ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಪ್ರಕಾರದ ಕ್ರಿಕೆಟ್‌ಗೆ ವಿಶ್ವಕಪ್ ವಿಜೇತ ಆಟಗಾರ ಯೂಸುಫ್ ಪಠಾಣ್ ವಿದಾಯ

Last Updated 26 ಫೆಬ್ರುವರಿ 2021, 14:57 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಎರಡು ಬಾರಿಯ ವಿಶ್ವಕಪ್ ವಿಜೇತ ಆಟಗಾರ ಯೂಸುಫ್ ಪಠಾಣ್, ಅಂತರ ರಾಷ್ಟ್ರೀಯ ಸೇರಿದಂತೆ ಎಲ್ಲ ಪ್ರಕಾರದ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಯೂಸುಫ್, ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳು, ತಂಡಗಳು, ತರಬೇತುದಾರರು ದೇಶದೆಲ್ಲ ಜನರಿಗೆ ಬೆಂಬಲ ಹಾಗೂ ಪ್ರೀತಿ ತೋರಿರುವುದಕ್ಕೆ ಧನ್ಯವಾದಗಳನ್ನು ಹೇಳಬಯಸುವುದಾಗಿ ತಿಳಿಸಿದರು.

ನನ್ನ ಜೀವನದ ಕ್ರಿಕೆಟ್ ಇನ್ನಿಂಗ್ಸ್‌ಗೆ ಪೂರ್ಣ ವಿರಾಮ ಹಾಕುವ ಸಮಯ ಬಂದಿದೆ. ಎಲ್ಲ ಪ್ರಕಾರದ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸುವುದಾಗಿ ತಿಳಿಸಿದರು.

ಭಾರತಕ್ಕಾಗಿ ಎರಡು ವಿಶ್ವಕಪ್‌ಗಳನ್ನು ಗೆದ್ದಿರುವುದು ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿರುವುದು ನನ್ನ ವೃತ್ತಿಜೀವನದ ಅತ್ಯುತ್ತಮ ಕ್ಷಣಗಳು ಎಂದು ಉಲ್ಲೇಖಿಸಿದ್ದಾರೆ.

ಮಹೇಂದ್ರಸಿಂಗ್ ಧೋನಿ ನಾಯಕರಾಗಿದ್ದಾಗ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದೆ. ಐಪಿಎಲ್‌ನಲ್ಲಿ ಶೇನ್ ವಾರ್ನ್ ಮತ್ತು ರಣಜಿ ಟೂರ್ನಿಯಲ್ಲಿ ಜೇಕಬ್ ಮಾರ್ಟಿನ್ ಅವರ ನಾಯಕತ್ವದಲ್ಲಿ ಚೊಚ್ಚಲ ಪಂದ್ಯಗಳನ್ನು ಆಡಿದ್ದೆ. ನನ್ನಲ್ಲಿ ನಾನು ವಿಶ್ವಾಸವಿಡುವುದನ್ನು ಕಲಿಸಿದವರು ಅವರೆಲ್ಲರೂ. ಬೆಳವಣಿಗೆಯಲ್ಲಿ ಅವರ ಪಾತ್ರ ದೊಡ್ಡದು. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ‘ ಎಂದು ಬರೋಡಾದ ಯೂಸುಫ್ ಹೇಳಿದ್ದಾರೆ.

’ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಗೌತಮ್ ಗಂಭೀರ್ ಜೊತೆಗೆ ಎರಡು ಬಾರಿ ಟ್ರೋಫಿ ಜಯಿಸಿದೆವು. ಸದಾಕಾಲ ನನ್ನ ಸಾಧನೆಗೆ ತಮ್ಮ ಇರ್ಫಾನ್ ಪಠಾಣ್ ಬೆನ್ನೆಲುಬಾಗಿದ್ದವರು. ಜೀವನದ ನೋವು, ನಲಿವಿನ ಎಲ್ಲ ಸಂದರ್ಭಗಳಲ್ಲಿಯೂ ಇರ್ಫಾನ್ ನನ್ನೊಂದಿಗಿದ್ದಾರೆ‘ ಎಂದು ಸ್ಮರಿಸಿದ್ದಾರೆ.

’ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಬರೋಡಾ ಕ್ರಿಕೆಟ್ ಸಂಸ್ಥೆಗಳಿಗೆ ಆಭಾರಿಯಾಗಿರುವೆ. ನನ್ನ ರಾಜ್ಯ ಮತ್ತು ದೇಶಕ್ಕಾಗಿ ಆಡುವ ಅವಕಾಶ ಕೊಟ್ಟ ಎಲ್ಲರಿಗೂ ಕೃತಜ್ಞನಾಗಿದ್ದೇನೆ‘ ಎಂದು ಬರೆದಿದ್ದಾರೆ.

’ಇನ್ನು ಮುಂದೆಯೂ ಕ್ರಿಕೆಟ್‌ನೊಂದಿಗೆ ಸದಾ ನಂಟು ಉಳಿಸಿಕೊಳ್ಳುತ್ತೇನೆ. ಭವಿಷ್ಯದಲ್ಲಿಯೂ ಯುವ ಆಟಗಾರರಿಗೆ ಉತ್ತೇಜನ ನೀಡುತ್ತೇನೆ. ಕ್ರಿಕೆಟ್‌ಗೆ ಮರಳಿ ಕೊಡುವ ಹೊತ್ತು ಇದು‘ ಎಂದು ಯೂಸುಫ್ ಹೇಳಿದ್ದಾರೆ.

ಸ್ಪೋಟಕ ಶೈಲಿಯ ಬಲಗೈ ಬ್ಯಾಟ್ಸ್‌ಮನ್ ಮತ್ತು ಆಫ್‌ಸ್ಪಿನ್ನರ್ ಯುಸೂಫ್ ಅವರನ್ನು ಕಳೆದೆರಡು ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಾವ ತಂಡವೂ ಖರೀದಿಸಿರಲಿಲ್ಲ.

ಬಲಗೈ ಸ್ಫೋಟಕ ಬ್ಯಾಟಿಂಗ್ ಹಾಗೂ ಆಫ್ ಸ್ಪಿನ್ ಬೌಲಿಂಗ್ ಮೂಲಕ ಪ್ರಭಾವಿ ಆಲ್‌ರೌಂಡರ್ ಎನಿಸಿಕೊಂಡಿರುವ ಯೂಸುಫ್ ಭಾರತ ತಂಡವನ್ನು 57 ಏಕದಿನ ಹಾಗೂ 22 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

2007ರ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದಾರೆ.

ಏಕದಿನದಲ್ಲಿ 810 ಹಾಗೂ ಟಿ20 ಕ್ರಿಕೆಟ್‌ನಲ್ಲಿ 236 ರನ್ ಗಳಿಸಿದ್ದು, ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 46 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

38ರ ಹರೆಯದ ಯೂಸುಫ್ ಪಠಾಣ್ ಏಕದಿನದಲ್ಲಿ ಎರಡು ಶತಕ ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.

2008ನೇ ಇಸವಿಯಲ್ಲಿ ರಾಜಸ್ಥಾನ ರಾಯಲ್ಸ್ ಚೊಚ್ಚಲ ಐಪಿಎಲ್ ಗೆಲುವಿನಲ್ಲೂ ಪಠಾಣ್ ನಿರ್ಣಾಯಕ ಪಾತ್ರ ವಹಿಸಿದ್ದರು. ಬಳಿಕ 2012 ಹಾಗೂ 2014ರಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಚಾಂಪಿಯನ್ ಪಟ್ಟ ಆಲಂಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT