ಚೆನ್ನೈಯಿನ್‌ಗೆ ಚೊಚ್ಚಲ ಜಯದ ಕನಸು

ಗುರುವಾರ , ಏಪ್ರಿಲ್ 25, 2019
22 °C
ಎಎಫ್‌ಸಿ ಕಪ್‌ ಫುಟ್‌ಬಾಲ್‌: ಇಂದು ಮನಂಗ್‌ ಮರ್ಷ್ಯಾಂಗಡಿ ಎದುರು ಹೋರಾಟ

ಚೆನ್ನೈಯಿನ್‌ಗೆ ಚೊಚ್ಚಲ ಜಯದ ಕನಸು

Published:
Updated:
Prajavani

ಅಹಮದಾಬಾದ್‌: ಸೂಪರ್‌ ಕಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲವಾಗಿದ್ದ ಚೆನ್ನೈಯಿನ್‌ ಎಫ್‌ಸಿ ತಂಡ ಈಗ ಹೊಸ ಸವಾಲಿಗೆ ಸಜ್ಜಾಗಿದೆ.

ಎಎಫ್‌ಸಿ ಕಪ್‌ನಲ್ಲಿ ಚೊಚ್ಚಲ ಜಯದ ಕನಸು ಕಾಣುತ್ತಿರುವ ಈ ತಂಡ ಬುಧವಾರದ ಹೋರಾಟದಲ್ಲಿ ನೇಪಾಳದ ಮನಂಗ್‌ ಮರ್ಷ್ಯಾಂಗಡಿ ಎದುರು ಹೋರಾಡಲಿದೆ.

2017–18ನೇ ಸಾಲಿನ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಚಾಂಪಿಯನ್‌ ಆಗಿದ್ದ ಚೆನ್ನೈಯಿನ್‌, ಈ ಸಲದ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿತ್ತು. ಹೋದ ವಾರ ಮುಗಿದ ಸೂಪರ್‌ ಕಪ್‌ನಲ್ಲಿ ತಂಡ ಪುಟಿದೆದ್ದಿತ್ತು. ಫೈನಲ್‌ನಲ್ಲಿ ಎಫ್‌ಸಿ ಗೋವಾ ಎದುರು 0–2 ಗೋಲುಗಳಿಂದ ಸೋತು ರನ್ನರ್ಸ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಹಿಂದಿನ ಈ ನಿರಾಸೆಗಳನ್ನು ಮರೆಯಲು ಚೆನ್ನೈಯಿನ್‌ಗೆ ಈಗ ಉತ್ತಮ ಅವಕಾಶ ಸಿಕ್ಕಿದೆ.

ಜಾನ್‌ ಗ್ರೆಗೋರಿ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಚೆನ್ನೈಯಿನ್‌ ತಂಡ ಏಪ್ರಿಲ್‌ ಮೂರರಂದು ನಡೆದಿದ್ದ ‘ಇ’ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಮಿನರ್ವ ಪಂಜಾಬ್‌ ಎದುರು ಡ್ರಾ ಮಾಡಿಕೊಂಡಿತ್ತು.

ಟ್ರಾನ್ಸ್‌ಸ್ಟೇಡಿಯಾ ಅರೇನಾದಲ್ಲಿ ನಡೆಯುವ ಹೋರಾಟದಲ್ಲಿ ನೇಪಾಳ ಲೀಗ್‌ನ ಚಾಂಪಿಯನ್‌ ಮನಂಗ್‌ ತಂಡವನ್ನು ಮಣಿಸಲು ಆತಿಥೇಯರು ಸನ್ನದ್ಧರಾಗಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ಧನಪಾಲ್‌ ಗಣೇಶ್‌ ಮತ್ತು ಜೆರಿ ಲಾಲ್ರಿಂಜುವಾಲ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಇವರ ಸೇರ್ಪಡೆಯಿಂದ ತಂಡದ ಶಕ್ತಿ ಹೆಚ್ಚಿದೆ.

ಸ್ಟ್ರೈಕರ್‌ಗಳಾದ ಜೆಜೆ ಲಾಲ್‌ಪೆಕ್ಲುವಾ ಮತ್ತು ಸಿ.ಕೆ.ವಿನೀತ್‌ ಮಿಂಚುವ ವಿಶ್ವಾಸದಲ್ಲಿದ್ದಾರೆ. ಮಿಡ್‌ಫೀಲ್ಡರ್‌ ಅನಿರುದ್ಧ್‌ ಥಾಪಾ, ಮೇಲ್‌ಸನ್‌ ಆಲ್ವೆಸ್‌ ಕೂಡಾ ತಂಡದ ಆಧಾರಸ್ಥಂಭಗಳಾಗಿದ್ದಾರೆ.

ಎಎಫ್‌ಸಿ ಕಪ್‌ನಲ್ಲಿ ಆಡುತ್ತಿರುವ ನೇಪಾಳದ ಮೊದಲ ಕ್ಲಬ್‌ ಎಂಬ ಹೆಗ್ಗಳಿಕೆ ಹೊಂದಿರುವ ಮನಂಗ್‌ ತಂಡ ಕೂಡಾ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ಈ ತಂಡ ಆರಂಭಿಕ ಹೋರಾಟದಲ್ಲಿ ಅಬಹನಿ ಲಿಮಿಟೆಡ್‌ ಢಾಕಾ ಎದುರು 0–1 ಗೋಲಿನಿಂದ ಸೋತಿತ್ತು. ಈ ತಂಡದಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ಚೆನ್ನೈಯಿನ್‌ ತಂಡ ಎದುರಾಳಿಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ಮಿನರ್ವಕ್ಕೆ ಅಬಹನಿ ಸವಾಲು: ಢಾಕಾದಲ್ಲಿ ನಡೆಯುವ ಇನ್ನೊಂದು ಪಂದ್ಯದಲ್ಲಿ ಐ ಲೀಗ್‌ ಚಾಂಪಿಯನ್‌ ಮಿನರ್ವ ಪಂಜಾಬ್‌ ತಂಡ ಆತಿಥೇಯ ಅಬಹನಿ ಲಿಮಿಟೆಡ್‌ ಢಾಕಾ ಸವಾಲು ಎದುರಿಸಲಿದೆ.

ಬಂಗಬಂಧು ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ಈ ಹೋರಾಟದಲ್ಲಿ ಆತಿಥೇಯರಿಗೆ ಆಘಾತ ನೀಡಲು ಮಿನರ್ವ ತಂಡ ಕಾತರವಾಗಿದೆ.

ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ ಪ್ರಶಸ್ತಿ ಜಯಿಸಿರುವ ಅಬಹನಿ ಕೂಡಾ ತವರಿನ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಲು ಕಾಯುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !