ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup| ಒತ್ತಡದಲ್ಲಿ ಬೆಲ್ಜಿಯಂ

Last Updated 30 ನವೆಂಬರ್ 2022, 19:30 IST
ಅಕ್ಷರ ಗಾತ್ರ

ದೋಹಾ: ಗೆಲುವಿನ ಒತ್ತಡದಲ್ಲಿರುವ ಬೆಲ್ಜಿಯಂ ತಂಡವು ಗುರುವಾರ ಎಫ್‌ ಗುಂಪಿನ ಹಣಾಹಣಿಯಲ್ಲಿ ಕ್ರೊವೇಷ್ಯಾ ಸವಾಲು ಎದುರಿಸಲಿದೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಬೆಲ್ಜಿಯಂಗೆ ಅಹಮದ್‌ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವು 16ರ ಘಟ್ಟ ತಲುಪಲು ನಿರ್ಣಾಯಕ ಎನಿಸಿದೆ. ಬೆಲ್ಜಿಯಂ ತಂಡವು ಕಳೆದ ಪಂದ್ಯದಲ್ಲಿ 0–2ರಿಂದಮೊರೊಕ್ಕೊ ಎದುರು ನಿರಾಸೆ ಅನುಭವಿಸಿತ್ತು.

ಈ ಪಂದ್ಯವು ಡ್ರಾ ಆದರೆ, ಮೊರೊಕ್ಕೊ ತಂಡವು ಕೆನಡಾ ಎದುರು ಭಾರೀ ಅಂತರದಿಂದ ಸೋಲುವುದನ್ನುಬೆಲ್ಜಿಯಂ ನಿರೀಕ್ಷಿಸಬೇಕಾಗುತ್ತದೆ.

2018ರ ಟೂರ್ನಿಯ ಸೆಮಿಫೈನಲ್‌ನಲ್ಲಿ ಬೆಲ್ಜಿಯಂ ತಂಡಕ್ಕೆ ಸೋಲುಣಿಸಿದ್ದ ಕ್ರೊವೇಷ್ಯಾ ತಂಡವು, ಈ ಪಂದ್ಯದಲ್ಲಿ ಕೇವಲ ಡ್ರಾ ಸಾಧಿಸಿದರೂ ನಾಕೌಟ್‌ ಖಚಿತಪಡಿಸಿಕೊಳ್ಳುತ್ತದೆ.

ಎಫ್‌ ಗುಂಪಿನಲ್ಲಿ ಕ್ರೊವೇಷ್ಯಾ ನಾಲ್ಕು ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಮೊರೊಕ್ಕೊ ಎರಡನೇ ಸ್ಥಾನದಲ್ಲಿದೆ. ಆ ತಂಡದ ಬಳಿ ಕೂಡ ನಾಲ್ಕು ಪಾಯಿಂಟ್ಸ್ ಇವೆ. ಬೆಲ್ಜಿಯಂ ಮೂರು ಪಾಯಿಂಟ್ಸ್ ಹೊಂದಿದೆ.

ಗುರುವಾರವೇ ನಡೆಯಲಿರುವ ಪಂದ್ಯದಲ್ಲಿ ಮೊರೊಕ್ಕೊ–ಕೆನಡಾ ಸೆಣಸಲಿವೆ. ಈ ಹಣಾಹಣಿಯಲ್ಲಿ ಮೊರೊಕ್ಕೊ ಈಗಾಗಲೇ ಹೊರಬಿದ್ದಿರುವ ಕೆನಡಾ ಎದುರು ಡ್ರಾ ಸಾಧಿಸಿದರೂ 16ರ ಘಟ್ಟಕ್ಕೆ ಲಗ್ಗೆಯಿಡಲಿದೆ.

ಜರ್ಮನಿಗೆ ಕೋಸ್ಟರಿಕಾ ಸವಾಲು: ಇ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಗುರುವಾರ ಜರ್ಮನಿ ತಂಡವು ಕೋಸ್ಟರಿಕಾಗೆ ಮುಖಾಮುಖಿಯಾಗಲಿದೆ.

ಇಲ್ಲಿ ಗೆದ್ದರೆ ಮಾತ್ರ ಜರ್ಮನಿ ತಂಡಕ್ಕೆ 16ರ ಘಟ್ಟ ಪ್ರವೇಶಿಸುವ ಅವಕಾಶವಿದೆ. ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ಸ್ ಗಳಿಸಿರುವ ತಂಡವು ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ. ಕೋಸ್ಟರಿಕಾ ಮೂರನೇ ಸ್ಥಾನದಲ್ಲಿದೆ.

ಇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿರುವ ಸ್ಪೇನ್ ಮತ್ತು ಜಪಾನ್‌ ಸೆಣಸಲಿವೆ. ಗುಂಪಿನಲ್ಲಿ ಮೊದಲ ಸ್ಥಾನದಲ್ಲಿರುವ ಸ್ಪೇನ್‌ ಬಹುತೇಕ ನಾಕೌಟ್‌ ಸ್ಥಾನ ಖಚಿತಪಡಿಸಿಕೊಂಡಿದೆ. ಜಪಾನ್‌ಗೆ ಈ ಪಂದ್ಯ ಮಹತ್ವದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT