ಶನಿವಾರ, ಜನವರಿ 18, 2020
20 °C
ಐಎಸ್‌ಎಲ್‌ ಫುಟ್‌ಬಾಲ್‌: ಎರಡು ಗೋಲು ಗಳಿಸಿದ ಕೊರೊಮಿನಾಸ್

ಫುಟ್ಬಾಲ್ : ಅಗ್ರಸ್ಥಾನಕ್ಕೇರಿದ ಗೋವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಗಾಂವ್ (ಪಿಟಿಐ): ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಎಫ್‌ಸಿ ಗೋವಾ ತಂಡ ಹೂಡಿದ ತಂತ್ರಗಳ ಮುಂದೆ ಒಡಿಶಾ ಎಫ್‌ಸಿ ತಂಡ ಮಂಕಾಯಿತು.

ಫೆರಾನ್ ಕೊರೊಮಿನಾಸ್ ಮತ್ತು ಬ್ರೆಂಡನ್ ಫರ್ನಾಂಡಿಸ್ ಗಳಿಸಿದ ಗೋಲುಗಳ ಮೂಲಕ 3–0ಯಿಂದ ವಿಜಯ ಪತಾಕೆ ಹಾರಿಸಿದ ಗೋವಾ, ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿತು.

ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದ ಆರಂಭದಿಂದಲೇ ಆತಿಥೇಯರು ಆಧಿಪತ್ಯ ಸ್ಥಾಪಿಸಿದರು. ತವರಿನ ಪ್ರೇಕ್ಷಕರನ್ನು ರಂಜಿಸಿದ ಮಂದಾರ್ ರಾವ್ ದೇಸಾಯಿ ಬಳಗದ ಆಟಗಾರರು ಎದುರಾಳಿಗಳನ್ನು ಸತತವಾಗಿ ಕಾಡಿದರು. 19ನೇ ನಿಮಿಷದಲ್ಲಿ ಫೆರಾನ್ ಕೊರೊಮಿನಾಸ್ ಗೋವಾಗೆ ಮುನ್ನಡೆ ಗಳಿಸಿಕೊಟ್ಟರು.

ಬಲಭಾಗದಲ್ಲಿದ್ದ ಜಾಕಿಚಾಂದ್ ಸಿಂಗ್ ನೀಡಿದ ಚೆಂಡನ್ನು ನಿಯಂತ್ರಿಸಿದ ಹ್ಯೂಗೊ ಬೌಮೊಸ್ ಮನಮೋಹಕವಾಗಿ ‘ಕಟ್‌’ ಮಾಡಿ ಫೆರಾನ್ ಕಡೆಗೆ ತಳ್ಳಿದರು. ಫೆರಾನ್ ಸುಲಭವಾಗಿ ಚೆಂಡನ್ನು ಗುರಿ ಮುಟ್ಟಿಸಿದರು.

0–1 ಹಿನ್ನಡೆಯೊಂದಿಗೆ ವಿರಾಮಕ್ಕೆ ತೆರಳಿದ ಒಡಿಶಾ ದ್ವಿತೀಯಾರ್ಧದಲ್ಲಿ ಹೆಚ್ಚು ಪ್ರತಿರೋಧ ಒಡ್ಡಿತು. ಆದರೆ 85ನೇ ನಿಮಿಷದಲ್ಲಿ ಬ್ರೆಂಡನ್ ಫರ್ನಾಂಡಿಸ್ ಗೋಲು ಗಳಿಸಿ ಗೋವಾದ ಮುನ್ನಡೆ ಹೆಚ್ಚಿಸಿದರು.

ಫೆರಾನ್ ಕೊರೊಮಿನಾಸ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಬ್ರೆಂಡನ್ ಅತಿ ಸುಲಭವಾಗಿ ಗೋಲು ಬಲೆಯೊಳಗೆ ತಳ್ಳಿದರು.

ಎದುರಾಳಿ ತಂಡದ ಗೋಲ್‌ಕೀಪರ್ ಆರ್ಷದೀಪ್ ಸಿಂಗ್ ಉದಾಸೀನ ಮಾಡದೇ ಇದ್ದಿದ್ದರೆ ಈ ಗೋಲನ್ನು ತಡೆಯಬಹುದಾಗಿತ್ತು!

89ನೇ ನಿಮಿಷದಲ್ಲಿ ಗೋವಾಗೆ ಲಭಿಸಿದ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಲು ಫೆರಾನ್ ಕೊರೊಮಿನಾಸ್ ಸಿದ್ದವಿರಲಿಲ್ಲ. ಅವರು ಸುಲಭವಾಗಿ ಚೆಂಡನ್ನು ಗುರಿ ಸೇರಿಸಿ ಗೋವಾದ ಮುನ್ನಡೆಯನ್ನು 3–0ಗೆ ಏರಿಸಿದರು.

ಒಂಬತ್ತು ಪಂದ್ಯಗಳಲ್ಲಿ ಗೋವಾಗೆ ಇದು ಐದನೇ ಜಯ. ಮೂರು ಡ್ರಾ ಮತ್ತು ಒಂದು ಸೋಲಿನೊಂದಿಗೆ ತಂಡ 18 ಪಾಯಿಂಟ್‌ ಹೊಂದಿದೆ. ಆರು ಗೋಲುಗಳೊಂದಿಗೆ ಫೆರಾನ್ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು. ಎಟಿಕೆಯ ರಾಯ್ ಕೃಷ್ಣ (8 ಗೋಲು) ಮೊದಲ ಸ್ಥಾನದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)