ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಯುವ ಮಿಂಚು

Last Updated 8 ಡಿಸೆಂಬರ್ 2019, 20:45 IST
ಅಕ್ಷರ ಗಾತ್ರ

ಇಪ್ಪತ್ತನಾಲ್ಕು ದಿನಗಳ ಕಾಲ ಭಾರತದ ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್‌ನ ರೋಚಕತೆಯನ್ನು ಉಣಬಡಿಸಿದ್ದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ತೆರೆ ಬಿದ್ದಿದೆ.

ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ. ರವಿಚಂದ್ರನ್‌ ಅಶ್ವಿನ್‌, ದಿನೇಶ್‌ ಕಾರ್ತಿಕ್‌, ವಿಜಯ ಶಂಕರ್‌, ಪಾರ್ಥಿವ್‌ ಪಟೇಲ್‌ ಅವರಂತಹ ಘಟಾನುಘಟಿಗಳ ಆಟಕ್ಕೆ ಸಾಕ್ಷಿಯಾಗಿದ್ದ ಈ ಟೂರ್ನಿಯಲ್ಲಿ ಹೊಸಬರೂ ಹೊಳೆದಿದ್ದಾರೆ.

ಅಬ್ಬರದ ಬ್ಯಾಟಿಂಗ್‌ ಮತ್ತು ಅಮೋಘ ಬೌಲಿಂಗ್‌ ಮೂಲಕ ಅಭಿಮಾನಿಗಳ ಮನಸ್ಸನ್ನು ಮುದಗೊಳಿಸಿದ್ದ ಯುವ ಆಟಗಾರರು, ತಾವು ಪ್ರತಿನಿಧಿಸಿದ ತಂಡಗಳಿಗೆ ಗೆಲುವಿನ ಉಡುಗೊರೆಯನ್ನೂ ನೀಡಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಭಾರತ ತಂಡಕ್ಕೆ ಆಸ್ತಿಗಳಾಗುವ ಸಂದೇಶವನ್ನೂ ರವಾನಿಸಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿಯ ಆಟಗಾರರ ಹರಾಜಿಗೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲೇ, ಭುಜಬಲದ ಪರಾಕ್ರಮ ಮೆರೆದಿರುವ ಇವರು ಐಪಿಎಲ್‌ ಫ್ರಾಂಚೈಸ್‌ಗಳ ಚಿತ್ತ ತಮ್ಮತ್ತ ಹರಿಯುವಂತೆಯೂ ಮಾಡಿದ್ದಾರೆ. ಈ ಸಲದ ಹರಾಜಿನಲ್ಲಿ ಬೇಡಿಕೆ ಕುದುರಿಸಿಕೊಳ್ಳುವ ವಿಶ್ವಾಸದಲ್ಲಿರುವ ಭರವಸೆಯ ತಾರೆಗಳ ಬಗೆಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ರೋಹನ್‌ ಕದಂ

ಹಿಂದಿನ ಆವೃತ್ತಿಯ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ಅತೀ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಕರ್ನಾಟಕದ ರೋಹನ್‌ ಕದಂ, ಈ ಆವೃತ್ತಿಯಲ್ಲೂ ಮಿನುಗಿದ್ದಾರೆ. ಏಳು ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದ ಅವರು 131.63 ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 258ರನ್‌ ಬಾರಿಸಿದ್ದಾರೆ.

ಮುಂಬೈ ಎದುರಿನ ‍ಪಂದ್ಯದಲ್ಲಿ ಧಾರವಾಡದ ಈ ಆಟಗಾರನಿಂದ ಮೂಡಿಬಂದಿದ್ದ ವೀರಾವೇಶದ ಹೋರಾಟ ಅಭಿಮಾನಿಗಳ ಮನಗೆದ್ದಿತ್ತು. ಕರ್ನಾಟಕ ತಂಡ 19ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಪರಿಸ್ಥಿತಿಯಲ್ಲೂ ರಟ್ಟೆ ಅರಳಿಸಿ ಆಡಿದ್ದ ರೋಹನ್‌ 47 ಎಸೆತಗಳಲ್ಲಿ 71ರನ್‌ ಬಾರಿಸಿ ಮನೀಷ್‌ ಪಾಂಡೆ ಬಳಗದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿದ್ದರು. ತಮಿಳುನಾಡು ವಿರುದ್ಧದ ಫೈನಲ್‌ನಲ್ಲೂ ಅವರು ಗರ್ಜಿಸಿದ್ದರು.

ಎಂ.ಶಾರೂಕ್‌ ಖಾನ್‌
ಎಂ.ಶಾರೂಕ್‌ ಖಾನ್‌

ಎಂ.ಶಾರೂಕ್‌ ಖಾನ್‌

ಶಾರೂಕ್‌ ಖಾನ್‌ ಅಂದಾಕ್ಷಣ ಥಟ್ಟನೇ ನೆನ‍ಪಾಗುವುದು ಬಾಲಿವುಡ್‌ ನಟ. ನಾವು ಇಲ್ಲಿ ಹೇಳಲು ಹೊರಟಿರುವುದು ಸೂ‍ಪರ್‌ ಸ್ಟಾರ್‌ ಶಾರೂಕ್‌ ಬಗ್ಗೆ ಅಲ್ಲ. ತಮಿಳುನಾಡಿನ ಹೊಸ ಅಲೆಯ ಕ್ರಿಕೆಟಿಗನ ಕುರಿತು.

ಚೆನ್ನೈನ 24 ವರ್ಷದ ಶಾರೂಕ್‌, ಈ ಋತುವಿನ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಸಂಚಲನ ಮೂಡಿಸಿದ್ದರು. ರಾಜಸ್ಥಾನ ವಿರುದ್ಧ 39 ಎಸೆತಗಳಲ್ಲಿ ಅಜೇಯ 48ರನ್‌ ಬಾರಿಸಿದ್ದ ಅವರು, ಬಂಗಾಳ ವಿರುದ್ಧದ ಹಣಾಹಣಿಯಲ್ಲೂ ಆರ್ಭಟಿಸಿದ್ದರು. 45 ಎಸೆತಗಳಲ್ಲಿ ಅಜೇಯ 69 ರನ್‌ ದಾಖಲಿಸಿದ್ದ ಈ ಆಲ್‌ ರೌಂಡರ್‌, ತಮಿಳುನಾಡು ತಂಡ ಫೈನಲ್‌ ಪ್ರವೇಶಿಸಲು ನೆರವಾಗಿದ್ದರು. ಮುಷ್ತಾಕ್‌ ಅಲಿ ಟ್ರೋಫಿಯಲ್ಲೂ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದ ಅವರು 128 ರನ್‌ ಗಳಿಸಿ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಿದ್ದರು.

ಆರ್‌. ಸಾಯಿ ಕಿಶೋರ್‌
ಆರ್‌. ಸಾಯಿ ಕಿಶೋರ್‌

ಆರ್‌. ಸಾಯಿ ಕಿಶೋರ್‌

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ‘ನೆಟ್‌ ಬೌಲರ್’ ಆಗಿದ್ದ ಸಾಯಿ ಕಿಶೋರ್‌, ಈಗ ತಮಿಳುನಾಡು ತಂಡದ ಸ್ಪಿನ್‌ ಬೌಲಿಂಗ್‌ನ ಶಕ್ತಿಯಾಗಿ ರೂಪುಗೊಂಡಿದ್ದಾರೆ.

‘ಪವರ್‌ ಪ್ಲೇ’ಯಲ್ಲಿ ಬಿಗುವಿನ ದಾಳಿ ನಡೆಸಿ ಎದುರಾಳಿ ಬ್ಯಾಟ್ಸ್‌ಮನ್‌ಗಳ ರನ್‌ ಗಳಿಕೆಗೆ ಕಡಿವಾಣ ಹಾಕುವ ಕಲೆಯನ್ನು 23 ವರ್ಷದ ಸಾಯಿ, ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಈ ಬಾರಿಯ ಮುಷ್ತಾಕ್‌ ಅಲಿ ಟೂರ್ನಿಯೇ ಸಾಕ್ಷಿ.

ಆರು ಅಡಿ ಎತ್ತರದ ಈ ಆಜಾನುಬಾಹು ಆಟಗಾರ, ಈ ಸಲದ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್‌ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 12 ಪಂದ್ಯಗಳನ್ನಾಡಿದ್ದ ಅವರು 10.40 ಸರಾಸರಿಯಲ್ಲಿ 20 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಪೈಕಿ 15 ವಿಕೆಟ್‌ಗಳನ್ನು ‘ಪವರ್‌ ಪ್ಲೇ’ಯಲ್ಲೇ ಪಡೆದಿರುವುದು ವಿಶೇಷ.

ವಿರಾಟ್‌ ಸಿಂಗ್‌
ವಿರಾಟ್‌ ಸಿಂಗ್‌

ವಿರಾಟ್‌ ಸಿಂಗ್‌

ಕ್ರಿಕೆಟ್‌ ಲೋಕ ಕಂಡ ಶ್ರೇಷ್ಠ ಆಟಗಾರರಲ್ಲಿ ಮಹೇಂದ್ರ ಸಿಂಗ್‌ ಧೋನಿ ಕೂಡ ಒಬ್ಬರು. ಧೋನಿ ಅವರನ್ನೇ ಆದರ್ಶವಾಗಿಟ್ಟುಕೊಂಡು ಬೆಳೆದ ಆಟಗಾರ ವಿರಾಟ್‌ ಸಿಂಗ್‌.

ಜಾರ್ಖಂಡ್‌ನ ಎಡಗೈ ಬ್ಯಾಟ್ಸ್‌ಮನ್‌ ವಿರಾಟ್‌, ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ರನ್‌ ಹೊಳೆ ಹರಿಸಿದ್ದರು. 10 ಇನಿಂಗ್ಸ್‌ಗಳಲ್ಲಿ ಅಂಗಳಕ್ಕಿಳಿದಿದ್ದ ಅವರು 57.16ರ ಸರಾಸರಿಯಲ್ಲಿ 343ರನ್‌ ಬಾರಿಸಿದ್ದರು. ಇದರಲ್ಲಿ ಮೂರು ಅರ್ಧಶತಕಗಳೂ ಸೇರಿದ್ದವು. ನವೆಂಬರ್‌ 22ರಂದು ನಡೆದಿದ್ದ ಸೂಪರ್‌ ಲೀಗ್‌ ಪಂದ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ಆ ಹಣಾಹಣಿಯಲ್ಲಿ ಕರ್ನಾಟಕದ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿ ಕಾಡಿದ್ದು ಇದೇ ವಿರಾಟ್‌. 44 ಎಸೆತಗಳಲ್ಲಿ ಅಜೇಯ 76ರನ್‌ ಬಾರಿಸಿದ್ದ ಅವರು ಮನೀಷ್‌ ಪಾಂಡೆ ಬಳಗದ ಗೆಲುವಿನ ಹಾದಿಯನ್ನು ಕಠಿಣಗೊಳಿಸಿಬಿಟ್ಟಿದ್ದರು.

ದೇವಧರ್‌ ಟ್ರೋಫಿಯಲ್ಲೂ ಎದುರಾಳಿ ಬೌಲರ್‌ಗಳಿಗೆ ‘ವಿರಾಟ’ ರೂಪ ತೋರಿದ್ದರು. ಇಂಡಿಯಾ ‘ಬಿ’ ಎದುರಿನ ಪಂದ್ಯದಲ್ಲಿ ಇಂಡಿಯಾ ‘ಸಿ’ ತಂಡ 126ರನ್‌ಗಳಿಸುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಛಲದಿಂದ ಹೋರಾಡಿದ್ದ ವಿರಾಟ್‌ 96 ಎಸೆತಗಳಲ್ಲಿ 76ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ರವಿ ಬಿಷ್ಣೋಯ್‌
ರವಿ ಬಿಷ್ಣೋಯ್‌

ರವಿ ಬಿಷ್ಣೋಯ್‌

ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡದ ಪರ ಆಡುವ ಅವಕಾಶ ಪಡೆದಿರುವ ರಾಜಸ್ಥಾನದ ಈ ಲೆಗ್‌ ಸ್ಪಿನ್ನರ್‌, ಯೂತ್‌ ಕ್ರಿಕೆಟ್‌ನಲ್ಲಿ ಈಗಾಗಲೇ ಛಾಪು ಒತ್ತಿದ್ದಾರೆ.

ಏಳು ಯೂತ್‌ ಏಕದಿನ ಪಂದ್ಯಗಳನ್ನಾಡಿ 12 ವಿಕೆಟ್‌ ಕಬಳಿಸಿರುವ ರವಿ, ಈ ಋತುವಿನ ವಿಜಯ್‌ ಹಜಾರೆ ಮತ್ತು ಮುಷ್ತಾಕ್‌ ಅಲಿ ಟೂರ್ನಿಗಳಲ್ಲೂ ಕೈಚಳಕ ತೋರಿದ್ದರು.

ಮುಷ್ತಾಕ್‌ ಅಲಿ ಟೂರ್ನಿಯ ತಮಿಳುನಾಡು ವಿರುದ್ಧದ ಸೆಮಿಫೈನಲ್‌ನಲ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು ಅಜೇಯ 22 ರನ್‌ ದಾಖಲಿಸಿದ್ದರು. ನಾಲ್ಕು ಓವರ್ ಬೌಲಿಂಗ್‌ ಕೂಡ ಮಾಡಿದ್ದರು.

ರೂಷ್‌ ಕಲಾರಿಯಾ
ರೂಷ್‌ ಕಲಾರಿಯಾ

ರೂಷ್‌ ಕಲಾರಿಯಾ

ಆಲ್‌ರೌಂಡ್‌ ಸಾಮರ್ಥ್ಯದ ಮೂಲಕ ಈಗಾಗಲೇ ದೇಶಿ ಕ್ರಿಕೆಟ್‌ನಲ್ಲಿ ಹೆಜ್ಜೆಗುರುತು ಮೂಡಿಸಿರುವ ಗುಜರಾತ್‌ನ ಈ ಆಟಗಾರ ಹೋದ ರಣಜಿ ಟ್ರೋಫಿಯಲ್ಲಿ ಗುಜರಾತ್‌ ಪರ ಗರಿಷ್ಠ ವಿಕೆಟ್‌ ಗಳಿಸಿದ ಸಾಧನೆ ಮಾಡಿದ್ದರು.

ಈ ಸಲದ ವಿಜಯ್‌ ಹಜಾರೆ ಟ್ರೋಫಿಯಲ್ಲೂ ಮಿಂಚಿದ್ದ 26 ವರ್ಷದ ಕಲಾರಿಯಾ 11 ಪಂದ್ಯಗಳಿಂದ 21 ವಿಕೆಟ್‌ ಉರುಳಿಸಿದ್ದರು.

ಹೊಸ ಚೆಂಡಿನೊಂದಿಗೆ ದಾಳಿ ನಡೆಸುವಾಗ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸಿಂಹಸ್ವಪ್ನವಾಗಿ ಕಾಡುವ ಈ ಆಟಗಾರ ಈ ಬಾರಿಯ ಮುಷ್ತಾಕ್‌ ಅಲಿ ಟ್ರೋಫಿಯಲ್ಲೂ ಜಾದೂ ಮಾಡಿದ್ದರು. ಐದು ಪಂದ್ಯಗಳಿಂದ ಎಂಟು ವಿಕೆಟ್‌ ಕಬಳಿಸಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT