ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಅಂಗಳದಲ್ಲಿ ಬೀಸುತಿದೆ ಹೊಸ ಗಾಳಿ

Last Updated 21 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ದುಬೈನಲ್ಲಿ ಈಚೆಗೆ ನಡೆದಿದ್ದ ಏಷ್ಯಾ ಕಪ್ ಫೈನಲ್‌ ಪಂದ್ಯದಲ್ಲಿ ಗೆದ್ದ ಭಾರತ ತಂಡದ ವಿಜಯೋತ್ಸವ ಒಂದು ವಿಶೇಷ ಕಾರಣಕ್ಕೆ ಗಮನ ಸೆಳೆದಿತ್ತು.

ಆ ಟೂರ್ನಿಯಲ್ಲಿ ತಂಡದ ನಾಯಕರಾಗಿದ್ದ ರೋಹಿತ್ ಶರ್ಮಾ ಕಪ್ ಹಿಡಿದು ಸಂಭ್ರಮಿಸುತ್ತಿದ್ದರು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮಹೇಂದ್ರಸಿಂಗ್ ಧೋನಿ, ರೋಹಿತ್ ಕಿವಿಯಲ್ಲಿ ಏನೋ ಉಸುರಿದರು. ತಕ್ಷಣವೇ ಮಂದಹಾಸ ಬೀರಿದ ರೋಹಿತ್ ತಮ್ಮ ಕೈಯಲ್ಲಿದ್ದ ಕಪ್ ಅನ್ನು ಇನ್ನೊಂದು ಬದಿಯಲ್ಲಿದ್ದ ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಅವರ ಕೈಗೆ ನೀಡಿದರು. ಕೇವಲ ಎರಡು ಪ್ರಥಮ ದರ್ಜೆ ಮತ್ತು ಎರಡು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದ ರಾಜಸ್ಥಾನಿ ಹುಡುಗ ಖಲೀಲ್ ಕಣ್ಣುಗಳಲ್ಲಿ ಹನಿಯಾಡಿತ್ತು. ಇದಾಗಿ ಒಂದು ದಿನದ ನಂತರ ಸ್ವತಃ ಖಲೀಲ್ ಈ ವಿಷಯವನ್ನು ಬಹಿರಂಗಪಡಿಸಿದ್ದರು.

ದಶಕಗಳ ಹಿಂದೆ ನಡೆದಿದ್ದ ಇಂತಹ ವಿಜಯೋತ್ಸವದ ಚಿತ್ರಗಳ ಮೇಲೊಮ್ಮೆ ಕಣ್ಣಾಡಿಸಿ ನೋಡಿ. ತಂಡದ ಹಿರಿಯ ಅನುಭವಿಗಳು ಮುಂಚೂಣಿಯಲ್ಲಿರುತ್ತಿದ್ದರು. ಕಪ್ ಹಿಡಿದು ಪೋಸ್ ನೀಡುತ್ತಿದ್ದರು. ಹೊಸದಾಗಿ ಬಂದ ಹುಡುಗರು ಎಷ್ಟೇ ಚೆನ್ನಾಗಿ ಆಡಿದ್ದರು. ಅವರು ಪಕ್ಕದಲ್ಲಿದ್ದು ಚಪ್ಪಾಳೆ ತಟ್ಟುತ್ತಿರುವುದು ಕಾಣುತ್ತಿತ್ತು.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಸೀನಿಯರ್ –ಜೂನಿಯರ್ ಅಂತರ ಅಳಿಸಿ ಹೋಗಿದೆ. ಈಚೆಗೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದು ಬೆಂಚ್‌ನಲ್ಲಿದ್ದ ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ ಕೂಡ ವಾಟರ್‌ ಬಾಯ್ ಆಗಿ ಕಾರ್ಯನಿರ್ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದಕ್ಕೆ ಕಾರಣ ಈಗ ಹೆಚ್ಚಿನ ಸಂಖ್ಯೆಯಲ್ಲಿ ಜೂನಿಯರ್ ಹಂತದ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಅಲ್ಲದೇ ಸಿಕ್ಕ ಅವಕಾಶದಲ್ಲಿಯೇ ಉತ್ತಮವಾಗಿ ಆಡುತ್ತಿದ್ದಾರೆ. ಆಯ್ಕೆ ಸಮಿತಿಯ ಕೆಲಸವನ್ನು ಮತ್ತಷ್ಟು ಕಠಿಣಗೊಳಿಸುತ್ತಿದ್ದಾರೆ!

ನವಪ್ರತಿಭೆಗಳು ಒಂದಿಲ್ಲೊಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀ ಟೂರ್ನಿಗಳಲ್ಲಿ ಮಹತ್ವದ ಸಾಧನೆ ಮಾಡಿ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ. ಇದು ಈಗಾಗಲೇ ತಂಡದಲ್ಲಿರುವ ಅನುಭವಿಗಳಲ್ಲಿ ಅಭದ್ರತೆ ಹುಟ್ಟಿಸಿರುವುದು ಸತ್ಯ. ಅವರು ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಉತ್ತಮವಾಗಿ ಆಡಲೇಬೆಕಾದ ಒತ್ತಡದಲ್ಲಿದ್ದಾರೆ.

ಪದಾರ್ಪಣೆ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಪೃಥ್ವಿ ಶಾ, ಇಂಗ್ಲೆಂಡ್‌ ನೆಲದಲ್ಲಿ ಪದಾರ್ಪಣೆ ಟೆಸ್ಟ್ ಸರಣಿ ಆಡಿ ಶತಕ ಗಳಿಸಿ, ವಿಕೆಟ್‌ಕೀಪಿಂಗ್‌ ನಲ್ಲಿಯೂ ಮಿಂಚಿದ ರಿಷಭ್ ಪಂತ್, ಆಡಿದ ಮೊದಲ ಟೆಸ್ಟ್‌ನಲ್ಲಿಯೇ ಆಲ್‌ರೌಂಡ್ ಸಾಧನೆ ಮಾಡಿದ ಹನುಮವಿಹಾರಿ, ತನ್ನ ಮೊದಲ ಏಕದಿನ ಪಂದ್ಯದಲ್ಲಿ ಗಮನ ಸೆಳೆದ ಖಲೀಲ್ ಅಹಮದ್, ಅವಕಾಶಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ಮಯಂಕ್ ಅಗರವಾಲ್, ಮೊಹಮ್ಮದ್ ಸಿರಾಜ್, ಶುಭಮನ್ ಗಿಲ್, ಗುರುಕೀರತ್ ಸಿಂಗ್ ಮಾನ್, ಕುಲವಂತ ಖೆಜ್ರೋಲಿಯಾ ಅವಂತಹ ಉದಯೋನ್ಮುಖರ ದೊಡ್ಡ ಪಟ್ಟಿ ಬೆಳೆಯುತ್ತದೆ. ಪ್ರತಿಯೊಂದು ಮಾದರಿಗೂ (ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20)ಎರಡೆರಡು ಪ್ರತ್ಯೇಕ ತಂಡಗಳನ್ನು ರಚಿಸುವಷ್ಟು ಆಟಗಾರರು ಈಗ ಇದ್ದಾರೆ. 2019ರತ್ತ ಕಣ್ಣು: ಮುಂದಿನ ವರ್ಷದ ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಗುರಿಯೂ ಈ ಆಟಗಾರರ ಯಶಸ್ಸಿನ ಹಿಂದಿರುವ ಗುಟ್ಟುಗಳಲ್ಲಿ ಒಂದು.

ರಾಹುಲ್ ಪ್ರಭಾವಳಿ: ಕಳೆದ ಒಂದು ದಶಕದಿಂದ ರಾಷ್ಟ್ರೀಯ ತಂಡದ ಬೆಂಚ್‌ ಸ್ಟ್ರೇಂಥ್‌ ಬಲಪಡಿಸುವ ಕಾರ್ಯ ನಡೆಯುತ್ತಿದೆ. ಮಹೇಂದ್ರಸಿಂಗ್ ಧೋನಿ ನಾಯಕರಾದ ನಂತರ ಇದಕ್ಕೆ ಹೆಚ್ಚು ಒತ್ತು ನೀಡಿದ್ದರು. ಅದಕ್ಕಾಗಿಯೇ ಕೆಲವು ಸೀನಿಯರ್ ಆಟಗಾರರ ಕೆಂಗಣ್ಣಿಗೂ ಗುರಿಯಾಗಿದ್ದರು. ಆದರೆ ರಾಹುಲ್ ದ್ರಾವಿಡ್ ಅವರು ಜೂನಿಯರ್ ತಂಡಗಳಿಗೆ ಮುಖ್ಯ ಕೋಚ್ ಆದ ನಂತರ ಈ ಕನಸು ನನಸಾಗಿದೆ.. ಜೂನಿಯರ್ ಮತ್ತು ಯೂತ್ ವಿಭಾಗದ ತಂಡಗಳು ಏಷ್ಯಾ ಕಪ್, ವಿಶ್ವಕಪ್ ಟೂರ್ನಿಗಳಲ್ಲಿ ಪಾರಮ್ಯ ಸಾಧಿಸುತ್ತಿವೆ. ಅದರ ಫಲವಾಗಿ ಹೊಸಬರು ಬೆಳಕಿಗೆ ಬರುತ್ತಿದ್ದಾರೆ. ಅಲ್ಲದೇ ‘ಎ’ ತಂಡಗಳಿಗೂ ರಾಹುಲ್ ಮಾರ್ಗದರ್ಶನ ಲಭಿಸುತ್ತಿರುವುದು ಪ್ಲಸ್‌ ಪಾಯಿಂಟ್ ಆಗಿದೆ. ಪೃಥ್ವಿ, ಶುಭಮನ್ ಗಿಲ್, ಪಂತ್, ಅಂಕಿತ್ ಭಾವ್ನೆ, ಮಯಂಕ್ ಮಾರ್ಕಂಡೆ, ಖಲೀಲ್ ಮತ್ತಿತರ ಆಟಗಾರರು ರಾಹುಲ್ ಗರಡಿಯಲ್ಲಿ ಹುರಿಗೊಂಡವರೇ ಆಗಿದ್ದಾರೆ. ಟೆಸ್ಟ್ ಮತ್ತ ಪ್ರಥಮ ದರ್ಜೆ ಪಂದ್ಯಗಳಲ್ಲಿ ಹೆಚ್ಚು ಗುಣಮ್ಟ್ಟದ ಸಾಮರ್ಥ್ಯ ತೋರುವಂತೆಹ ಆಟಗಾರರನ್ನು ಸಿದ್ಧಗೊಳಿಸಲು ರಾಹುಲ್ ಒತ್ತು ನೀಡುತ್ತಿರುವುದು ಫಲ ನೀಡಿದೆ. ದೀರ್ಘ ಮಾದರಿಯಲ್ಲಿ ಯಶಸ್ವಿಯಾಗುವ ಆಟಗಾರ ಬೇರೆಲ್ಲ ಮಾದರಿಯಲ್ಲಿಯೂ ಚೆನ್ನಾಗಿ ಆಡಬಲ್ಲರು.
ಆಯ್ಕೆ ಸಮಿತಿಯ ಮೇಲೆ ಒತ್ತಡ: ಯುವ ಅಟಗಾರರ ದಂಡು ಬೆಳೆದಂತೆ ರಾಷ್ಟ್ರೀಯ ತಂಡದಲ್ಲಿರುವ ಅನುಭವಿಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಅವರು ನಿರಂತರವಾಗಿ ಉತ್ತಮ ಫಾರ್ಮ್‌ ನಿರ್ವಹಣೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಫಿಟ್‌ನೆಸ್ ಮತ್ತು ಹೊಸ ಕೌಶಲಗಳ ಕಲಿಕೆಯ ಬಗ್ಗೆ ಅನುಭವಿಗಳೂ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಸೀನಿಯರ್ ಮತ್ತು ಜೂನಿಯರ್‌ ಆಟಗಾರರ ನಡುವೇ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇದು ಆಯ್ಕೆ ಸಮಿತಿ ಮೇಲೆ ಒತ್ತಡ ಹೆಚ್ಚಿಸುತ್ತಿದೆ. ಆದ್ದರಿಂದಾಗಿ ಆಯ್ಕೆ ವಿಧಾನಗಳು ಬದಲಾಗಿವೆ. ಈಗ ಆಟಗಾರರ ರನ್‌ , ವಿಕೆಟ್ ಗಳಿಕೆ ಮತ್ತು ಆಡಿದ ಪಂದ್ಯಗಳ ಸಂಖ್ಯೆ ಮಾತ್ರ ಗಮನಾರ್ಹವಲ್ಲ.

ಇದರೊಂದಿಗೆ ಯೋ ಯೋ ಟೆಸ್ಟ್‌, ಫಿಟ್‌ನೆಸ್ ಪರೀಕ್ಷೆಗಳನ್ನೂ ಆಟಗಾರರು ದಾಟಬೇಕಿದೆ. ಸ್ಲಾಟ್‌ವೈಸ್ ಸೆಲೆಕ್ಷನ್ ಕೂಡ ಮಾಡಲಾಗುತ್ತದೆ. ಉದಾಹರಣೆಗೆ; ಓಪನಿಂಗ್ ಬ್ಯಾಟ್ಸ್‌ಮನ್, ಒನ್‌ಡೌನ್, ಮಿಡಲ್ ಆರ್ಡರ್‌, ಲೋವರ್ ಮಿಡಲ್ ಆರ್ಡರ್‌ ವಿಭಾಗಗಳು ಬ್ಯಾಟಿಂಗ್‌ನಲ್ಲಿವೆ. ಬೌಲಿಂಗ್‌ನಲ್ಲಿ ಮಧ್ಯಮವೇಗ, ಡೆತ್‌ ಓವರ್ ಪರಿಣತಿ, ಎಡಗೈ ಸ್ಪಿನ್ನರ್, ಆಫ್‌ಸ್ಪಿನ್ನರ್, ಚೈನಾಮೆನ್ ವಿಭಾಗಗಳು ಪ್ರಚಲಿತವಾಗುತ್ತಿವೆ. ಅಲ್ಲದೇ ಇವರೆಲ್ಲರೂ ಚುರುಕಿನ ಫೀಲ್ಡರ್‌ಗಳಾಗಿರುವುದು ಅಪೇಕ್ಷಣೀಯ. ಅಲ್ಲದೇ ಅವರು ತಂಡದ ಸಹ ಅಟಗಾರರು ಮತ್ತು ಸಿಬ್ಬಂದಿಯ ಜೊತೆಗೆ ನಿರ್ವಹಿಸುವ ಬಾಂಧವ್ಯವೂ ಪರಿಗಣಿತವಾಗುತ್ತದೆ. ಈ ನಿಟ್ಟಿನಲ್ಲಿ ಆಟಗಾರರಿಗೆ ತರಬೇತಿ ನೀಡುವ ವೃತ್ತಿಪರ ಕಂಪೆನಿಗಳು ಇವೆ. ಮಾರ್ಗದರ್ಶಕರೂ ಇದ್ದಾರೆ.

ಈ ನಡುವೆ ಈ ಸ್ಪರ್ಧೆಗೆ ತಕ್ಕಂತೆ ಉತ್ತಮ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡುವಲ್ಲಿ ಸಮಿತಿ ಎಡವುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಸಮಿತಿಯ ಮುಖ್ಯಸ್ಥ ಮತ್ತು ಸದಸ್ಯರಿಗೆ ಅನುಭವದ ಕೊರತೆ ಇದೆ. ಅವರು ತಮ್ಮ ಸಮಯದಲ್ಲಿ ಆಡಿದ ಪಂದ್ಯಗಳಿಗಿಂತ ಹೆಚ್ಚಿಗೆ ಈಗಿನ ರಾಷ್ಟ್ರೀಯ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಹೇಂದ್ರಸಿಂಗ್ ಧೋನಿ ಅವರು ಆಡಿದ್ದಾರೆ. ಅವರ ಅರ್ಹತೆಯನ್ನು ಅಳೆಯುವ ಅರ್ಹತೆ ಸಮಿತಿಗೆ ಇದೆಯೇ ಎಂದು ಹಿರಿಯ ಕ್ರಿಕೆಟಿಗ ಸೈಯದ್ ಕಿರ್ಮಾನಿ ಈಚೆಗೆ ಪ್ರಶ್ನಿಸಿದ್ದರು.

ಆಟಗಾರರ ನಡುವೆಯೇ ಈ ರೀತಿಯ ಕಠಿಣ ಸ್ಪರ್ಧೆ ಹೆಚ್ಚುತ್ತಿರುವುದು ಉತ್ತಮ ಲಕ್ಷಣವೂ ಹೌದು. ಇನ್ನು ಏಳು ತಿಂಗಳ ನಂತರ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಬಳಗವನ್ನು ಕಟ್ಟಲು ಇದು ಅನುಕೂಲಕರ. ಹೊಸ ಗಾಳಿಯ ಅಹ್ಲಾದತೆಯಲ್ಲಿ ಹೊಸ ಸಾಧನೆ ಚಿಗುರುವ ಭರವಸೆ ಮೂಡಿಸಿದೆ.

*
ಈಗ ಆಯ್ಕೆ ಮಾಡುವುದು ಸುಲಭವಲ್ಲ. ಪ್ರತಿಯೊಂದು ರಾಜ್ಯ ತಂಡದಿಂದಲೂ ಉತ್ತಮ ಆಟಗಾರರು ಸಾಲು ಸಾಲಾಗಿ ಬರುತ್ತಿದ್ದಾರೆ. ಉತ್ತಮರಲ್ಲಿಯೇ ಉತ್ತಮರನ್ನು ಹುಡುಕುವ ಸವಾಲು ಇದೆ. ಈ ಪ್ರಕ್ರಿಯೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಿದೆ. ಆದ್ದರಿಂದ ಒಂದೆರಡು ವೈಫಲ್ಯಗಳನ್ನು ಕಂಡ ತಕ್ಷಣ ಅವರನ್ನು ಕಡೆಗಣಿಸುವಂತಿಲ್ಲ. ತರಬೇತಿ, ಮಾರ್ಗದರ್ಶನ ಮತ್ತು ಇನ್ನಷ್ಟು ಅವಕಾಶಗಳನ್ನು ನೀಡಬೇಕಾಗುತ್ತದೆ. ಅವರ ಮೊದಲಿನ ಸಾಧನೆಗಳನ್ನೂ ಪರಿಗಣಿಸಬೇಕಾಗುತ್ತದೆ.
–ಎಂ.ಎಸ್. ಕೆ. ಪ್ರಸಾದ್ (ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT