ಮಂಗಳವಾರ, ಆಗಸ್ಟ್ 16, 2022
28 °C
ಪ್ಲೇ ಆಫ್ ಹಂತದ ಮೊದಲ ಲೆಗ್‌ನ ಪಂದ್ಯದಲ್ಲಿ ಸೋಲು

ಎಎಫ್‌ಸಿ ಕಪ್ ಫುಟ್‌ಬಾಲ್: ಬೆಂಗಳೂರು ಎಫ್‌ಸಿ ಹಾದಿ ಕಠಿಣ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಾಲಿ, ಮಾಲ್ಡಿವ್ಸ್: ಸತತ ವೈಫಲ್ಯದಿಂದ ಬಳಲುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಎಎಫ್‌ಸಿ ಕಪ್ ಪ್ಲೇಆಫ್ ಹಂತದ ಮೊದಲ ಲೆಗ್‌ನಲ್ಲಿ ಮುಗ್ಗರಿಸಿದೆ. ಮಾಲ್ಡಿವ್ಸ್ ರಾಷ್ಟ್ರೀಯ ಫುಟ್‌ಬಾಲ್ ಅಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ ಸ್ಥಳೀಯ ಮಜಿಯಾ ರಿಕ್ರಿಯೇಷನ್ ಕ್ಲಬ್‌ಗೆ ಮಣಿಯಿತು.

ದ್ವಿತೀಯಾರ್ಧದಲ್ಲಿ ಮೂರು ಗೋಲುಗಳು ದಾಖಲಾದವು. ಮಜಿಯಾ 2–1ರಲ್ಲಿ ಜಯಭೇರಿ ಮೊಳಗಿಸಿತು. 64ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಇಬ್ರಾಹಿಂ ಮಹುದೀ ಆತಿಥೇಯರ ಪರ ಖಾತೆ ತೆರೆದರು. ಏಳು ನಿಮಿಷಗಳ ನಂತರ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ನೀಲಿ ಪ್ರವಾಸಿ ತಂಡಕ್ಕೆ ಸಮಬಲ ಗಳಿಸಿಕೊಟ್ಟರು. ಆದರೆ 80ನೇ ನಿಮಿಷದಲ್ಲಿ ಕಾರ್ನೆಲಿಯಸ್ ಸ್ಟಿವರ್ಟ್ ಗಳಿಸಿದ ಗೋಲು ಮಜಿಯಾ ತಂಡಕ್ಕೆ ಗೆಲುವಿನ ಉಡುಗೊರೆ ಕೊಟ್ಟಿತು.

ಗುಂಪು ಹಂತದ ಅರ್ಹತೆಗಾಗಿ ನಡೆಯುತ್ತಿರುವ ಎರಡು ಲೆಗ್‌ಗಳ ಹಣಾಹಣಿಯ ಕೊನೆಯ ಪಂದ್ಯ ಮುಂದಿನ ಬುಧವಾರ ಬೆಂಗಳೂರಿನಲ್ಲಿ ನಡೆಯಲಿದ್ದು ಬಿಎಫ್‌ಸಿ ಆ ಪಂದ್ಯದಲ್ಲಿ ಉತ್ತಮ ಅಂತರದಿಂದ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಭೂತಾನ್‌ನ ಪಾರೊ ಎಫ್‌ಸಿ ವಿರುದ್ಧ ಒಟ್ಟಾರೆ 10–1 ಗೋಲುಗಳ ಮುನ್ನಡೆಯೊಂದಿಗೆ ಪ್ಲೇ ಆಫ್‌ಗೆ ಪ್ರವೇಶಿಸಿದ್ದ ಬಿಎಫ್‌ಸಿ ಇಲ್ಲಿ ಒತ್ತಡದಲ್ಲೇ ಕಣಕ್ಕೆ ಇಳಿದಿತ್ತು. ಗಾಯದಿಂದ ಗುಣಮುಖರಾಗದ ಸುನಿಲ್ ಚೆಟ್ರಿ ಬದಲಿಗೆ ಶೆಂಬೊಯ್ ಹಾಕಿಪ್ ಹೆಗಲಿಗೆ ನಾಯಕತ್ವವನ್ನು ವಹಿಸಲಾಗಿತ್ತು. ಸುರೇಶ್ ವಾಂಗ್ಜಂ ಅಮಾನತಿನಲ್ಲಿರುವುದರಿಂದ ಲಿಯಾನ್ ಆಗಸ್ಟಿನ್ ಚೊಚ್ಚಲ ಪಂದ್ಯ ಆಡಿದರು.

ಮಜಿಯಾ ತಂಡ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಗಾಯಗೊಂಡ ಅಜಾದುಲ್ಲ ಅಬ್ದುಲ್ಲ ಅಂಗಣ ತೊರೆದರು. ಆದರೂ ಆಕ್ರಮಣಕಾರಿ ಆಟವಾಡಿದ ತಂಡಕ್ಕೆ 40ನೇ ನಿಮಿಷದಲ್ಲಿ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಆದರೆ ಇಬ್ರಾಹಿಂ ಐಶಮ್ ಒದ್ದ ಚೆಂಡನ್ನು ತಡೆಯುವಲ್ಲಿ ಗುರುಪ್ರೀತ್ ಸಿಂಗ್ ಸಂಧು ಯಶಸ್ವಿಯಾದರು. ಕೆಲವೇ ನಿಮಿಷಗಳಲ್ಲಿ ಪೆರ್ಡೊಮೊ ಅವರ ಮುನ್ನಡೆಯನ್ನು ಎದುರಾಳಿ ಗೋಲ್‌ಕೀಪರ್ ಒವಾಯ್ಸ್ ಅಜಿಜಿ ತಡೆದರು.

ದ್ವಿತೀಯಾರ್ಧದಲ್ಲಿ ಆಗಸ್ಟಿನ್ ಬದಲಿಗೆ ಉದಾಂತ ಸಿಂಗ್ ಇಳಿದರು. ಆದರೆ ಇದಕ್ಕೆ ಫಲ ಸಿಗಲಿಲ್ಲ. ಪಾರ್ಟಲು ಉತ್ತಮ ಅವಕಾಶವೊಂದನ್ನು ಕೈಚೆಲ್ಲಿದರು. ಆದರೆ 64ನೇ ನಿಮಿಷದಲ್ಲಿ ಮಜಿಯಾ ತಂಡದ ಇಬ್ರಾಹಿಂ ಯಶಸ್ಸು ಕಂಡರು. ಶೆಂಬೊಯ್ ಬದಲಿಗೆ ದೇಶಾನ್ ಬ್ರೌನ್‌ ಅವರನ್ನು ಕಣಕ್ಕೆ ಇಳಿಸಿದ ಬಿಎಫ್‌ಸಿಗೆ 71ನೇ ನಿಮಿಷದಲ್ಲಿ ನೀಲಿ ಸಮಬಲ ಗಳಿಸಿಕೊಟ್ಟರು. ಕೊನೆಯ ಹಂತದಲ್ಲಿ ಬಿಎಫ್‌ಸಿ ಆಟಗಾರರು ಬಳಲಿದಂತೆ ಕಂಡುಬಂದರು. ಇದರ ಲಾಭ ಪಡೆದುಕೊಂಡ ಮಜಿಯಾ 80ನೇ ನಿಮಿಷದಲ್ಲಿ ಗೋಲು ದಾಖಲಿಸಿ ಗೆಲುವಿನ ಕೇಕೆ ಹಾಕಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು