ಮಂಗಳವಾರ, ಆಗಸ್ಟ್ 16, 2022
21 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಗೋಲು ಗಳಿಸಿದ ಒಗ್ಬೆಚೆ, ಬೋರ್ಜೆಸ್

ಒಡಿಶಾ ಮಣಿಸಿ ಅಗ್ರಸ್ಥಾನಕ್ಕೇರಿದ ಮುಂಬೈ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬ್ಯಾಂಬೊಲಿನ್: ಮೊದಲಾರ್ಧದಲ್ಲಿ ಗಳಿಸಿದ ಎರಡು ಗೋಲುಗಳ ಬಲದಿಂದ ಒಡಿಶಾ ಎಫ್‌ಸಿಯನ್ನು ಮಣಿಸಿದ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು. ಜಿಎಂಸಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ 2–0 ಗೋಲುಗಳಿಂದ ಜಯ ಸಾಧಿಸಿತು.

30ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಬಾರ್ತೊಲೊಮೆ ಒಗ್ಬೆಚೆ ಮತ್ತು 45ನೇ ನಿಮಿಷದಲ್ಲಿ ಮೋಹಕ ಹೆಡರ್ ಮೂಲಕ ಗೋಲು ಗಳಿಸಿದ ರಾವ್ಲಿನ್‌ ಬೋರ್ಜೆಸ್ ಅವರು ಮುಂಬೈ ತಂಡದ ಗೆಲುವಿನ ರೂವಾರಿಗಳು. ಈ ಮೂಲಕ ಸರ್ಜಿಯೊ ಲೊಬೆರಾ ಅವರ ತಂಡ ನಾಲ್ಕು ಪಂದ್ಯಗಳಲ್ಲಿ ಮೂರನೇ ಜಯ ತನ್ನದಾಗಿಸಿಕೊಂಡಿತು. ಲೀಗ್‌ಗೆ ಕಳೆದ ವರ್ಷ ಪ್ರವೇಶ ಪಡೆದ ಒಡಿಶಾ ಎಫ್‌ಸಿ ವಿರುದ್ಧ ಮುಂಬೈ ತಂಡದ ಮೊದಲ ಜಯ ಇದಾಗಿದೆ. 

ಮುಂಬೈ ತಂಡದ ಖಾತೆಯಲ್ಲಿ ಒಂಬತ್ತು ಪಾಯಿಂಟ್‌ಗಳು ಇವೆ. ಎಟಿಕೆ ಮೋಹನ್ ಬಾಗನ್ ತಂಡ ಮೂರು ಪಂದ್ಯಗಳಿಂದ ಒಂಬತ್ತು ಪಾಯಿಂಟ್ ಕಲೆ ಹಾಕಿದೆ. ಆದರೆ ಹೆಚ್ಚು ಗೋಲು ಗಳಿಕೆಯ ಆಧಾರದಲ್ಲಿ ಮುಂಬೈ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿತು. ಒಂದು ಪಂದ್ಯದಲ್ಲಿ ಸೋತಿರುವ ಮುಂಬೈ ಒಟ್ಟು ಆರು ಗೋಲು ಗಳಿಸಿದೆ. ಎಟಿಕೆ ಮೋಹನ್ ಬಾಗನ್ ನಾಲ್ಕು ಗೋಲು ಗಳಿಸಿದೆ. ಭಾನುವಾರದ ಸೋಲಿನೊಂದಿಗೆ ಒಡಿಶಾ ಎಫ್‌ಸಿ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಕಂಡಂತಾಯಿತು. ಒಂದು ಪಂದ್ಯವನ್ನು ಅದು ಡ್ರಾ ಮಾಡಿಕೊಂಡಿದೆ. 

ಆರಂಭದಲ್ಲೇ ಹಿಡಿತ ಸಾಧಿಸಿದ ಮುಂಬೈ

ಆರಂಭದಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮುಂಬೈ ಆಟಗಾರರು ಉತ್ತಮ ಪಾಸ್‌ಗಳ ಮೂಲಕ ಎದುರಾಳಿ ತಂಡದವರನ್ನು ಕಂಗೆಡಿಸಿದರು. ಆದರೆ ಗೋಲು ಗಳಿಸುವ ಮೊದಲ ಅವಕಾಶ ಒಡಿಶಾ ಎಫ್‌ಸಿಗೆ ಲಭಿಸಿತ್ತು. ನಾಲ್ಕನೇ ನಿಮಿಷದಲ್ಲಿ ಸಿಕ್ಕಿದ ಫ್ರೀ ಕಿಕ್‌ನಲ್ಲಿ ಡೀಗೊ ಮೌರಿಸಿಯೊ ಒದ್ದ ಚೆಂಡು ಕ್ರಾಸ್ ಬಾರ್‌ನ ಮೇಲಿಂದ ಹೊರಗೆ ಚಿಮ್ಮಿತು. 18ನೇ ನಿಮಿಷದಲ್ಲಿ ಮುಂಬೈಗೂ ಅತ್ಯುತ್ತಮ ಅವಕಾಶ ದೊರಕಿತು. ಬಲಭಾಗದಿಂದ ಅಹಮ್ಮದ್ ಜಹೊ ನೀಡಿದ ಕ್ರಾಸ್‌ ನಿಯಂತ್ರಿಸಿದ ಗೊಡಾರ್ಡ್‌ಗೆ ಗೋಲ್‌ಕೀಪರ್ ಕಮಲ್‌ಜೀತ್ ಸಿಂಗ್ ಅವರನ್ನು ವಂಚಿಸಿ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

30ನೇ ನಿಮಿಷದಲ್ಲಿ ವಿಘ್ನೇಶ್ ದಕ್ಷಿಣಮೂರ್ತಿ ಮಾಡಿದ ಪ್ರಮಾದದಿಂದ ಮುಂಬೈಗೆ ಪೆನಾಲ್ಟಿ ಲಭಿಸಿತು. ಒಗ್ಬೆಚೆ ಚೆಂಡನ್ನು ನೆಲಮಟ್ಟದಲ್ಲಿ ಒದ್ದರು. ಕಮಲ್‌ಜೀತ್ ಸಿಂಗ್ ತಡೆಯಲು ನಡೆಸಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ. ಈ ಬಾರಿ ಒಡಿಶಾ ಎಫ್‌ಸಿ ನೀಡಿದ ಮೂರನೇ ಪೆನಾಲ್ಟಿ ಇದಾಗಿದೆ. 33ನೇ ನಿಮಿಷದಲ್ಲಿ ಬಿದ್ದು ಗಾಯಗೊಂಡ ಕಮಲ್‌ಜೀತ್ ಬದಲಿಗೆ ರವಿಕುಮಾರ್ ಅವರನ್ನು ಗೋಲ್‌ಕೀಪರ್ ಆಗಿ ಕಣಕ್ಕೆ ಇಳಿಸಲಾಯಿತು. 43ನೇ ನಿಮಿಷದಲ್ಲಿ ಬಿಪಿನ್ ಸಿಂಗ್ ಅವರ ಪಾಸ್‌ನಲ್ಲಿ ಹ್ಯೂಗೊ ಬೌಮೋಸ್‌ ಉತ್ತಮ ಅವಕಾಶವನ್ನು ಕೈಚೆಲ್ಲಿದರು. ಆದರೆ ಎರಡು ನಿಮಿಷಗಳ ನಂತರ ಗೋಲು ಗಳಿಸುವಲ್ಲಿ ತಂಡ ಯಶಸ್ವಿಯಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.