅದರಿಂದಾಗಿ ಅವರೆಲ್ಲರೂ ತಮ್ಮ ಸಾಮರ್ಥ್ಯವನ್ನು ಶೇ 100ರಷ್ಟು ವಿನಿಯೋಗಿಸಲು ಪ್ರಯತ್ನಿಸುತ್ತಾರೆ’ ಎಂದು 45 ವರ್ಷದ ಕ್ಯಾಟಿಚ್ ಹೇಳಿದರು. 

ಪ್ರೇಕ್ಷಕರು ತುಂಬಿದ ಕ್ರೀಡಾಂಗಣದಲ್ಲಿ ಅತ್ಯುತ್ಸಾಹದಿಂದ ಆಡುವ ವಿರಾಟ್ ಕೊಹ್ಲಿ ಅಂತಹ ಆಟಗಾರರು ಖಾಲಿ ಕ್ರೀಡಾಂಗಣದಲ್ಲಿ ತುಸು ಒತ್ತಡ ಅನುಭವಿಸುವ ಸಾಧ್ಯತೆ ಇದೆ. ಅವರ ಆಟದ ಮೇಲೆ ಪರಿಣಾಮವಾಗಬಹುದು ಎಂದು ಈಚೆಗೆ ಮಾನಸಿಕ ಸಾಮರ್ಥ್ಯ ವೃದ್ಧಿ ಕೋಚ್ ಪ್ಯಾಡಿ ಆಪ್ಟನ್ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು