ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಮುಂಬೈಗೆ ವಿಜಯ್‌ ಹಜಾರೆ ಗರಿ

ಮಿಂಚಿದ ತಾರೆ: ನವದೀಪ್ ಸೈನಿ ಉತ್ತಮ ಬೌಲಿಂಗ್‌ಗೆ ಸಿಗದ ಫಲ
Last Updated 20 ಅಕ್ಟೋಬರ್ 2018, 18:18 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಅಂಗಳದಲ್ಲಿ ಕಮರಿ ಹೋಗುವ ಹಂತದಲ್ಲಿದ್ದ ಮುಂಬೈ ತಂಡದ ಕನಸಿಗೆ ಆದಿತ್ಯ ತಾರೆ ಮತ್ತು ಸಿದ್ಧೇಶ್ ಲಾಡ್ ಅವರು ಮರುಜೀವ ತುಂಬಿದರು. ಅದರಿಂದಾಗಿ ಮುಂಬೈ ತಂಡವು ವಿಜಯ್ ಹಜಾರೆ ಟ್ರೋಫಿಗೆ ಶನಿವಾರ ಮುತ್ತಿಟ್ಟಿತ್ತು.

ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮುಂಬೈ ತಂಡವು 4 ವಿಕೆಟ್‌ಗಳಿಂದ ದೆಹಲಿ ತಂಡವನ್ನು ಮಣಿಸಿತು. ಒಂದು ದಶಕದ ನಂತರ ಮುಂಬೈ ಪ್ರಶಸ್ತಿ ಗೆದ್ದಿತು. ಆದರೆ ಎರಡನೇ ಪ್ರಶಸ್ತಿ ಜಯಿಸುವ ದೆಹಲಿ ತಂಡದ ಕನಸು ನುಚ್ಚುನೂರಾಯಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ನಾಯಕ ಶ್ರೇಯಸ್ ಅಯ್ಯರ್ ನಿರ್ಧಾರವನ್ನು ಧವಳ್ ಕುಲಕರ್ಣಿ (30ಕ್ಕೆ3) ಮತ್ತು ಶಿವಂ ದುಬೆ (29ಕ್ಕೆ3) ಸಮರ್ಥಿಸಿಕೊಂಡರು. ಇದರಿಂದಾಗಿ ದೆಹಲಿ ತಂಡವು 45.4 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 177 ರನ್‌ ಗಳಿಸಿತು. ಹಸಿರು ಗರಿಕೆಗಳಿದ್ದ ಪಿಚ್‌ನಲ್ಲಿ ಬೌಲರ್‌ಗಳು ಮಿಂಚಿದರು. ಆದರೆ ಈ ಸಣ್ಣ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು ಗೆಲ್ಲಲು ಪ್ರಯಾಸಪಡಬೇಕಾಯಿತು.

ದೆಹಲಿಯ ಮಧ್ಯಮವೇಗಿ ನವದೀಪ್ ಸೈನಿ (53ಕ್ಕೆ3) ಆರಂಭದಲ್ಲಿಯೇ ಆಘಾತ ನೀಡಿದರು. ಮುಂಬೈ ತಂಡವು 40 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಆದಿತ್ಯ (71; 89ಎಸೆತ, 13ಬೌಂಡರಿ, 1ಸಿಕ್ಸರ್) ಮತ್ತು ಸಿದ್ಧೇಶ್ ಲಾಡ್ (48; 68ಎಸೆತ, 4ಬೌಂಡರಿ, 2 ಸಿಕ್ಸರ್) ಐದನೇ ವಿಕೆಟ್‌ ಜೊತೆಯಾಟದಲ್ಲಿ 105 ರನ್‌ಗಳನ್ನು ಸೇರಿಸಿದರು.

ಗೆಲುವಿಗೆ 32 ರನ್‌ಗಳ ಅಗತ್ಯವಿದ್ದಾಗ ಆದಿತ್ಯ ಎಲ್‌ಬಿಡಬ್ಲ್ಯು ಆಗಿ ನಿರ್ಗಮಿಸಿದರು. ಲಾಡ್ ಜೊತೆಗೂಡಿದ ಶಿವಂ ದುಬೆ (ಔಟಾಗದೆ 19; 12ಎಸೆತ, 1ಬೌಂಡರಿ, 2ಸಿಕ್ಸರ್) ಪಟಪಟನೆ ರನ್‌ ಗಳಿಸಿದರು. ಗೆಲುವಿಗೆ ಒಂದು ರನ್‌ ಮಾತ್ರ ಬೇಕಿದ್ದಾಗ ಸಿಕ್ಸರ್ ಎತ್ತಲು ಪ್ರಯತ್ನಿಸಿದ ಲಾಡ್ ಅವರು ಧ್ರುವ ಶೋರೆಗೆ ಕ್ಯಾಚಿತ್ತರು.

ಇದರಿಂದಾಗಿ ಮುಂಬೈ ತಂಡಕ್ಕೆ ಗೆಲುವು ಸಾಧ್ಯವಾಯಿತು. ತಾರೆ ಮತ್ತು ಲಾಡ್‌ಗೆ ಅದೃಷ್ಟವೂ ಜೊತೆಗೂಡಿತ್ತು. ಕೆಲವು ಸಂದರ್ಭಗಳಲ್ಲಿ ಕೂದಲೆಳೆಯ ಅಂತರದಲ್ಲಿ ಔಟಾಗುವುದರಿಂದ ತಪ್ಪಿಸಿಕೊಂಡರು. ಶಿವಂತಂಡವನ್ನು ಗೆಲುವಿನ ದಡ ಸೇರಿಸಿದರು.

**

ಪವನ್‌ ನೇಗಿಗೆ ಗಾಯ:ದೆಹಲಿ ತಂಡದ ಆಲ್‌ರೌಂಡರ್ ಪವನ್ ನೇಗಿ ಅವರು ಬ್ಯಾಟಿಂಗ್ ಮಾಡುವಾಗ ಕೈಗೆ ಚೆಂಡು ಬಡಿದು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು.

ದೆಹಲಿ ತಂಡವು ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ಅಲ್ಪಮೊತ್ತಕ್ಕೆ ಔಟಾಗುವ ಭೀತಿ ಎದುರಿಸುವ ಸಂದರ್ಭದಲ್ಲಿ ಉತ್ತಮ ಕಾಣಿಕೆ ನೀಡಿದ ಪವನ್ ನೇಗಿ (21; 19ಎಸೆತ, 2ಬೌಂಡರಿ, 1ಸಿಕ್ಸರ್) ಮತ್ತು ಸುಬೋಧ್ ಭಾಟಿ (25; 22ಎಸೆತ, 1ಬೌಂಡರಿ, 3 ಸಿಕ್ಸರ್) ಕೆಳಕ್ರಮಾಂಕದಲ್ಲಿ ಉತ್ತಮ ಕಾಣಿಕೆ ನೀಡಿದರು. ದೆಹಲಿ ಬೌಲಿಂಗ್‌ ಪಡೆಗೂ ನೇಗಿ ಕೊರತೆ ಕಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT