ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಡರ್ಬಿಯಲ್ಲಿ ಬಿಎಫ್‌ಸಿಗೆ ಜಯದ ನಿರೀಕ್ಷೆ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್ ಫುಟ್‌ಬಾಲ್ ಕ್ಲಬ್ ವಿರುದ್ಧ ಪಂದ್ಯ
Last Updated 3 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಮೊದಲ ಪಂದ್ಯದಲ್ಲಿ ಆತೀಥೇಯರ ವಿರುದ್ಧ 2–2ರಲ್ಲಿ ಡ್ರಾ ಮತ್ತು ನಂತರದ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿ ವಿರುದ್ಧ ಗೋಲು ರಹಿತ ನೀರಸ ಡ್ರಾ. ಇಂಥ ಪರಿಸ್ಥಿತಿಯಿಂದಾಗಿ ಚಿಂತೆಗೆ ಈಡಾಗಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್‌ (ಐಎಸ್ಎಲ್) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ.

ಇಲ್ಲಿನ ಜಿಎಂಸಿ ಕ್ರೀಡಾಂಗಣಲ್ಲಿ ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ತಂಡಕ್ಕೆ ಚೆನ್ನೈಯಿನ್ ಎಫ್‌ಸಿ ಎದುರಾಳಿ. ಮೊದಲ ಪಂದ್ಯದಲ್ಲಿ ಜೆಮ್ಶೆಡ್‌ಪುರ ವಿರುದ್ಧ 2–1ರ ಜಯ ಸಾಧಿಸಿರುವ ಚೆನ್ನೈಯಿನ್‌ ನಂತರ ಕೇರಳ ಬ್ಲಾಸ್ಟರ್ಸ್ ಎದುರು ಗೋಲುರಹಿತ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಹೀಗಾಗಿ ಆ ತಂಡಕ್ಕೆ ಲಯಕ್ಕೆ ಮರಳುವ ಕನಸು. ಹೀಗಾಗಿ ’ದಕ್ಷಿಣ ಡರ್ಬಿ’ ಎಂದೇ ಹೇಳಲಾಗುವ ಈ ಎರಡು ತಂಡಗಳ ನಡುವಿನ ಹಣಾಹಣಿ ಕುತೂಹಲಕ್ಕೆ ಕೆರಳಿಸಿದೆ.

ಹಿಂದಿನ ಎರಡು ಪಂದ್ಯಗಳಲ್ಲಿ ಒಂದು ಗೋಲು ಮಾತ್ರ ಬಿಟ್ಟುಕೊಟ್ಟಿರುವ ಚೆನ್ನೈಯಿನ್ ತಂಡದ ರಕ್ಷಣಾ ವಿಭಾಗ ಗಮನಾರ್ಹ ಆರಂಭ ಕಂಡಿದೆ. ಹೀಗಾಗಿ ಆಖಿಬ್ ನವಾಬ್, ಎಲಿ ಸಾಬಿಯಾ ಮತ್ತು ಜೆರಿ ಲಾಲ್‌ರಿನ್ಜುವಾಲಾ ನೇತೃತ್ವದ ರಕ್ಷಣಾ ವಿಭಾಗ ನಿರಾಳವಾಗಿದೆ. ಎರಡು ಪಂದ್ಯಗಳಲ್ಲಿ ಎಲಿ ಸಾಬಿಯಾಗೆ ಎನಸ್ ಸಿಪೋವಿಚ್ ಉತ್ತಮ ಸಹಕಾರ ನೀಡಿ ಎದುರಾಳಿಗಳನ್ನು ಗೊಂದಲಕ್ಕೆ ಈಡುಮಾಡಿದ್ದರು. ಅನಿರುದ್ಧ ತಾಪ ಮತ್ತು ರಫೆಲ್ ಕ್ರಿವಿಲಾರೊ ಅವರು ಮಿಡ್‌ಫೀಲ್ಡ್ ವಿಭಾಗದಲ್ಲಿ ಮಿಂಚಿದ್ದಾರೆ.

ಕಾರ್ಲರ್ಸ್ ಕ್ವದ್ರತ್ ಅವರ ಬೆಂಗಳೂರು ತಂಡ ಹಿಂದಿನ ಯಾವ ಆವೃತ್ತಿಯಲ್ಲೂ ಈ ರೀತಿಯ ಕಳಪೆ ಆರಂಭ ಕಂಡಿರಲಿಲ್ಲ. ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಭಾರತದ ಆಟಗಾರ ಎಂದೆನಿಕೊಂಡಿರುವ ಸುನಿಲ್ ಚೆಟ್ರಿ ನೇತೃತ್ವದ ತಂಡಕ್ಕೆ ಈಗ ಫಾರ್ವರ್ಡ್ ವಿಭಾಗದ ವೈಫಲ್ಯದ್ದೇ ಚಿಂತೆ. ಗೋವಾ ಮತ್ತು ಹೈದರಾಬಾದ್ ವಿರುದ್ಧದ ಪಂದ್ಯಗಳಲ್ಲಿ ಒಟ್ಟು 12 ಬಾರಿ ಚೆಂಡನ್ನು ಗುರಿಯತ್ತ ಒದೆಯುವ ಅವಕಾಶ ತಂಡಕ್ಕೆ ಲಭಿಸಿತ್ತು. ಆದರೆ ಫಲ ಕಂಡದ್ದು ಎರಡು ಬಾರಿ ಮಾತ್ರ. ಸುನಿಲ್ ಚೆಟ್ರಿಗೆ ಇನ್ನೂ ಕಾಲ್ಚಳಕ ತೋರಲು ಆಗದೇ ಇರುವುದು ತಂಡದ ಆತಂಕ ಹೆಚ್ಚಿಸಿದೆ. ಕ್ಲಿಂಟನ್ ಸಿಲ್ವಾ, ದೇಶಾನ್ ಬ್ರೌನ್, ಆಶಿಕ್ ಕುರುಣಿಯನ್ ಮತ್ತು ಉದಾಂತ ಸಿಂಗ್ ಅವರಿಗೂ ಮಿಂಚಲು ಆಗಲಿಲ್ಲ.

ರಕ್ಷಣಾ ವಿಭಾಗದ ಆಧಾರಸ್ತಂಭಗಳಾದ ಜುವಾನನ್, ರಾಹುಲ್ ಭೆಕೆ, ಫ್ರಾನ್ಸಿಸ್ಕೊ ಗೊಂಜಾಲೆಸ್ ಮುಂತಾದವರಿಗೆ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲು ಆಗಲಿಲ್ಲ. ಗೋವಾ ಎದುರಿನ ಪಂದ್ಯದ ದ್ವಿತೀಯಾರ್ಧದಲ್ಲಿ ಎರಡು ಗೋಲುಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿದ್ದ ತಂಡ ನಂತರದ ಪಂದ್ಯದಲ್ಲಿ ಗೋಲು ಬಿಟ್ಟುಕೊಡಲಿಲ್ಲ. ಆದರೆ ಗೋಲು ಗಳಿಸುವುದಕ್ಕೂ ಸಾಧ್ಯವಾಗದೆ ನಿರಾಸೆಗೆ ಒಳಗಾಗಿತ್ತು.

ಅದೇನೇ ಇದ್ದರೂ ಕೋಚ್ ಕ್ವದ್ರತ್ ಭರವಸೆಯಲ್ಲಿದ್ದಾರೆ. ‘ಗೋವಾ ವಿರುದ್ಧದ ಪಂದ್ಯದಲ್ಲಿ ತಂಡ ಕೊಂಚ ಎಡವಿತ್ತು. ಆದರೆ ಒಂದು ಹಂತದ ವರೆಗೆ ಮೇಲುಗೈ ಸಾಧಿಸಿತ್ತು. ಹೈದರಾಬಾದ್ ವಿರುದ್ಧವೂ ತಂಡ ಉತ್ತಮವಾಗಿ ಆಡಿದೆ. ಎರಡೂ ಪಂದ್ಯಗಳಲ್ಲಿ ಎದುರಾಳಿಗಳಿಗೆ ಹೆಚ್ಚು ಅವಕಾಶ ಕೊಡಲಿಲ್ಲ. ಆದರೂ ತಂಡ ಇನ್ನಷ್ಟು ಸುಧಾರಿಸಿಕೊಳ್ಳಬೇಕಾಗಿದೆ. ಶುಕ್ರವಾರದ ಪಂದ್ಯದಲ್ಲಿ ಇದು ಸಾಧ್ಯವಾಗುವ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT