ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಗರ ಸಂಭ್ರಮ

Last Updated 31 ಮೇ 2018, 19:43 IST
ಅಕ್ಷರ ಗಾತ್ರ

ಬೆಂಗಳೂರು: ಸುತ್ತಲೂ ಖಾಕಿ ಕಣ್ಗಾವಲು, ಅಭ್ಯರ್ಥಿಗಳ ಚಡಪಡಿಕೆ, ಕಾರ್ಯಕರ್ತರ ಆತಂಕ, ಅದರ ನಡು–ನಡುವೆಯೇ ಸಂಭ್ರಮದ ಝೇಂಕಾರ, ಇವೆಲ್ಲದರ ನಡುವೆ ಮತ ಎಣಿಕೆ ನಿರಾತಂಕವಾಗಿ ಸಾಗುತ್ತಿತ್ತು.

ಈ ದೃಶ್ಯಗಳು ಕಂಡುಬಂದದ್ದು, ಗುರುವಾರ ನಡೆದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ.

ಎಣಿಕೆ ಕೇಂದ್ರವಾಗಿದ್ದ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯ ಎದುರಿನ ರಸ್ತೆಯ 200 ಮೀಟರ್ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಆ ಮಾರ್ಗವಾಗಿ ಬಂದ ಬಸ್, ಲಾರಿಗಳಿಗೆ ಪರ್ಯಾಯ ರಸ್ತೆ ಬಳಸುವಂತೆ ಪೊಲೀಸರು ಸೂಚಿಸುತ್ತಿದ್ದರು. ಕಾರ್ಯಕರ್ತರನ್ನು ಬ್ಯಾರಿಕೇಡ್ ಒಳಗೆ ಬಿಡದೆ ಹೊರಗೆ ನಿಲ್ಲುವಂತೆ ಸೂಚಿಸಲಾಗಿತ್ತು. ಹೀಗಾಗಿ, ಕೇಂದ್ರದ ಒಳಗಿದ್ದ ಕಾಂಗ್ರೆಸ್ ಪಕ್ಷದ ಏಜೆಂಟರಿಂದ ಕಾರ್ಯಕರ್ತರು ಮೊಬೈಲ್ ಮೂಲಕ ಕ್ಷಣಕ್ಷಣದ ಮಾಹಿತಿ ತರಿಸಿಕೊಳ್ಳುತ್ತಿದ್ದರು.

ಮೊದ ಮೊದಲು ನಿಶ್ಶಬ್ದವಾಗಿದ್ದ ಕೇಂದ್ರದಲ್ಲಿ, ಮೊದಲ ಸುತ್ತಿನ ಮತ ಎಣಿಕೆ ಫಲಿತಾಂಶ ಹೊರಬೀಳುತ್ತಿದ್ದಂತೆ, ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಪರ ಜಯಘೋಷಗಳು ಪ್ರಾರಂಭವಾದವು. ಕಾರ್ಯಕರ್ತರ ಸಂಭ್ರಮದ ಧ್ವನಿ ಎಣಿಕೆ ಕೇಂದ್ರವನ್ನೆಲ್ಲಾ ಆವರಿಸಿತು. ಇವರ ಸದ್ದು ತಗ್ಗಿಸಲು ಸಾಧ್ಯವಾಗದೆ ಪೊಲೀಸರೂ ಮೌನ ವಹಿಸಿದರು.

ಮುನಿರತ್ನ ಪರವಾಗಿ ಘೋಷಣೆ ಕೂಗುತ್ತಿದ್ದ ಕಾರ್ಯಕರ್ತರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಹೆಸರು ಹೇಳುವುದನ್ನು ಮರೆಯುತ್ತಿರಲಿಲ್ಲ. ಸಂಭ್ರಮಾಚರಣೆಯ ಭರದಲ್ಲಿ ಬ್ಯಾರಿಕೇಡ್‌ಗಳನ್ನು ದಾಟಿ ಒಳ ಬಂದ 50 ಕಾರ್ಯಕರ್ತರು ಕೇಂದ್ರದ ಪ್ರವೇಶ ದ್ವಾರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ, ಶಾಲುಗಳನ್ನು ತೋರಿಸುತ್ತಾ, ‘ಲೀಡಿಂಗಪ್ಪ ಲೀಡಿಂಗು, ಮುನಿರತ್ನಣ್ಣ ಲೀಡಿಂಗು’ ಎಂದು ಜಯಘೋಷ ಹಾಕಿದರು. ಈ ಗದ್ದಲವನ್ನು ತಡೆಯುವ ‍ಪ್ರಯತ್ನವಾಗಿ, ಕಾರ್ಯಕರ್ತರು ಬ್ಯಾರಿಕೇಡ್‌ನಿಂದ ಹೊರಗೆ ಹೋಗುವಂತೆ ಸೂಚಿಸಿದ ಪೊಲೀಸರು ಗುಂಪನ್ನು ಚದುರಿಸಿದರು.

ನಗುಮೊಗದಿಂದ ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಮುನಿರಾಜು ಗೌಡ ಅವರ ಚಹರೆ, ಒಂದೊಂದು ಸುತ್ತಿನ ಎಣಿಕೆ ನಂತರವೂ ಗಂಭೀರವಾಗುತ್ತಾ ಹೋಯಿತು. ಮೊದಲು ಹೊರಬಿದ್ದ ಅಂಚೆ ಮತಗಳಲ್ಲಿ ಮುನಿರಾಜು ಗೌಡ ಅವರಿಗೆ 189 ಹೆಚ್ಚು ಮತಗಳು ದೊರೆತಿದ್ದವು. ಕಾಂಗ್ರೆಸ್‌ ಮುನ್ನಡೆಯ ಹಾದಿ ಸುಗಮವಾಗಿ ಸಾಗುತ್ತಿದ್ದುದನ್ನು ನೋಡಿದ ಮುನಿರಾಜು, 10ನೇ ಸುತ್ತಿನ ಎಣಿಕೆ ವೇಳೆಗೆ ಕೇಂದ್ರದಿಂದ ಹೊರನಡೆದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಮಾತ್ರ ಮತ ಎಣಿಕೆ ಪ್ರಕ್ರಿಯೆ ಮುಗಿಯುವವರೆಗೂ ಕೇಂದ್ರದತ್ತ ಸುಳಿಯಲಿಲ್ಲ. ಬೆಳಿಗ್ಗೆ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಜಿ.ಎಚ್.ರಾಮಚಂದ್ರ, ನಂತರ ಕೇಂದ್ರದ ಬಳಿ ಬರಬಹುದು ಎಂಬ ಕಾರ್ಯಕರ್ತರ ನಿರೀಕ್ಷೆ ಸುಳ್ಳಾಯಿತು.

12 ಸುತ್ತುಗಳವರೆಗೂ ಮುನಿರತ್ನ ಭಾರಿ ಅಂತರದ ಮುನ್ನಡೆ ಕಾಯ್ದುಕೊಂಡಿದ್ದರು. 41 ಸಾವಿರದವರೆಗೂ ತಲುಪಿದ್ದ ಮತಗಳ ಅಂತರ 12ನೇ ಸುತ್ತಿನ ನಂತರ ನಿಧಾನಕ್ಕೆ ಕಡಿಮೆಯಾಗುತ್ತಾ ಬಂದಿತು. ಕೊನೆಯ ಸುತ್ತಿನ ವೇಳೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ 25 ಸಾವಿರ ಮತಗಳ ಅಂತರವಿತ್ತು.

ಪೂರ್ತಿ 18 ಸುತ್ತುಗಳ ಮತ ಎಣಿಕೆ ಮುಗಿಯುತ್ತಿದ್ದಂತೆ ಕೇಂದ್ರದಲ್ಲಿಯೇ ಘೋಷಣೆ ಕೂಗುತ್ತಾ ಕಾರ್ಯಕರ್ತರು ಹೊರಬಂದರು. ಎಣಿಕೆ ಕೇಂದ್ರದ ಹೊರಗೆ ತೆರೆದ ವಾಹನಗಳಲ್ಲಿ ಸಾಗುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತೆಯರು ‘ಆರ್‌.ಆರ್‌. ನಗರ ಕ್ಷೇತ್ರ ಮುನಿರತ್ನಗೆ ಮಾತ್ರ’, ‘ಕ್ರಮಸಂಖ್ಯೆ ಒಂದು– ಆರ್‌.ಆರ್.ನಗರ ನಮ್ಮದು’ ಹಾಗೂ ‘ಟ್ವಿಂಕಲ್ ಟ್ವಿಂಕಲ್ ಲಿಟರ್ ಸ್ಟಾರ್, ಮುನಿರತ್ನ ಈಸ್ ಸೂಪರ್ ಸ್ಟಾರ್’ ಎಂಬ ಘೋಷಣೆಗಳ ಮೂಲಕ ಗಮನ ಸೆಳೆದರು. ಮೊದಲ ಸುತ್ತಿನಿಂದಲೇ ಪ್ರಾರಂಭವಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಅಬ್ಬರದ ಸಂಭ್ರಮದ ನಡುವೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗಿದ್ದರು.

ಈ ಸಂಭ್ರಮಾಚರಣೆಯಲ್ಲಿ ಯಶವಂತಪುರ ಕಾರ್ಪೊರೇಟರ್ ಜಿ.ಕೆ.ವೆಂಕಟೇಶ್, ಜಾಲಹಳ್ಳಿ ಕಾರ್ಪೊರೇಟರ್ ಶ್ರೀನಿವಾಸಮೂರ್ತಿ ಪಾಲ್ಗೊಂಡಿದ್ದರು. ‘ಆರೋಪಗಳ ಮೂಲಕ ಮುನಿರತ್ನ ಅವರನ್ನು ಸೋಲಿಸಲು ಯತ್ನಿಸಿದರು. ಕಾರ್ಪೊರೇಟರ್‌ಗಳಿಗೂ ಕೆಟ್ಟ ಹೆಸರು ತರಲು ಯತ್ನಿಸಿದರು. ಆದರೆ, ಈಗ ಜನ ಅವರನ್ನೇ ಗೆಲ್ಲಿಸಿದ್ದಾರೆ. ಮುನಿರತ್ನ ಎಂದೆಂದಿಗೂ ಈ ಕ್ಷೇತ್ರದ ಶಾಸಕರಾಗಿ ಸೇವೆ ಮಾಡುತ್ತಾರೆ’ ಎಂದು ಜಿ.ಕೆ.ವೆಂಕಟೇಶ್ ಪ್ರತಿಕ್ರಿಯಿಸಿದರು.

ಹುಚ್ಚ ವೆಂಕಟ್ ಎಂದೇ ಉಲ್ಲೇಖ!

ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಲಾವಿದ ಹುಚ್ಚ ವೆಂಕಟ್‌, ನಾಮಪತ್ರ ಸಲ್ಲಿಸಿದ್ದು ಎಲ್‌. ವೆಂಕಟರಾಮ್‌ ಎಂಬ ಹೆಸರಿನಲ್ಲಿ. ಚುನಾವಣಾ ಕಣದಲ್ಲಿ ಅವರೂ ಕುತುಹಲ ಮೂಡಿಸಿದ್ದರಿಂದ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗಳನ್ನು ಧ್ವನಿವರ್ಧಕದಲ್ಲಿ ಪ್ರಕಟಿಸುವ ವೇಳೆ, ಅವರಿಗೆ ಸಂದಾಯವಾಗಿದ್ದ ಮತಗಳನ್ನು ಹೇಳಲಾಗುತ್ತಿತ್ತು. ಆಗ ಚುನಾವಣಾ ಸಿಬ್ಬಂದಿ ನಾಮಪತ್ರದಲ್ಲಿನ ಹೆಸರನ್ನು ಬಿಟ್ಟು ‘ಹುಚ್ಚ ವೆಂಕಟ್‌’ ಎಂದೇ ಉಲ್ಲೇಖಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT