ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡುರಾಂಡ್‌ ಕಪ್ ಫುಟ್‌ಬಾಲ್ ಟೂರ್ನಿ: ನಾಕೌಟ್‌ಗೆ ಬೆಂಗಳೂರು ಎಫ್‌ಸಿ

ಸುನಿಲ್‌, ಶಿವಶಕ್ತಿ ಕಾಲ್ಚಳಕ
Last Updated 30 ಆಗಸ್ಟ್ 2022, 13:16 IST
ಅಕ್ಷರ ಗಾತ್ರ

ಕೋಲ್ಕತ್ತ: ನಾಯಕ ಸುನಿಲ್ ಚೆಟ್ರಿ ಮತ್ತು ಶಿವಶಕ್ತಿ ನಾರಾಯಣನ್‌ ಗಳಿಸಿದ ಗೋಲುಗಳ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಡುರಾಂಡ್‌ ಕಪ್ ಟೂರ್ನಿಯ ನಾಕೌಟ್‌ ಹಂತಕ್ಕೆ ಲಗ್ಗೆಯಿಟ್ಟಿತು.

ಇಲ್ಲಿಯ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದ‌ಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 2–2ರಿಂದ ಎಫ್‌ಸಿ ಗೋವಾ ತಂಡದೊಂದಿಗೆ ಡ್ರಾ ಸಾಧಿಸಿತು. ಇದರೊಂದಿಗೆ ನಾಕೌಟ್‌ ತಲುಪ‍ಲು ಅಗತ್ಯವಿದ್ದ ಒಂದು ಪಾಯಿಂಟ್‌ ಕಲೆಹಾಕಿತು.

ಪಂದ್ಯದ ಆರಂಭದಲ್ಲಿ ಬೆಂಗಳೂರು ಹಿಡಿತ ಸಾಧಿಸಿತ್ತು. ಪ್ರಿನ್ಸ್ ಇಬಾರ ಅವರು ಗಾಯಗೊಂಡು ಹಿಂದೆ ಸರಿದ ಬಳಿಕ ನಾರಾಯಣನ್‌ ಕಣಕ್ಕೆ ಇಳಿದರು. 24ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ಸಿಕ್ಕಿತು. ಫ್ರಿ ಕಿಕ್ ಅವಕಾಶದಲ್ಲಿ ಚೆಟ್ರಿ, ಗೋವಾದ ಗೋಲ್‌ಕೀಪರ್ ಹೃತಿಕ್ ತಿವಾರಿ ಅವರ ಕಣ್ತಪ್ಪಿಸಿ ಸೊಗಸಾದ ಗೋಲು ಗಳಿಸಿದರು.

ಶಿವಶಕ್ತಿ ನಾರಾಯಣನ್ ತಂಡದ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. 26ನೇ ನಿಮಿಷದಲ್ಲಿ ಉದಾಂತ್‌ ಸಿಂಗ್ ನೆರವು ಪಡೆದ ಅವರು ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಗೆಲುವಿನ ಕನಸಿನೊಂದಿಗೆ ಬಿಎಫ್‌ಸಿ ವಿರಾಮಕ್ಕೆ ತೆರಳಿತು.

ವಿರಾಮದ ಬಳಿಕ ಗೋವಾ ತಿರುಗೇಟು ನೀಡಿತು. ಫ್ರಾಂಗ್‌ಕಿ ಬುವಮ್‌ 53ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಹಿನ್ನಡೆಯನ್ನು ತಗ್ಗಿಸಿದರು. ಇದಾದ ನಂತರ ಬೆಂಗಳೂರು ತಂಡದ ಗೋಲು ಗಳಿಕೆಯ ಅವಕಾಶವೊಂದನ್ನು ಹೃತಿಕ್ ಯಶಸ್ವಿಯಾಗಿ ತಪ್ಪಿಸಿದರು. ಆದರೆ 64ನೇ ನಿಮಿಷದಲ್ಲಿ ಲೆಸ್ಲಿ ರೆಬೆಲ್ಲೊ ಮೂಲಕ ಗೋಲು ದಾಖಲಿಸಿದ ಗೋವಾ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಬಿಎಫ್‌ಸಿ ಕ್ರಮವಾಗಿ ಜಮ್ಶೆಡ್‌ಪುರ ಎಫ್‌ಸಿ ಎದುರು 2–1ರಿಂದ ಮತ್ತು ಇಂಡಿಯನ್ ಏರ್‌ಫೋರ್ಸ್ ವಿರುದ್ಧ 4–0ಯಿಂದ ಜಯ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT