ಕೋಲ್ಕತ್ತ: ಟೈಬ್ರೇಕರ್‌ನಲ್ಲಿ ಗೋಲ್‌ಕೀಪರ್ ಗುರ್ಮೀತ್ ಸಿಂಗ್ ಅವರ ಅಮೋಘ ಪ್ರದರ್ಶನದಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ, ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಮೋಹನ್ ಬಾಗನ್ ತಂಡವನ್ನು ಶನಿವಾರ ಟೈಬ್ರೇಕರ್‌ನಲ್ಲಿ ಸೋಲಿಸಿ ಮೊದಲ ಬಾರಿ ಪ್ರಶಸ್ತಿ ಗೆದ್ದುಕೊಂಡಿತು.
ನಿಗದಿ ಅವಧಿಯ ಆಟ ಮುಗಿದಾಗ ಸ್ಕೋರ್ 2–2 ಸಮನಾಗಿತ್ತು. ಟೈಬ್ರೇಕರ್‌ನಲ್ಲಿ, 24 ವರ್ಷ ವಯಸ್ಸಿನ ಗುರ್ಮೀತ್ ಅವರ ಕೆಲವು ತಡೆಗಳಿಂದ ನಾರ್ತ್‌ಈಸ್ಟ್ ತಂಡ 4–3 ಗೋಲುಗಳಿಂದ ಜಯಗಳಿಸಿತು.ಬಾಗನ್ ತಂಡದ ಲಿಸ್ಟನ್ ಕೊಲಾಕೊ, ನಾಯಕ ಸುಭಾಸಿಶ್ ಬೋಸ್ ಅವರ ಗೋಲು ಯತ್ನಗಳನ್ನು ಗುರ್ಮೀತ್ ತಡೆದರು. ಗಿಲೆರ್ಮೊ ಫೆರ್ನಾಂಡಿಸ್, ನಾಯಕ ಮಿಗೆಲ್ ಝಬಾಕೊ ಟೋಮ್, ಪಾರ್ಥಿವ್ ಗೊಗೊಯಿ ಮತ್ತು ಅಲಾದ್ದೀನ್ ಅಜರೇಯಿ ಅವರು ನಾರ್ತ್‌ಈಸ್ಟ್ ಪರ ಚೆಂಡನ್ನು
ಗುರಿತಲುಪಿಸಿದರು.
ಜೇಸನ್ ಕಮಿಂಗ್ಸ್, ಮನ್ವೀರ್ ಸಿಂಗ್ ಮತ್ತು ದಿಮಿತ್ರಿ ಪೆಟ್ರಾಟೊಸ್ ಬಾಗನ್ ಪರ ಯಶ ಗಳಿಸಿದರು.