ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಏಷ್ಯನ್ ಕಪ್ ಕಪ್ ಫೈನಲ್: ಕತಾರ್‌ಗೆ, ಜೋರ್ಡಾನ್ ಸವಾಲು

Published 10 ಫೆಬ್ರುವರಿ 2024, 15:48 IST
Last Updated 10 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ದೋಹಾ: ಕತಾರ್ ತಂಡ, ಎಎಫ್‌ಸಿ ಏಷ್ಯನ್ ಕಪ್ ಫುಟ್‌ಬಾಲ್ ಟೂರ್ನಿಗೆ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿತ್ತು. ಆದರೆ ಟೂರ್ನಿಗೆ ಮೊದಲ ಕೆಲವು ಪಂದ್ಯಗಳಲ್ಲಿ ಅಂಥ ಉತ್ತಮ ಪ್ರದರ್ಶನ ನೀಡದ ಕಾರಣ ಆತಿಥೇಯ ತಂಡ ಪ್ರಶಸ್ತಿಗೆ ‘ಹಾಟ್‌ ಫೆವರೀಟ್‌’ ಎನಿಸಿರಲಿಲ್ಲ. ಆದರೆ ನಿರೀಕ್ಷೆ ಮೀರಿ ಸರ್ವಾಂಗೀಣ ಪ್ರದರ್ಶನ ನೀಡಿರುವ ತಂಡ ಸತತ ಎರಡನೇ ಸಲ ಫೈನಲ್ ತಲುಪಿದ್ದು ಪ್ರಶಸ್ತಿಗಾಗಿ ಭಾನುವಾರ ಜೋರ್ಡಾನ್ ತಂಡವನ್ನು ಎದುರಿಸಲಿದೆ.

ತವರಿನ ಫುಟ್‌ಬಾಲ್‌ ಅಭಿಮಾನಿಗಳ ಏಕಪಕ್ಷೀಯ ಬೆಂಬಲವನ್ನೂ ಪಡೆದಿರುವ ಕತಾರ್, ಫೈನಲ್ ಹಾದಿಯ ಪ್ರತಿಯೊಂದು ಪಂದ್ಯದಲ್ಲಿ ಗೋಲುಗಳನ್ನು ಗಳಿಸಿದೆ. ತಂಡ ಟಿನ್ಟಿನ್ ಮಾರ್ಕ್ವೆಝ್ ಲೋಪೆಜ್ ತರಬೇತಿಯಲ್ಲಿದೆ.

‘ಈ ತಂಡದ ಭಾಗವಾಗಿರುವುದಕ್ಕೆ ಸಂತಸವೆನಿಸುತ್ತಿದೆ. ನಾವು ಫೈನಲ್ ತಲುಪುತ್ತೇವೆಂದು ತಿಂಗಳ ಹಿಂದೆ ಯಾರಿಗೂ ನಿರೀಕ್ಷೆ ಇರಲಿಲ್ಲ. ತಂಡದಲ್ಲಿನ ಒಗ್ಗಟ್ಟು ಈಗಿನ ಸಾಧನೆಗೆ ಕಾರಣ’ ಎಂದು ಕತಾರ್ ತಂಡದ ನಾಯಕ ಹಸನ್ ಅಲ್ ಹೇದೋಸ್ ಹೇಳುತ್ತಾರೆ.

ಇನ್ನೊಂದೆಡೆ, ನಿರೀಕ್ಷೆ ಮೀರಿ ಮೊದಲ ಸಲ ಫೈನಲ್ ತಲುಪಿರುವ ಜೋರ್ಡಾನ್‌ಗೆ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿದ್ದ ಈ ತಂಡ ನಾಕೌಟ್‌ಗೆ ಸ್ಥಾನ ಪಡೆದ ನಂತರ ಆಟದ ಗುಣಮಟ್ಟವನ್ನು ಎತ್ತರಿಸಿದ್ದು ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದೆ. ಫೈನಲ್ ಹಾದಿಯಲ್ಲಿ ಪ್ರಬಲ ಇರಾಕ್, ಮೂರು ಸಲದ ವಿಜೇತ ದಕ್ಷಿಣ ಕೊರಿಯಾ ತಂಡಗಳನ್ನು ಹೊರದೂಡಿದೆ.

ಜೋರ್ಡಾನ್ ಸಾಧನೆ ಕೋಚ್ ಆಗಿರುವ ಮೊರೊಕ್ಕೊದ ಹುಸೇನ್ ಅಮ್ಮೋಟ ಅವರ ಪಾಲಿಗೆ ಸಂದ ಶ್ರೇಯಸ್ಸು ಕೂಡ. 2023ರಲ್ಲಿ ತಂಡ ಏಳು ಪಂದ್ಯಗಳಲ್ಲಿ (ಇವುಗಳಲ್ಲಿ 6 ಸೋಲು) ಗೆಲುವು ಕಂಡಿರದೇ ಹೋಗಿದ್ದಕ್ಕೆ ಅವರು ತೀವ್ರ ಟೀಕೆಗೆ ಒಳಗಾಗಿದ್ದರು. ಹೀಗಾಗಿ ಅವರಿಗೆ ಈ ಬಾರಿಯ ಟೂರ್ನಿ ಸವಾಲಿನದ್ದಾಗಿತ್ತು.

‘ತಂಡದ ಪ್ರದರ್ಶನದಿಂದ ಸಂತೃಪ್ತನಾಗಿದ್ದೇನೆ. ಏಕೆಂದರೆ ವೈಯಕ್ತಿಕವಾಗಿ ನನ್ನ ಪಾಲಿಗೆ ಈ ಬಾರಿಯ ಟೂರ್ನಿ ಸವಾಲಿನದ್ದೂ ಆಗಿತ್ತು’ ಎನ್ನುತ್ತಾರೆ ಅಮ್ಮೋಟ.

128 ಗೋಲು:

ಈ ಬಾರಿಯ ಏಷ್ಯಾ ಕಪ್‌ ಚಾಂಪಿಯನ್‌ಷಿಪ್‌ನಲ್ಲಿ 50 ಪಂದ್ಯಗಳಿಂದ 128 ಗೋಲುಗಳು ಬಂದಿವೆ. ಫೈನಲ್ ತಲುಪಿರುವ ಜೋರ್ಡಾನ್, ಇರಾನ್ ಮತ್ತು ಜಪಾನ್ ಜೊತೆ ಜಂಟಿ ಅತ್ಯಧಿಕ (12) ಗೋಲುಗಳನ್ನು ಗಳಿಸಿದೆ. ಕತಾರ್ ಮತ್ತು ದಕ್ಷಿಣ ಕೊರಿಯಾ (ತಲಾ 11) ಎರಡನೇ ಸ್ಥಾನದಲ್ಲಿವೆ.

ರಕ್ಷಣಾ ವಿಭಾಗದಲ್ಲಿ ಜೋರ್ಡಾನ್ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಒಂದೂ ಗೋಲು ನೀಡದೇ ಉತ್ತಮ ಸಾಧನೆ ಮೆರೆದಿದೆ. ಇಡೀ ಟೂರ್ನಿಯಲ್ಲಿ ಐದು ಗೋಲುಗಳನ್ನು ಬಿಟ್ಟುಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT