5
ಇಂದು ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ ಹೋರಾಟ

ಇತಿಹಾಸದ ಹೊಸ್ತಿಲಲ್ಲಿ ಕ್ರೊವೇಷ್ಯಾ

Published:
Updated:

ಮಾಸ್ಕೊ: ಈ ಬಾರಿಯ ವಿಶ್ವಕಪ್‌ನಲ್ಲಿ ಅಮೋಘ ಆಟ ಆಡಿ ಅಭಿಮಾನಿಗಳ ಮನ ಗೆದ್ದಿರುವ ಕ್ರೊವೇಷ್ಯಾ ತಂಡ ಈಗ ಇತಿಹಾಸ ನಿರ್ಮಿಸುವತ್ತ ಚಿತ್ತ ನೆಟ್ಟಿದೆ.

ಬುಧವಾರ ನಡೆಯುವ ಎರಡನೇ ಸೆಮಿಫೈನಲ್‌ನಲ್ಲಿ ಲೂಕಾ ಮಾಡ್ರಿಚ್‌ ಪಡೆ ಬಲಿಷ್ಠ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಕ್ರೊವೇಷ್ಯಾ ತಂಡ ಈ ಪಂದ್ಯದಲ್ಲಿ ಗೆದ್ದರೆ ವಿಶ್ವಕಪ್‌ನಲ್ಲಿ ಮೊದಲ ಬಾರಿ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಎರಡು ದಶಕಗಳ ಹಿಂದೆ ಚೊಚ್ಚಲ ವಿಶ್ವಕಪ್‌ ಆಡಿದ್ದ ಕ್ರೊವೇಷ್ಯಾ ಮೊದಲ ಪ್ರಯತ್ನದಲ್ಲೇ ಮೂರನೇ ಸ್ಥಾನ ಗಳಿಸಿ ಫುಟ್‌ಬಾಲ್‌ ಜಗತ್ತಿನ ಗಮನ ಸೆಳೆದಿತ್ತು. ನಂತರ ಮೂರು ಬಾರಿ (2002, 2006 ಮತ್ತು 2014) ಟೂರ್ನಿಗೆ ಅರ್ಹತೆ ಗಳಿಸಿದ್ದ ಈ ತಂಡ ಗುಂಪು ಹಂತದಲ್ಲೇ ಹೊರ ಬಿದ್ದಿತ್ತು. ಹೀಗಾಗಿ ಈ ಬಾರಿಯೂ ಗುಂಪು ಹಂತದಲ್ಲೇ ತಂಡದ ಹೋರಾಟ ಮುಗಿಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಲೂಕಾ ಪಡೆ ಆಡಿದ ಐದು ಪಂದ್ಯಗಳಲ್ಲೂ ಛಲದಿಂದ ಹೋರಾಡಿತ್ತು. ‍ಪ್ರೀ ಕ್ವಾರ್ಟರ್‌ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ತಂಡದಿಂದ ಮೂಡಿಬಂದಿದ್ದ ಆಟ ಅಭಿಮಾನಿಗಳು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಿತ್ತು.

ವಿಶ್ವಕಪ್‌ನ ನಾಕೌಟ್‌ ಹಂತದಲ್ಲಿ ಆಡಿದ ಎರಡು ಪಂದ್ಯಗಳನ್ನೂ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದ ಹಿರಿಮೆಯನ್ನು ಲೂಕಾ ಪಡೆ ತನ್ನದಾಗಿಸಿಕೊಂಡಿತ್ತು.

ಮಿಡ್‌ಫೀಲ್ಡರ್‌ಗಳಾದ ಲೂಕಾ ಮತ್ತು ಇವಾನ್‌ ರ‍್ಯಾಕಿಟಿಚ್‌ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರೆ, ಮಾರಿಯೊ ಮ್ಯಾಂಡ್‌ಜುಕಿಚ್‌ ಮತ್ತು ಡೇಜನ್‌ ಲಾವರೆನ್‌, ಪಾದರಸದಂತಹ ಚಲನೆಯ ಮೂಲಕ ಫುಟ್‌ಬಾಲ್‌ ಪ್ರಿಯರನ್ನು ಮೂಕವಿಸ್ಮಿತರನ್ನಾಗಿಸಿದ್ದರು. ಇವಾನ್‌ ಪೆರಿಸಿಚ್‌ ಕೂಡಾ ಮಿಂಚಿದ್ದರು. ಹೀಗಾಗಿ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವ ಸಂಪೂರ್ಣ ಜವಾಬ್ದಾರಿ ಈಗ ಇವರ ಮೇಲಿದೆ.

ಇಂಗ್ಲೆಂಡ್‌ಗೆ ಎರಡನೇ ಪ್ರಶಸ್ತಿಯ ಕನಸು: ಸತತ ಆರನೇ ಬಾರಿ ವಿಶ್ವಕಪ್‌ಗೆ ಅರ್ಹತೆ ಗಳಿಸಿರುವ ಇಂಗ್ಲೆಂಡ್‌ ಕೂಡಾ ಗೆಲುವಿನ ಕನಸು ಕಾಣುತ್ತಿದೆ.

ಗರೆತ್‌ ಸೌಥ್‌ಗೇಟ್‌ ಅವರ ಗರಡಿಯಲ್ಲಿ ಪಳಗಿರುವ ಈ ತಂಡ ಪ್ರತಿಭಾನ್ವಿತರ ಕಣಜವಾಗಿದೆ. ನಾಯಕ ಹ್ಯಾರಿ ಕೇನ್‌ ಅವರು ಅಭಿಮಾನಿಗಳ ಕಣ್ಮಣಿಯಾಗಿದ್ದಾರೆ. ಈ ಬಾರಿ ಅತಿ ಹೆಚ್ಚು ಗೋಲು ಗಳಿಸಿದ (6) ಹಿರಿಮೆ ಅವರದ್ದಾಗಿದೆ. ಕೀರನ್‌ ಟ್ರಿಪ್ಪಿಯರ್‌, ಜಾನ್‌ ಸ್ಟೋನೆಸ್‌ ಮತ್ತು ಆ್ಯಷ್ಲೆ ಯಂಗ್ ಅವರ ಮೇಲೂ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಪ್ರಮುಖ ಮಾಹಿತಿಗಳು

* 20 ವರ್ಷಗಳ ನಂತರ ಕ್ರೊವೇಷ್ಯಾ ತಂಡ ವಿಶ್ವಕಪ್‌ನಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದೆ. 1998ರಲ್ಲಿ ಫ್ರಾನ್ಸ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ತಂಡ ಒಮ್ಮೆಯೂ ಫೈನಲ್ ತಲುಪಿಲ್ಲ.

* ಇಂಗ್ಲೆಂಡ್‌ ತಂಡ 28 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ತಂಡ 1990ರಲ್ಲಿ ಇಟಲಿಯಲ್ಲಿ ನಡೆದಿದ್ದ ಟೂರ್ನಿಯಲ್ಲಿ ಕೊನೆಯ ಬಾರಿ ನಾಲ್ಕರ ಘಟ್ಟದಲ್ಲಿ ಆಡಿತ್ತು. ಈ ತಂಡ 1966ರಲ್ಲಿ ಟ್ರೋಫಿ ಜಯಿಸಿತ್ತು.‌

* ಕ್ರೊವೇಷ್ಯಾ ಎದುರು ಆಡಿರುವ ಹಿಂದಿನ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್‌ ಒಂಬತ್ತು ಗೋಲುಗಳನ್ನು ದಾಖಲಿಸಿದೆ.

ಪಂದ್ಯ ನಡೆಯುವ ಸ್ಥಳ: ಲುಜ್‌ನಿಕಿ ಕ್ರೀಡಾಂಗಣ

ಆರಂಭ: ರಾತ್ರಿ 11.30

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !