ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಸ್ಥಾನ ಭದ್ರಪಡಿಸುವ ಹಂಬಲ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್‌ ಎಫ್‌ಸಿ ವಿರುದ್ಧ ಹಣಾಹಣಿ
Last Updated 8 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚೆನ್ನೈ: ನೀರಸ ಪ್ರದರ್ಶನದಿಂದ ಪುಟಿದೆದ್ದು ಪ್ಲೇ ಆಫ್‌ ಹಂತಕ್ಕೇರುವ ತವಕದಲ್ಲಿರುವ ಚೆನ್ನೈಯಿನ್ ಎಫ್‌ಸಿ ತಂಡವನ್ನು ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಭಾನುವಾರ ಇಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಎದುರಿಸಲಿದೆ.

ಎರಡು ಬಾರಿಯ ಚಾಂಪಿಯನ್ ಚೆನ್ನೈಯಿನ್ ಈ ಬಾರಿ ಆರಂಭದಲ್ಲಿ ಕಳಪೆ ಆಟದ ಮೂಲಕ ನಿರಾಸೆಗೆ ಒಳಗಾಗಿತ್ತು. ಇದರಿಂದ ಬೇಸತ್ತ ಕೋಚ್ ಜಾನ್ ಗ್ರೆಗರಿ ರಾಜೀನಾಮೆ ನೀಡಿದ್ದರು. ಹೊಸ ಕೋಚ್ ಓವೆನ್ ಕೋಯ್ಲೆ ನೇಮಕ ಬಂದ ನಂತರ ತಂಡ ಗೆಲುವಿನ ಹಾದಿಯಲ್ಲಿ ಹೆಜ್ಜೆ ಹಾಕಿದೆ.

ಕಳೆದ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿರುವ ತಂಡ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ. ಈ ನಾಲ್ಕು ಪಂದ್ಯಗಳಲ್ಲಿ ತಂಡ ಒಟ್ಟು 15 ಗೋಲುಗಳನ್ನು ಗಳಿಸಿದೆ. ನೆರಿಜಸ್ ವಲ್‌ಸ್ಕಿಸ್ ಅವರ ವೈಯಕ್ತಿಕ ಗೋಲುಗಳ ಸಂಖ್ಯೆ 12ಕ್ಕೇರಿದ್ದು ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಆದರೆ ಬಿಎಫ್‌ಸಿ ಎದುರಿನ ಪಂದ್ಯದಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ. ಸುನಿಲ್ ಚೆಟ್ರಿ ನಾಯಕತ್ವದ ತಂಡ ಈ ಬಾರಿ ಅಮೋಘ ಆಟ ಪ್ರದರ್ಶಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಲೈನ್‌ಅಪ್‌ನಲ್ಲಿ ಸ್ಥಾನ ಭದ್ರಪಡಿಸಿಕೊಳ್ಳುವ ಇರಾದೆಯೊಂದಿಗೆ ಚೆನ್ನೈ ಅಂಗಣದಲ್ಲಿ ಆಡಲು ಇಳಿಯಲಿದೆ.

ಚೆಟ್ರಿ ಮಾತ್ರವಲ್ಲದೆ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಕೂಡ ಬಿಎಫ್‌ಸಿ ಪರ ಮಿಂಚುತ್ತಿದ್ದಾರೆ. ಅವರನ್ನು ವಂಚಿಸಿ ಚೆನ್ನೈ ಫಾರ್ವರ್ಡ್‌ ಆಟಗಾರರು ಚೆಂಡನ್ನು ಗುರಿ ತಲುಪಿಸಬಲ್ಲರೇ ಎಂಬುದು ಕುತೂಹಲದ ಪ್ರಶ್ನೆ.

ವಲ್‌ಸ್ಕಿಸ್, ರಾಫೆಲ್ ಕ್ರಿವಲಾರೊ ಮತ್ತು ಆ್ಯಂಡ್ರೆ ಶೆಂಬ್ರಿ ಅವರು ಚೆನ್ನೈನ ಗೋಲು ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಮಾನತಿಗೆ ಒಳಗಾಗಿರುವ ಅನಿರುದ್ಧ್ ಥಾಪ ಈ ಪಂದ್ಯಕ್ಕೆ ಲಭ್ಯವಿಲ್ಲ.

ಪಾಯಿಂಟ್ ಪಟ್ಟಿಯಲ್ಲಿ ಸ್ಥಾನ

ಬಿಎಫ್‌ಸಿ 3

ಸಿಎಫ್‌ಸಿ 5

ಉಭಯ ತಂಡಗಳ ಬಲಾಬಲ

ತಂಡ; ಪಂದ್ಯ; ಜಯ; ಡ್ರಾ; ಸೋಲು; ಪಾಯಿಂಟ್ಸ್

ಬಿಎಫ್‌ಸಿ; 15; 8; 4; 3; 28

ಸಿಎಫ್‌ಸಿ; 14; 6 ;3; 5; 21

ಉಭಯ ತಂಡಗಳ ಪರ ಹೆಚ್ಚು ಗೋಲು

ಆಟಗಾರ; ತಂಡ; ಪಂದ್ಯ; ಗೋಲು

ನೆರಿಜಸ್ ವಲ್‌ಸ್ಕಿಸ್;ಸಿಎಫ್‌ಸಿ;14;12

ಸುನಿಲ್ ಚೆಟ್ರಿ;ಬಿಎಫ್‌ಸಿ;15;9

ರಾಫೆಲ್ ಕ್ರಿವೆಲಾರೊ;ಸಿಎಫ್‌ಸಿ;14;6

ಆ್ಯಂಡ್ರೆ ಶೆಂಬ್ರಿ;ಸಿಎಫ್‌ಸಿ;13;4

ಎರಿಕ್ ಪಾರ್ಟಲು;ಬಿಎಫ್‌ಸಿ;12;2

ದೇಶಾನ್ ಬ್ರೌನ್;ಬಿಎಫ್‌ಸಿ;3;1

ಗೋಲ್‌ಕೀಪರ್‌ಗಳ ಸಾಧನೆ

ಗುರುಪ್ರೀತ್ ಸಿಂಗ್ ಸಂಧು (ಬಿಎಫ್‌ಸಿ)

ಪಂದ್ಯ 15

ತಡೆದ ಗೋಲು 40

ಬಿಟ್ಟುಕೊಟ್ಟ ಗೋಲು 9

ಕ್ಲೀನ್ ಶೀಟ್ 9

ವಿಶಾಲ್ ಕೇತ್ (ಸಿಎಫ್‌ಸಿ)

ಪಂದ್ಯ 14

ತಡೆದ ಗೋಲು 27

ಬಿಟ್ಟುಕೊಟ್ಟ ಗೋಲು 23

ಕ್ಲೀನ್ ಶೀಟ್ 2

ಪಂದ್ಯ ಆರಂಭ: ರಾತ್ರಿ 7.30

ಸ್ಥಳ: ಜವಾಹರಲಾಲ್ ನೆಹರು ಕ್ರೀಡಾಂಗಣ, ಚೆನ್ನೈ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT