ಗೆಲುವಿನ ಹಳಿಗೆ ಮರಳಲು ಎಟಿಕೆಎಂಬಿ ಕಾತರ

ಮಡಗಾಂವ್: ಗೆಲುವಿನ ಲಯಕ್ಕೆ ಮರಳಲು ಕಾತರಿಸುತ್ತಿರುವ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಹೈದರಾಬಾದ್ ಎಫ್‌ಸಿಯನ್ನು ಎದುರಿಸಲಿದೆ. ಇಲ್ಲಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಎಟಿಕೆಎಂಬಿ ತಂಡವು ಈ ವಾರದ ಆರಂಭದಲ್ಲಿ ಜಮ್ಶೆಡ್‌ಪುರ ಎಫ್‌ಸಿ ಎದುರು ಮಣಿಯುವ ಮೂಲಕ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ. ಅದಕ್ಕೂ ಮೊದಲು ಸತತ ಮೂರು ಪಂದ್ಯಗಳನ್ನು ತಂಡ ಗೆದ್ದುಕೊಂಡಿತ್ತು. ಸದ್ಯ ಅದು ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡಕ್ಕಿಂತ ಮೂರು ಪಾಯಿಂಟ್ಸ್ ಹಿಂದಿದೆ.
ಹೈದರಾಬಾದ್ ಎಫ್‌ಸಿ ತಂಡವು ಟೂರ್ನಿಯ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿತ್ತು. ಬಳಿಕ ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಸದ್ಯ ಆ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಎಟಿಕೆಎಂಬಿ ತಂಡದ ರಾಯ್‌ಕೃಷ್ಣ ಅವರು ಟೂರ್ನಿಯಲ್ಲಿ ಇದುವರೆಗೆ ನಾಲ್ಕು ಗೋಲು ದಾಖಲಿಸಿ ಅದ್ಭುತ ಲಯದಲ್ಲಿದ್ದಾರೆ. ಹೈದರಾಬಾದ್ ಪರ ಅರಿದಾನೆ ಸಂಟಾನ ಅವರು ಮೂರು ಪಂದ್ಯಗಳಲ್ಲಿ ಆಡಿ ಎರಡು ಗೋಲು ಗಳಿಸಿದ್ದಾರೆ.
ತಂಡವು ಮೊದಲ ಸೋಲು ಕಂಡ ಬಳಿಕ ಎಟಿಕೆಎಂಬಿ ಕೋಚ್ ಅಂಟೋನಿಯೊ ಹಬಾಸ್ ಎಚ್ಚೆತ್ತುಕೊಂಡಿದ್ದು, ಹೆಚ್ಚಿನ ಆಟಗಾರರು ಉತ್ತಮ ಆಟವಾಡಿ ಗೆಲುವಿಗೆ ಕಾಣಿಕೆ ನೀಡಬೇಕು ಎಂದಿದ್ದಾರೆ.
ಅರಿದಾನೆ ಅವರ ಮೇಲೆ ಹೆಚ್ಚು ಅವಲಂಬಿತವಾಗಿರುವ ಹೈದರಾಬಾದ್ ತಂಡವು, ಇನ್ನಷ್ಟು ಆಕ್ರಮಣಕಾರಿ ಆಟವಾಡಬೇಕಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.