ಬಿಎಫ್‌ಸಿ–ಜೆಎಫ್‌ಸಿ ಸಮಬಲದ ಕಾದಾಟ

6
ನೀರಸ ಆರಂಭ; ಕೊನೆಯ 10 ನಿಮಿಷಗಳಲ್ಲಿ ಮೂಡಿದ ಮೂರು ಗೋಲುಗಳು

ಬಿಎಫ್‌ಸಿ–ಜೆಎಫ್‌ಸಿ ಸಮಬಲದ ಕಾದಾಟ

Published:
Updated:

ಬೆಂಗಳೂರು: ಪ್ರಬಲ ಎದುರಾಳಿಗಳ ವಿರುದ್ಧ ಪ್ರಬುದ್ಧ ಆಟವಾಡಿದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಮತ್ತು ಜೆಮ್‌ಶೆಡ್‌ಪುರ ಫುಟ್‌ಬಾಲ್‌ ಕ್ಲಬ್‌ (ಜೆಎಫ್‌ಸಿ) ಸಮಬಲದ ಹೋರಾಟ ಪ್ರದರ್ಶನ ನೀಡಿದರು.

ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಎರಡನೇ ಪಂದ್ಯದಲ್ಲಿ 2–2 ಗೋಲುಗಳಿಂದ ಡ್ರಾ ಸಾಧಿಸಿದವು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ 15,800 ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯ ಕೊನೆಯ ವರೆಗೂ ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಒಂದೊಂದು ಪಂದ್ಯದಲ್ಲಿ ಗೆದ್ದಿದ್ದ ಎರಡೂ ತಂಡಗಳು ತಲಾ ಮೂರು ಪಾಯಿಂಟ್‌ಗಳೊಂದಿಗೆ ಇಲ್ಲಿ ಕಣಕ್ಕೆ ಇಳಿದಿದ್ದವು. ಕಳೆದ ಪಂದ್ಯದಲ್ಲಿ ಚೆನ್ನೈಯಿನ್‌ ಎಫ್‌ಸಿಯನ್ನು ಮಣಿಸಿದ್ದ ತಂಡವನ್ನೇ ಕಣಕ್ಕೆ ಇಳಿಸಲು ಬಿಎಫ್‌ಸಿ ಕೋಚ್‌ ಕಾರ್ಲಸ್‌ ಕುದ್ರತ್‌ ನಿರ್ಧರಿಸಿದ್ದರು. ಮುಂಬೈ ಸಿಟಿಯನ್ನು ಮಣಿಸಿದ್ದ ಜೆಎಫ್‌ಸಿ, ಫಾರ್ವರ್ಡ್‌ ಆಟಗಾರ ಸುಮೀತ್‌ ಪಸಿ ಮತ್ತು ಮಿಡ್‌ಫೀಲ್ಡರ್‌ ಕಾರ್ಲೋಸ್‌ ಕಾಲ್ವೊ ಅವರಿಗೆ ವಿಶ್ರಾಂತಿ ನೀಡಿ ತಿಮೋತಿ ಖಾಹಿಲ್‌ ಮತ್ತು ಸುಸೈರಾಜ್‌ ಅವರನ್ನು ಕಣಕ್ಕೆ ಇಳಿಸಿತ್ತು. 

ನೀರಸ ಆರಂಭ, ನಿಶು ಮ್ಯಾಜಿಕ್‌: ಪಂದ್ಯದ ಆರಂಭ ನೀರಸವಾಗಿತ್ತು. ಏಳನೇ ನಿಮಿಷದಲ್ಲಿ ಬಿಎಫ್‌ಸಿ ಆಕ್ರಮಣಕ್ಕೆ ಮುಂದಾಗುವುದರೊಂದಿಗೆ ಗ್ಯಾಲರಿಗಳಲ್ಲಿ ಸಂಚಲನ ಉಂಟಾಯಿತು. ಆದರೆ ಮೊದಲಾರ್ಧದ ಮುಕ್ತಾಯಕ್ಕೆ ಎರಡು ನಿಮಿಷಗಳು ಇರುವ ವರೆಗೆ ಚೆಂಡು ಬಲೆಯನ್ನು ಸೋಕಲಿಲ್ಲ. 

ಬಿಎಫ್‌ಸಿಗೆ ಸಾಕಷ್ಟು ಅವಕಾಶಗಳು ಲಭಿಸಿದ್ದರೂ ಅವುಗಳನ್ನುಸದುಪಯೋಗಪಡಿಸಿಕೊಳ್ಳಲು ಆಗದೆ ನಿರಾಸೆಗೆ ಒಳಗಾಯಿತು. 12ನೇ ನಿಮಿಷದಲ್ಲಿ ಉದಾಂತ ಸಿಂಗ್ ಮತ್ತು 17ನೇ ನಿಮಿಷದಲ್ಲಿ ಮಿಕು ನಡೆಸಿದ ಆಕ್ರಮಣವನ್ನು ಎದುರಾಳಿ ತಂಡದವರು ಕೊನೆಯ ಕ್ಷಣದಲ್ಲಿ ವಿಫಲಗೊಳಿಸಿದರು. 41ನೇ ನಿಮಿಷದಲ್ಲಿ ಲಭಿಸಿದ ಫ್ರೀ ಕಿಕ್ ಮತ್ತು 43ನೇ ನಿಮಿದಲ್ಲಿ ಸಿಕ್ಕಿದ ಕಾರ್ನರ್ ಕಿಕ್ ಕೂಡ ಫಲ ನೀಡಲಿಲ್ಲ. ಕಾರ್ನರ್‌ ಕಿಕ್‌ ತೆಗೆದ ಸುನಿಲ್ ಚೆಟ್ರಿ ಚಾಣಾಕ್ಷತನ ತೋರಿದರು. ಬಲಭಾಗದಲ್ಲಿ ಕಾಯುತ್ತಿದ್ದ ಮಾರ್ಕೋಸ್ ಹೆರ್ನಾಂಡಸ್ ಬಳಿಗೆ ನಿಖರವಾಗಿ ಚೆಂಡನ್ನು ಲಾಫ್ಟ್‌ ಮಾಡಿದರು. ಆದರೆ ಹೆರ್ನಾಂಡಸ್‌ಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.     

ಮಿಡ್‌ಫೀಲ್ಡರ್‌ ನಿಶುಕುಮಾರ್‌ 45ನೇ ನಿಮಿಷದಲ್ಲಿ ಮ್ಯಾಜಿಕ್‌ ಮಾಡಿದರು. ಹೆರ್ನಾಂಡಸ್ ತೆಗೆದ ಫ್ರೀ ಕಿಕ್‌ ಅನ್ನು ಗೋಲು‍‍‍ಪೆಟ್ಟಿಗೆಯ ಎಡಭಾಗದಲ್ಲಿ ಎದುರಾಳಿ ತಂಡದ ನಾಯಕ ತಿರಿ, ಹೆಡ್‌ ಮಾಡಿ ಹೊರಗೆ ಅಟ್ಟಲು ಪ್ರಯತ್ನಿಸಿದರು. ಆದರೆ ಚೆಂಡು ನಿಶು ಕುಮಾರ್ ಬಳಿಗೆ ಸಾಗಿತು. ಅವರು ಅರೆಕ್ಷಣವೂ ತಡಮಾಡದೆ ಮಿಂಚಿನ ವೇಗದಲ್ಲಿ ಗುರಿ ಮುಟ್ಟಿಸಿದರು. 81ನೇ ನಿಮಿಷದಲ್ಲಿ ಗೌರವ್‌ ಮುಖಿ ಗಳಿಸಿದ ಗೋಲಿನ ಮೂಲಕ ಜೆಎಫ್‌ಸಿ ತಿರುಗೇಟು ನೀಡಿತು. 88ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಬಿಎಫ್‌ಸಿಗೆ ಗೋಲು ಗಳಿಸಿಕೊಟ್ಟರು. ಕೊನೆಯ ನಿಮಿಷದಲ್ಲಿ ಸರ್ಜಿಯೊ ಸಿಡಾಂಚ ಗೋಲು ಗಳಿಸಿ ಸಮಬಲ ಸಾಧಿಸಿದರು.

ಕಿಣಕ್ಕೆ ಇಳಿದ ಖಾಹಿಲ್‌: ಆಸ್ಟ್ರೇಲಿಯಾದ ತಿಮೋತಿ ಖಾಹಿಲ್‌ ಅವರಿಗೆ ಇದು ಐಎಸ್‌ಎಲ್‌ನ ಚೊಚ್ಚಲ ಪಂದ್ಯವಾಗಿತ್ತು. 38 ವರ್ಷದ ಖಾಹಿಲ್‌ ಮಿಲ್‌ವಾಲ್‌, ಎವರ್ಟನ್‌, ದಿ ನ್ಯೂಯಾರ್ಕ್‌ ರೆಡ್‌ ಬುಲ್ಸ್‌, ಶಾಂಘೈ ಶೆನುವಾ, ಹಾಂಗ್ಜು ಗ್ರೀನ್‌ಟೌನ್‌ ಮುಂತಾದ ಕ್ಲಬ್‌ಗಳ ಪರ ಆಡಿ ಗಮನ ಸೆಳೆದಿದ್ದರು. 

2015ರಿಂದ ಎರಡು ವರ್ಷ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ 15 ಪಂದ್ಯಗಳಲ್ಲಿ 11 ಗೋಲು ಗಳಿಸಿದ್ದ ಖಾಹಿಲ್ ವಿಶ್ವಕಪ್‌ನಲ್ಲಿ ಗೋಲಿನ ಬರ ಅನುಭವಿಸಿದ್ದರು. 2017ರ ಕಾನ್ಫೆಡರೇಷನ್ ಕಪ್‌ ಟೂರ್ನಿಯ ಮೂರು ಪಂದ್ಯಗಳಲ್ಲಿ ಖಾತೆ ತೆರೆಯಲಾಗದೆ ನಿರಾಸೆಗೊಂಡಿದ್ದರು. ಐಎಸ್‌ಎಲ್‌ನಲ್ಲಿ ಖಾತೆ ತೆರೆಯುವುದಕ್ಕೂ ಆಗಲಿಲ್ಲ. 72ನೇ ನಿಮಿಷದಲ್ಲಿ ಅವರನ್ನು ವಾಪಸ್‌ ಕರೆಸಿಕೊಂಡ ಕೋಚ್‌, ಬದಲಿಗೆ ಕಾಲ್ವೊ ಅವರನ್ನು ಆಡಿಸಿದರು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !