ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಕಪ್‌ ಸವಾಲಿನ ಹಾದಿಯಲ್ಲಿ ಬಿಎಫ್‌ಸಿ

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ದೇಶಿ ಫುಟ್‌ಬಾಲ್‌ನಲ್ಲಿ ಬಲಿಷ್ಠ ತಂಡವಾಗಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ಈ ಬಾರಿಯ ಎಎಫ್‌ಸಿ ಕಪ್ ಟೂರ್ನಿಯಲ್ಲಿ ನೀರಸ ಹೋರಾಟ ಪ್ರದರ್ಶಿಸಿದ್ದು ಸದ್ಯ ನಿರ್ಣಾಯಕ ಘಟ್ಟದಲ್ಲಿ ಆತಂಕ ಎದುರಿಸುತ್ತಿದೆ

ಫೆ ಬ್ರುವರಿ 5...ಭಾರಿ ನಿರೀಕ್ಷೆಯೊಂದಿಗೆ ಥಿಂಪುವಿನ ಚಂಗ್ಲಿಮಿಥಾಂಗ್ ಕ್ರೀಡಾಂಗಣದಲ್ಲಿ ಆಡಲು ಇಳಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಭೂತಾನ್‌ನ ಪಾರೊ ಎಫ್‌ಸಿ ವಿರುದ್ಧ ಜಯ ಗಳಿಸಿದ್ದೇನೋ ನಿಜ. ಆದರೆ ತಂಡ ಇದಕ್ಕೆ ಹೆಚ್ಚು ಸಂಭ್ರಮ ವ್ಯಕ್ತಪಡಿಸಲಿಲ್ಲ. ಅಷ್ಟೇನೂ ಬಲಿಷ್ಠವಲ್ಲದ ತಂಡದ ವಿರುದ್ಧ ಎಎಫ್‌ಸಿ ಕಪ್ ಟೂರ್ನಿಯ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿಕೇವಲ ಒಂದು ಗೋಲಿನಿಂದ ಗೆದ್ದ ಕಾರಣ ಮುಂದಿನ ಹಾದಿಯ ಬಗ್ಗೆ ಸುನಿಲ್ ಚೆಟ್ರಿ ಪಾಳಯಕ್ಕೆ ಸಹಜವಾಗಿ ಆತಂಕ ಕಾಡಿತ್ತು.

ಸರಿಯಾಗಿ ಒಂದು ವಾರದ ನಂತರ ಬೆಂಗಳೂರಿನಲ್ಲಿ ಇದೇ ತಂಡದ ಎದುರು ನಡೆದ ‘ರಿವರ್ಸ್’ ಲೆಗ್ ಪಂದ್ಯದಲ್ಲಿ ಬಿಎಫ್‌ಸಿ ಗೋಲುಗಳ ಮಳೆ ಸುರಿಸಿತು. 9–0ಯಿಂದ ಎದುರಾಳಿಗಳನ್ನು ಹಿಮ್ಮೆಟ್ಟಿಸಿದ ತಂಡ ನಿಟ್ಟುಸಿರು ಬಿಟ್ಟಿತು. ಚೇತರಿಸಿಕೊಂಡು ಅಮೋಘ ಜಯ ಸಾಧಿಸಿ ಪ್ಲೇ ಆಫ್ ಹಂತಕ್ಕೇರಿದ ತಂಡಕ್ಕೆ 19ರಂದು ಮತ್ತೆ ನಿರಾಸೆ ಕಾದಿತ್ತು. ಎರಡು ಲೆಗ್‌ಗಳ ಪ್ಲೇ ಆಫ್ ಹಣಾಹಣಿಯ ಮೊದಲ ಪಂದ್ಯದಲ್ಲಿ ಮಾಲ್ಡಿವ್ಸ್‌ನ ಮಜಿಯಾ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನ್ ತಂಡ 2–1 ಗೋಲುಗಳ ಪೆಟ್ಟು ನೀಡಿತು. ಈ ಸೋಲಿನಿಂದ ಕಂಗೆಟ್ಟಿರುವ ಬಿಎಫ್‌ಸಿ ಈಗ ತೀವ್ರ ಒತ್ತಡದಲ್ಲಿದೆ. ಇದೇ 26ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ರಿವರ್ಸ್ ಲೆಗ್‌’ ಪಂದ್ಯದಲ್ಲಿ ತಿರುಗೇಟು ನೀಡಿ ಸಾಲ ತೀರಿಸದೇ ಇದ್ದರೆ ಈ ಬಾರಿ ಗುಂಪು ಹಂತ ಪ್ರವೇಶಿಸುವ ಕನಸು ಕಮರಿ ಹೋಗಲಿದೆ.

2004ರಿಂದ ಕಳೆದ ವರ್ಷದ ವರೆಗೂ ಪ್ರತಿ ಬಾರಿ ಭಾರತದಿಂದ ತಲಾ ಎರಡು ತಂಡಗಳು ಗುಂಪು ಹಂತ ಪ್ರವೇಶಿಸಿವೆ. ಆದರೆ ಯಾವ ತಂಡಕ್ಕೂ ಪ್ರಶಸ್ತಿ ಎತ್ತಿ ಹಿಡಿಯಲು ಆಗಲಿಲ್ಲ. ಭಾರತದ ಗರಿಷ್ಠ ಸಾಧನೆ ಒಂದು ಬಾರಿಯ ರನ್ನರ್ ಅಪ್ ಸ್ಥಾನ. 2016ರಲ್ಲಿ ಬೆಂಗಳೂರು ಎಫ್‌ಸಿ ಈ ಗರಿಯನ್ನು ಮುಡಿಗೇರಿಸಿಕೊಂಡಿತ್ತು.2013ರಲ್ಲಿ ಅಸ್ತಿತ್ವಕ್ಕೆ ಬಂದ ಬಿಎಫ್‌ಸಿ ಕೇವಲ ಮೂರೇ ವರ್ಷಗಳಲ್ಲಿ ಈ ಅಪರೂಪದ ಸಾಹಸ ಮರೆದಿತ್ತು.ಮೊದಲ ವರ್ಷವೇ ಎಎಫ್‌ಸಿ ಕಪ್‌ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿಯೂ ತಂಡ ಗಮನ ಸೆಳೆದಿತ್ತು. ಅಸ್ತಿತ್ವಕ್ಕೆ ಬಂದ ನಂತರ ಸತತ ಮೂರು ವರ್ಷ ರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಎಎಫ್‌ಸಿ ಕಪ್ ಹಣಾಹಣಿಗೆ ಪ್ರವೇಶ ಪಡೆಯುತ್ತಿದೆ. 2018ರಲ್ಲಿ ಫೆಡರೇಷನ್ ಕಪ್ ಟೂರ್ನಿಯ (2017) ವಿಜೇತರಾಗಿ ಎಎಫ್‌ಸಿ ಕಪ್‌ಗೆ ತೇರ್ಗಡೆ ಹೊಂದಿದ್ದ ತಂಡಕ್ಕೆ ಕಳೆದ ಬಾರಿ ನಿರಾಸೆ ಕಾದಿತ್ತು. ಐ ಲೀಗ್ ಚಾಂಪಿಯನ್ ಮಿನರ್ವ ಪಂಜಾಬ್ ಮತ್ತು ಐಎಸ್ಎಲ್ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ 2019ರ ಸಾಲಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದವು.

ಐ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಈ ಬಾರಿಯ ಎಎಫ್‌ಸಿ ಕಪ್‌ಗೆ ಚೆನ್ನೈಯಿನ್ ಪ್ರವೇಶ ಪಡೆದಿದೆ. ನೇರವಾಗಿ ಗುಂಪು ಹಂತಕ್ಕೆ ಸಾಗಿರುವ ಆ ತಂಡ ‘ಇ’ ಗುಂಪಿನಲ್ಲಿದೆ. ಐಎಸ್‌ಎಲ್ ಚಾಂಪಿಯನ್ ಬೆಂಗಳೂರು ತಂಡ ಗುಂಪು ಹಂತಕ್ಕೇರುವ ಸಾಹಸದಲ್ಲಿ ತಲ್ಲೀನವಾಗಿದೆ. ದೇಶಿ ಫುಟ್‌ಬಾಲ್‌ನಲ್ಲಿ ಸಾಂಪ್ರದಾಯಿಕ ವೈರಿಯಾದ ಚೆನ್ನೈಯಿನ್ ತಂಡ ಗುಂಪು ಹಂತದಲ್ಲಿರುವುದರಿಂದ ಆ ಘಟ್ಟಕ್ಕೇರುವ ಛಲಬಿಎಫ್‌ಸಿಗೆ ಹೆಚ್ಚಾಗಿದೆ. ದೇಶಿ ಫುಟ್‌ಬಾಲ್‌ನ ಮತ್ತೊಂದು ಬಲಿಷ್ಠ ತಂಡ ಎಫ್‌ಸಿ ಗೋವಾ ತಂಡ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ಗುಂಪು ಹಂತಕ್ಕೆ ನೇರ ಪ್ರವೇಶ ಪಡೆದು ದಾಖಲೆ ಮಾಡಿದೆ. ಎಎಫ್‌ಸಿ ಕಪ್‌ನಲ್ಲಿ ಪ್ರಶಸ್ತಿ ಗೆದ್ದರೆ ಬಿಎಫ್‌ಸಿ ಕೂಡ ಚಾಂಪಿಯನ್ಸ್ ಲೀಗ್‌ಗೆ ಪ್ರವೇಶಿಸಬಹುದು. ಆದ್ದರಿಂದ ತಂಡದ ಮುಂದೆ ಗುರಿ ದೊಡ್ಡದಿದೆ; ಸವಾಲು ಕೂಡ.

ಹೊಸ ಆಟಗಾರರ ಮೇಲೆ ಭರವಸೆ

ಸುನಿಲ್ ಚೆಟ್ರಿ ಗಾಯಗೊಂಡು ಕಣದಿಂದ ದೂರ ಉಳಿದಿರುವಾಗ ಯುವ ಆಟಗಾರರಾದ ಸುರೇಶ್ ಸಿಂಗ್‌ ವಾಂಗ್ಜಂ, ಪ್ರಭುಸುಖನ್ ಸಿಂಗ್ ಗಿಲ್, ಬಿ ತಂಡದ ರೋಷನ್ ಸಿಂಗ್, ಈಚೆಗೆ ತಂಡ ಸೇರಿಕೊಂಡಿರುವ ನೀಲ್ ಪೆಡ್ರೊಮೊ ಮುಂತಾದವರ ಮೇಲೆ ಬಿಎಫ್‌ಸಿ ಭರವಸೆ ಇರಿಸಿತ್ತು. ಈ ಪೈಕಿ ಸುರೇಶ್ ವಾಂಗ್ಜಂ ಮತ್ತು ನೀಲ್ ಪೆಡ್ರೊಮೊ ಉತ್ತಮ ಸಾಮರ್ಥ್ಯ ತೋರಿ ನಿರೀಕ್ಷೆ ಮೂಡಿಸಿದ್ದಾರೆ. ಮುಂದೆಯೂ ನಿರ್ಣಾಯಕ ಘಟ್ಟದಲ್ಲಿ ಅವರು ಕೈ ಹಿಡಿಯುವರೇ..?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT