ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಬಿಎಫ್‌ಸಿ ಪ್ಲೇ ಆಫ್ ಕನಸು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಗೋವಾ ಜಯಭೇರಿ
Last Updated 21 ಫೆಬ್ರುವರಿ 2021, 15:24 IST
ಅಕ್ಷರ ಗಾತ್ರ

ಫತೋರ್ಡ: ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್‌ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಆತಿಥೇಯಎಫ್‌ಸಿ ಗೋವಾ ತಂಡವು ಭಾನುವಾರ ಇಲ್ಲಿ ನಡೆದ ಹಣಾಹಣಿಯಲ್ಲಿ 2–1ರಿಂದ ಗೆದ್ದು ಬೀಗಿತು. ಈ ಸೋಲಿನೊಂದಿಗೆ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡದ ಪ್ಲೇ ಆಫ್ ಪ್ರವೇಶದ ಬಾಗಿಲು ಬಹುತೇಕ ಮುಚ್ಚಿತು.

ಜಯದೊಂದಿಗೆ ಗೋವಾ ತಂಡವು ಅಗ್ರ ನಾಲ್ಕರಲ್ಲಿ ಸ್ಥಾನವನ್ನು ಇನಷ್ಟು ಭದ್ರಪಡಿಸಿಕೊಂಡಿತು. ಅಲ್ಲದೆ 12 ಪಂದ್ಯಗಳಲ್ಲಿ ಅಜೇಯವಾಗುಳಿಯುವ ಮೂಲಕ 2014 ಹಾಗೂ 2015ರಲ್ಲಿ ತಾನು ಸ್ಥಾಪಿಸಿದ್ದ, ಹಾಗೂ ಈ ಋತುವಿನಲ್ಲಿ ಮುಂಬೈ ಸಿಟಿ ಎಫ್‌ಸಿ ನಿರ್ಮಿಸಿದ ದಾಖಲೆಯನ್ನು ಸರಿಗಟ್ಟಿತು.

ವಿಜೇತ ಎಫ್‌ಸಿ ಗೋವಾ ತಂಡದ ಇಗೊರ್ ಅಂಗುಲೊ (20ನೇ ನಿಮಿಷ) ಹಾಗೂ ರಿಡೀಮ್ ತಲಾಂಗ್‌ (23ನೇ ನಿಮಿಷ) ಗೋಲು ದಾಖಲಿಸಿದರು.

ಬೆಂಗಳೂರು ತಂಡದ ಪರ ಏಕೈಕ ಗೋಲು ಸುರೇಶ್‌ ವಾಂಗ್‌ಜಮ್‌ (33ನೇ ನಿಮಿಷ) ಮೂಲಕ ಮೂಡಿಬಂತು.

ಆರಂಭದಿಂದಲೇ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 19ನೇ ನಿಮಿಷದಲ್ಲಿ ಬಿಎಫ್‌ಸಿಯ ಆಶಿಕ್ ಕುರುಣಿಯನ್ ಹಳದಿ ಕಾರ್ಡ್ ದರ್ಶನ ಮಾಡಿದರು. ಇದಾದ ಒಂದು ನಿಮಿಷದ ಬಳಿಕ ಸ್ಪೇನ್‌ನ ಇಗೊರ್‌ ಅಂಗುಲೊ ಮೋಡಿ ಮಾಡಿದರು. ಗ್ಲ್ಯಾನ್ ಮಾರ್ಟಿನ್ಸ್ ನೆರವು ಪಡೆದ ಅವರು ಅತೀ ಸಮೀಪ‍ದಿಂದ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಇದಾದ ಮೂರನೇ ನಿಮಿಷದಲ್ಲಿಯೇ ಸುನಿಲ್ ಚೆಟ್ರಿ ಪಡೆಗೆ ಮತ್ತೊಂದು ಆಘಾತ ಎದುರಾಯಿತು. ರಿಡೀಮ್ ತಲಾಂಗ್ ಗೋವಾದ ಮುನ್ನಡೆಯನ್ನು 2–0ಕ್ಕೆ ಹಿಗ್ಗಿಸಿದರು. ಅಲೆಕ್ಸಾಂಡರ್ ಜೇಸುರಾಜ್ ನೆರವಿನಿಂದ ಗೋಲು ದಾಖಲಿಸಿದರು.

ಈ ವೇಳೆ ಗೋವಾ, ಪಂದ್ಯದಲ್ಲಿ ಸಂಪೂರ್ಣ ಪಾರಮ್ಯ ಸಾಧಿಸುವ ಹಂತದಲ್ಲಿದ್ದಾಗ, ಕ್ಲೀಟನ್ ಸಿಲ್ವಾ ನೆರವು ಪಡೆದ ಸುರೇಶ್ ವಾಂಗಜಮ್ ಗೋಲು ದಾಖಲಿಸಿ ಬಿಎಫ್‌ಸಿಯ ಹಿನ್ನಡೆಯನ್ನು ತಗ್ಗಿಸಿದರು.

ಈ ಸೋಲಿನೊಂದಿಗೆ ಬಿಎಫ್‌ಸಿ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಉಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT