ಮಂಗಳವಾರ, ಮಾರ್ಚ್ 21, 2023
20 °C
ಎರಡು ಗೋಲು ಗಳಿಸಿದ ನಾಯಕ ಹ್ಯಾರಿ ಕೇನ್; ಸ್ಪೇನ್‌ಗೆ ಇಟಲಿ ಎದುರಾಳಿ

ಯೂರೊ ಕಪ್: ಸೆಮಿಫೈನಲ್‌ಗೆ ಇಂಗ್ಲೆಂಡ್‌, ಡೆನ್ಮಾರ್ಕ್ ಎದುರಾಳಿ

ಎಪಿ Updated:

ಅಕ್ಷರ ಗಾತ್ರ : | |

Prajavani

ರೋಮ್‌: ಅಮೋಘ ಆಟವಾಡಿದ ಇಂಗ್ಲೆಂಡ್ ತಂಡ ಯೂರೊ ಕಪ್‌ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ನಾಲ್ಕರ ಘಟ್ಟ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ಹ್ಯಾರಿ ಕೇನ್ ಬಳಗ ಡೆನ್ಮಾರ್ಕ್‌ ವಿರುದ್ಧ ಕಣಕ್ಕಿಳಿಯಲಿದ್ದು ಸ್ಪೇನ್‌ ಎದುರು ಇಟಲಿ ಸೆಣಸಲಿದೆ.

ಶನಿವಾರ ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಕ್ರೇನ್ ವಿರುದ್ಧ 4–0ಯಿಂದ ಇಂಗ್ಲೆಂಡ್ ಗೆಲುವು ಸಾಧಿಸಿತು. ಬಾಕುವಿನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಡೆನ್ಮಾರ್ಕ್‌ 2–1ರಲ್ಲಿ ಜೆಕ್ ಗಣರಾಜ್ಯವನ್ನು ಸೋಲಿಸಿತ್ತು.

ಗುಂಪು ಹಂತದ ಮೂರು ಪಂದ್ಯಗಳು ಸೇರಿದಂತೆ ಕ್ವಾರ್ಟರ್ ಫೈನಲ್‌ಗೂ ಮೊದಲಿನ ಎಲ್ಲ ಪಂದ್ಯಗಳನ್ನೂ ಇಂಗ್ಲೆಂಡ್ ತವರಿನ ವೆಂಬ್ಲಿ ಕ್ರೀಡಾಂಗಣದಲ್ಲಿ ಆಡಿತ್ತು. ತವರಿನಾಚೆ ಆಡಿದ ಏಕೈಕ ಪಂದ್ಯದಲ್ಲಿ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಎದುರಾಳಿ ತಂಡವನ್ನು ಕಂಗೆಡಿಸಿತು. ಎರಡು ಗೋಲು ಗಳಿಸಿದ ನಾಯಕ ಹ್ಯಾರಿ ಕೇನ್ ಭರ್ಜರಿ ಜಯಕ್ಕೆ ಕಾರಣರಾದರು. ಹ್ಯಾರಿ ಮ್ಯಾಗ್ಯುರೆ ಮತ್ತು ಜೋರ್ಡಾನ್ ಹೆಂಡೆರ್ಸನ್ ತಲಾ ಒಂದೊಂದು ಗೋಲು ಗಳಿಸಿದರು.

1966ರ ವಿಶ್ವಕಪ್‌ ನಂತರ ಪ್ರಮುಖ ಟೂರ್ನಿಯೊಂದರ ನಾಕೌಟ್ ಹಂತದಲ್ಲಿ ಇಂಗ್ಲೆಂಡ್ ನಾಲ್ಕು ಗೋಲು ಗಳಿಸಿದ್ದು ಇದೇ ಮೊದಲು. 1966ರ ವಿಶ್ವಕಪ್‌ ಫೈನಲ್‌ನಲ್ಲಿ ವೆಸ್ಟ್‌ ಜರ್ಮನಿಯನ್ನು 4–2ರಲ್ಲಿ ಮಣಿಸಿತ್ತು. ಯುರೋಪಿಯನ್ ಚಾಂಪಿಯನ್‌ಷಿಪ್‌ನಲ್ಲಿ 1996ರಲ್ಲಿ ಇಂಗ್ಲೆಂಡ್ ಕೊನೆಯದಾಗಿ ನಾಲ್ಕರ ಘಟ್ಟ ಪ್ರವೇಶಿಸಿತ್ತು. 

ನಾಲ್ಕನೇ ನಿಮಿಷದಲ್ಲಿ ರಹೀಂ ಸ್ಟರ್ಲಿಂಗ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಕೇನ್ ಸುಲಭವಾಗಿ ಗೋಲುಪೆಟ್ಟಿಗೆಯ ಒಳಗೆ ತಳ್ಳಿದರು. ತಡೆಯಲು ಪ್ರಯತ್ನಿಸಿದ ಗೋಲ್‌ಕೀಪರ್ ಜಾರ್ಜಿ ಬುಚಾನ್ ಅವರ ತೋಳಿಗೆ ಸೋಕುತ್ತ ಚೆಂಡು ಬಲೆಯೊಳಗೆ ಸೇರಿತು. ಇದು ಟೂರ್ನಿಯಲ್ಲಿ ಕೇನ್ ಗಳಿಸಿದ ಎರಡನೇ ಗೋಲಾಗಿತ್ತು. ನಂತರ ಮೊದಲಾರ್ಧದಲ್ಲಿ ಎರಡೂ ತಂಡಗಳು ಜಿದ್ದಾಜಿದ್ದಿಯ ಹೋರಾಟ ನಡೆಸಿದವು.

ದ್ವಿತೀಯಾರ್ಧದ ಆರಂಭದಲ್ಲೇ ಇಂಗ್ಲೆಂಡ್ ಮುನ್ನಡೆ ಹೆಚ್ಚಿಸಿತು. 46ನೇ ನಿಮಿಷದಲ್ಲಿ ಲ್ಯೂಕ್ ಶಾ ಅವರ ಫ್ರೀ ಕಿಕ್‌ನಲ್ಲಿ ಹೆಡರ್ ಮೂಲಕ ಹ್ಯಾರಿ ಮ್ಯಾಗ್ಯುರೆ ಗೋಲು ಗಳಿಸಿದರು. ನಾಲ್ಕು ನಿಮಿಷಗಳ ನಂತರ ಶಾ ಅವರ ಕ್ರಾಸ್‌ನಲ್ಲಿ ಹ್ಯಾರಿ ಕೇನ್ ಹೆಡರ್ ಮೂಲಕ ಚೆಂಡನ್ನು ಗುರಿ ಮುಟ್ಟಿಸಿದರು. ಜೋರ್ಡಾನ್ ಹೆಂಡೆರ್ಸನ್ 63ನೇ ನಿಮಿಷದಲ್ಲಿ ಮುನ್ನಡೆಯನ್ನು ಹೆಚ್ಚಿಸಿದರು. 

ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹೆಚ್ಚುವರಿ ಅವಧಿಯಲ್ಲಿ ಸ್ವೀಡನ್ ವಿರುದ್ಧ 2–1ರಲ್ಲಿ ಜಯ ಗಳಿಸಿದ್ದ ಉಕ್ರೇನ್ ಮೊದಲಾರ್ಧದಲ್ಲಿ ಆಗಾಗ ಪ್ರತಿದಾಳಿಯ ಮೂಲಕ ಇಂಗ್ಲೆಂಡ್‌ಗೆ ಪೈಪೋಟಿ ನೀಡಿತ್ತು. ತಂಡಕ್ಕೆ ಗೋಲು ಗಳಿಸಲು ಸಾಕಷ್ಟು ಅವಕಾಶಗಳು ಸೃಷ್ಟಿಯಾಗಿದ್ದವು. ಆದರೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಇಂಗ್ಲೆಂಡ್ ಡಿಫೆಂಡರ್‌ಗಳು ಬಿಡಲಿಲ್ಲ.

ಸೆಮಿಫೈನಲ್ ವೇಳಾಪಟ್ಟಿ

ದಿನಾಂಕ; ತಂಡಗಳು; ಸ್ಥಳ: ಸಮಯ

ಜು.6; ಇಟಲಿ–ಸ್ಪೇನ್; ಲಂಡನ್; 12.30

ಜು.7; ಇಂಗ್ಲೆಂಡ್‌–ಡೆನ್ಮಾರ್ಕ್‌; ಲಂಡನ್‌; 12.30

(ಸಮಯ ಭಾರತೀಯ ಕಾಲಮಾನ, ರಾತ್ರಿ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು