ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಕ್ಕೊಳಗಾದ ಆಸ್ಟ್ರೇಲಿಯಾ ಆಟಗಾರ ಬ್ಯಾಂಕ್ರಾಫ್ಟ್‌ ಇನ್ನು ಯೋಗ ಶಿಕ್ಷಕ

Last Updated 22 ಡಿಸೆಂಬರ್ 2018, 19:20 IST
ಅಕ್ಷರ ಗಾತ್ರ

ಸಿಡ್ನಿ: ಚೆಂಡು ವಿರೂಪ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಆಸ್ಟ್ರೇಲಿಯಾದ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಇನ್ನು ಮುಂದೆ ಯೋಗ ಶಿಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇದಕ್ಕಾಗಿ ಕ್ರಿಕೆಟ್‌ ಆಟವನ್ನು ತ್ಯಜಿಸಲಿದ್ದಾರೆ. ಶನಿವಾರ ಅವರು ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ. ಅವರು ಈ ಕುರಿತು ಬರೆದಿರುವ ಪತ್ರವನ್ನು ವೆಸ್ಟ್ ಆಸ್ಟ್ರೇಲಿಯನ್ ಸುದ್ದಿಪತ್ರಿಕೆಯು ಪ್ರಕಟಿಸಿದೆ. ತಮ್ಮನ್ನು ತಾವೇ ಉದ್ದೇಶಿಸಿರುವ ಶೈಲಿಯಲ್ಲಿ (ಸ್ವಗತ) ಪತ್ರವನ್ನು ಬರೆದುಕೊಂಡಿದ್ದಾರೆ.

ಡಿಯರ್ಕ್ಯಾಮರಾನ್ ಎಂಬ ಒಕ್ಕಣೆಯೊಂದಿಗೆ ಆರಂಭವಾಗುವ ಪತ್ರದಲ್ಲಿ, ‘ನಿನ್ನ ಕ್ರಿಕೆಟ್ ಜೀವನದಲ್ಲಿ ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಗಿದ್ದ ಜಸ್ಟಿನ್ ಲ್ಯಾಂಗರ್ ಮತ್ತು ವೆಸ್ಟ್ ಆಸ್ಟ್ರೇಲಿಯಾದ ಆ್ಯಡಂ ವೋಗ್ಸ್‌ ಅವರ ಬೆಂಬಲ ಮಹತ್ವದ್ದು. ಅವರೇ ಪ್ರೇರಣೆ. ಬಹುಶಃನಿನಗೆ ಕ್ರಿಕೆಟ್‌ ಸರಿಹೊಂದುವುದಿಲ್ಲ ಎನಿಸುತ್ತದೆ. ಯೋಗದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ. ಅದನ್ನೇ ಮುಂದುವರಿಸುವುದರ ಜೊತೆಗೆ ಬೇರೆಯವರಿಗೂ ಹೇಳಿಕೊಡು’

‘ನಿಷೇಧಕ್ಕೊಳಗಾದ ಬಹಳಷ್ಟು ನೊಂದಿದ್ದೆ. ಹತಾಶೆಗೊಳಗಾಗಿದ್ದೆ. ಆಗ ಕುಟುಂಬ ಮತ್ತು ಸ್ನೇಹಿತರು ಕೈಹಿಡಿದು ಚೈತನ್ಯ ತುಂಬಿದರು. ಮೆಲ್ಬರ್ನ್‌ನಲ್ಲಿ ಯೋಗ, ಧ್ಯಾನ ಕಲಿತಿದ್ದು ಒಳ್ಳೆಯದೇ ಆಯಿತು. ಅದನ್ನು ನಿರಂತರ ರೂಢಿಸಿಕೊಳ್ಳುವುದರ ಜೊತೆಗೆ ಶಿಕ್ಷಕನಾಗಿ ಮುಂದುವರಿ. ಆದರೂ ಕ್ರಿಕೆಟ್ ನಂಟು ಬಿಡುವುದು ಕಷ್ಟ’ ಎಂದು ಬರೆದಿದ್ದಾರೆ.

ಅವರು ಮುಂಬರಲಿರುವ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವುದಾಗಿಯೂ ಉಲ್ಲೇಖಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಕ್ಯಾಮರಾನ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್‌ ಪಂದ್ಯದಲ್ಲಿ ಚೆಂಡನ್ನು ಸ್ಯಾಂಡ್‌ ಪೇಪರ್‌ನಲ್ಲಿ ಉಜ್ಜಿ ವಿರೂಪಗೊಳಿಸಿದ ಆರೋಪದಲ್ಲಿ ಸಿಕ್ಕಿಬಿದ್ದಿದ್ದರು. ಅವರಿಗೆ ಕ್ರಿಕೆಟ್‌ನಲ್ಲಿ ಭಾಗವಹಿಸದಂತೆ ಒಂಬತ್ತು ತಿಂಗಳುಗಳ ನಿಷೇಧ ಹೇರಲಾಗಿತ್ತು. ಈ ಪ್ರಕರಣದಲ್ಲಿ ತಂಡದ ನಾಯಕ ಸ್ಟೀವನ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಕೂಡ ನಿಷೇಧಿಸಲಾಗಿದೆ.

26 ವರ್ಷದ ಕ್ಯಾಮರಾನ್ ಅವರು, ಎಂಟು ಟೆಸ್ಟ್‌ ಗಳನ್ನು ಆಡಿದ್ದಾರೆ. ಅದರಲ್ಲಿ 402 ರನ್‌ ಗಳಿಸಿದ್ದಾರೆ. 2017ರಲ್ಲಿ ಬ್ರಿಸ್ಟೆನ್‌ನಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಒಂದು ಟ್ವೆಂಟಿ–20 ಪಂದ್ಯದಲ್ಲಿಯೂ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT