ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA Football World Cup-2022 | ಜಪಾನ್‌ಗೆ ಸಾಟಿಯಾಗದ ಸ್ಪೇನ್‌

ಕೋಸ್ಟರಿಕಾ ಎದುರು ಗೆದ್ದರೂ ಹೊರಬಿದ್ದ ಜರ್ಮನಿ
Last Updated 2 ಡಿಸೆಂಬರ್ 2022, 18:42 IST
ಅಕ್ಷರ ಗಾತ್ರ

ದೋಹಾ: ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದ ಸುಮೊ ಪಟುಗಳ ನಾಡು ಜಪಾನ್‌ನ ತಂಡವು ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ 16ರ ಘಟ್ಟ ತಲುಪಿತು.

ಇಲ್ಲಿನ ಖಲೀಫಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ‘ಇ’ ಗುಂಪಿನ ಹಣಾಹಣಿಯಲ್ಲಿ ಜಪಾನ್‌ 2–1ರಿಂದ ಬಲಿಷ್ಠ ಸ್ಪೇನ್ ತಂಡಕ್ಕೆ ಆಘಾತ ನೀಡಿತು..ಇಲ್ಲಿ ಸೋತರೂ ಸ್ಪೇನ್‌ನ ಪ್ರೀಕ್ವಾರ್ಟರ್‌ ಅರ್ಹತೆಗೆ ಧಕ್ಕೆಯಾಗಲಿಲ್ಲ. ಆದರೆ ಈ ಫಲಿತಾಂಶವು ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡವನ್ನು ಟೂರ್ನಿಯಿಂದ ಹೊರಹಾಕಿತು.

ಜರ್ಮನಿ ಇದೇ ಗುಂಪಿನ ಕೊನೆಯ ಪಂದ್ಯದಲ್ಲಿ ಕೋಸ್ಟರಿಕಾ ಎದುರು 4–2ರಿಂದ ಗೆದ್ದಿತು. ಆದರೆ ಗೋಲು ಅಂತರದಲ್ಲಿ ಹಿನ್ನಡೆಯಾಗಿದ್ದರಿಂದ ಆ ತಂಡದ ಪ್ರೀಕ್ವಾರ್ಟರ್ ಪ್ರವೇಶದ ಬಾಗಿಲು ಮುಚ್ಚಿತು.

ಗುಂಪು ಹಂತದ ಪಂದ್ಯಗಳು ಕೊನೆಗೊಂಡ ಬಳಿಕ ಸ್ಪೇನ್‌ ಮತ್ತು ಜರ್ಮನಿ ತಲಾ 4 ಪಾಯಿಂಟ್ಸ್ ಗಳಿಸಿದ್ದವು.

ಜಪಾನ್ ತಂಡದ ಮತ್ತೊಂದು ಶ್ರೇಷ್ಠ ಜಯ: ಗುಂಪಿನ ಮೊದಲ ಪಂದ್ಯದಲ್ಲಿ ಜರ್ಮನಿಗೆ ಆಘಾತ ನೀಡಿದ್ದ ಜಪಾನ್ ಈ ಪಂದ್ಯದಲ್ಲಿಯೂ ಉತ್ತಮ ಆಟವಾಡಿತು.

ಪಂದ್ಯದ 11ನೇ ನಿಮಿಷದಲ್ಲೇ ಹೆಡರ್‌ ಮೂಲಕ ಚೆಂಡನ್ನು ಗುರಿ ಸೇರಿಸಿದ ಅಲ್ವೆರೊ ಮೊರಾಟ ಅವರು ಸ್ಪೇನ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಮೊದಲಾರ್ಧದ ಬಳಿಕ ಜಪಾನ್ ಆಟ ರಂಗು ಪಡೆದುಕೊಂಡಿತು.

ರಿತ್ಸು ದೊವಾನ್‌ 48ನೇ ನಿಮಿಷದಲ್ಲಿ ಚೆಂಡನ್ನು ಗೋಲ್‌ಪೋಸ್ಟ್‌ಗೆ ಸೇರಿಸಿದರು. ಇದಾದ ಮೂರು ನಿಮಿಷದಲ್ಲೇ ಆವೊ ತನಕಾ ಗೋಲು ಗಳಿಸಿದಾಗ ಜಪಾನ್ ಆಟಗಾರರ ಸಂಭ್ರಮದ ಕಟ್ಟೆಯೊಡೆಯಿತು. ಆದರೆ ಈ ಕುರಿತು ಗೊಂದಲವಿದ್ದ ಕಾರಣ ವಿಡಿಯೊ ಮರುಪರಿಶೀಲಿಸಿ ಗೋಲು ನೀಡಲಾಯಿತು.

ಇದಾದ ಬಳಿಕ ಸ್ಪೇನ್‌ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಪರದಾಡಿತು. ಕೊನೆಯ ಹಂತದಲ್ಲಿ ಎದುರಾಳಿಯ ರಕ್ಷಣಾ ಕೋಟೆಯನ್ನು ಭೇದಿಸಲು ನಡೆಸಿದ ಹರಸಾಹಸ ವ್ಯರ್ಥವಾಯಿತು.

16ರ ಘಟ್ಟದಲ್ಲಿ ಸ್ಪೇನ್ ತಂಡವು ಮೊರೊಕ್ಕೊ ಎದುರು ಆಡಲಿದ್ದರೆ, ಜಪಾನ್‌ ತಂಡವು ಕ್ರೊವೇಷ್ಯಾಗೆ ಮುಖಾಮುಖಿಯಾಗಲಿದೆ.

ಹೊರಬಿದ್ದ ನಾಲ್ಕು ಬಾರಿಯ ಚಾಂಪಿಯನ್‌

ಅಲ್‌ ಖೋರ್, ಕತಾರ್‌ (ಎಎಫ್‌ಪಿ): ನಾಲ್ಕು ಬಾರಿಯ ಚಾಂಪಿಯನ್‌ ಜರ್ಮನಿ ಸತತ ಎರಡನೇ ವಿಶ್ವಕಪ್‌ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತು.

ಅಲ್‌ಬೈತ್‌ ಕ್ರೀಡಾಂಗಣದಲ್ಲಿ ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಜರ್ಮನಿ ತಂಡವು ಕೋಸ್ಟರಿಕಾವನ್ನು ಮಣಿಸಿತು. ಗೆಲ್ಲಲೇಬೇಕಿದ್ದ ಹಣಾಹಣಿಯಲ್ಲಿ ಜಯ ಒಲಿದರೂ ಆ ತಂಡದ ಪ್ರೀಕ್ವಾರ್ಟರ್‌ ಅರ್ಹತೆಯು ಜಪಾನ್‌–ಸ್ಪೇನ್‌ ನಡುವಣ ಪಂದ್ಯದ ಫಲಿತಾಂಶವನ್ನು ಅವಲಂಬಿಸಿತ್ತು. ಸ್ಪೇನ್‌ ಈ ಪಂದ್ಯದಲ್ಲಿ ಗೆದ್ದಿದ್ದರೆ ಅಥವಾ ಡ್ರಾ ಮಾಡಿಕೊಂಡಿದ್ದರೆ ಜರ್ಮನಿಗೆ ಅವಕಾಶವಿತ್ತು.

ಈ ಸೋಲಿನೊಂದಿಗೆ ಕೋಸ್ಟರಿಕಾ ತಂಡವೂ ಟೂರ್ನಿಯಿಂದ ಹೊರಬಿದ್ದಿತು.

ಜರ್ಮನಿ ತಂಡಕ್ಕಾಗಿ ಕಾಯ್ ಹವೆರ್ಜ್‌ ಎರಡು ಗೋಲು ಗಳಿಸಿದರು. ಸೆರ್ಜೆ ಗ್ನ್ಯಾಬ್ರಿ ಮತ್ತು ನಿಕ್ಲಾಸ್‌ ಫುಲ್‌ಕ್ರಗ್‌ ತಲಾ ಒಂದು ಗೋಲು ಹೊಡೆದರು. ಕೋಸ್ಟರಿಕಾ ಪರ ಯೆಲ್‌ಸ್ಟಿನ್ ತಜೆದಾ ಚೆಂಡನ್ನು ಗುರಿ ಸೇರಿಸಿದರೆ, ಜರ್ಮನಿಯ ಮ್ಯಾನ್ಯುಯೆಲ್ ನೆಯುರ್‌ ‘ಉಡುಗೊರೆ ಗೋಲು‘ ನೀಡಿದರು.

2018ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಟೂರ್ನಿಯಲ್ಲೂ ಜರ್ಮನಿ ಗುಂಪುದಲ್ಲೇ ಸೋತು ಹೊರನಡೆದಿತ್ತು.

ಗೋಲುಗಳ ವಿವರ

ಜರ್ಮನಿ– 4

ಸೆರ್ಜೆ ಗ್ನ್ಯಾಬ್ರಿ (10ನೇ ನಿ.)

ಕಾಯ್‌ ಹವೆರ್ಜ್‌ (73, 85ನೇ ನಿ.)

ನಿಕ್ಲಾಸ್‌ ಫುಲ್‌ಕ್ರಗ್‌ (89ನೇ ನಿ.)

ಕೋಸ್ಟರಿಕಾ– 2

ಯೆಲ್ಟ್‌ಸಿನ್‌ ತಜೆದಾ (58ನೇ ನಿ.)

ಮ್ಯಾನ್ಯುಯೆಲ್‌ ನೆಯುರ್‌ (70ನೇ ನಿ. ‘ಉಡುಗೊರೆ ಗೋಲು‘)

ಜಪಾನ್–2

ರಿತ್ಸು ದೊವಾನ್‌ (48ನೇ ನಿ.)

ಅವೊ ತನಕಾ (51ನೇ ನಿ.)

ಸ್ಪೇನ್‌–1

ಅಲ್ವೆರೊ ಮೊರಾಟ (11ನೇ ನಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT