ಭಾನುವಾರ, ಫೆಬ್ರವರಿ 28, 2021
20 °C

ಬಿಎಫ್‌ಸಿಗೆ ಎಚ್‌ಎಫ್‌ಸಿ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಸ್ಕೊ, ಗೋವಾ (ಪಿಟಿಐ): ಸತತ ಏಳು ಪಂದ್ಯಗಳಲ್ಲಿ ಗೆಲುವಿನ ರುಚಿ ಸವಿಯಲು ಸಾಧ್ಯವಾಗದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಮತ್ತೊಮ್ಮೆ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲು ಸಜ್ಜಾಗಿದೆ.

ಗುರುವಾರ ತಿಲಕ್ ಮೈದಾನದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬಿಎಫ್‌ಸಿಗೆ ಹೈದರಾಬಾದ್‌ ಎಫ್‌ಸಿ ಎದುರಾಳಿ .

ಲೀಗ್‌ನ ಏಳನೇ ಆವೃತ್ತಿಯಲ್ಲಿ ಬಿಎಫ್‌ಸಿಗೆ ನಿರೀಕ್ಷೆಗೆ ತಕ್ಕಂತೆ ಆಡಲು ಆಗುತ್ತಿಲ್ಲ. ಆರಂಭದ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ತಂಡ ನಂತರ ಜಯ ಗಳಿಸಿತ್ತು. ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ ಸತತ ಎರಡು ಗೆಲುವಿನ ಮೂಲಕ ಲಯಕ್ಕೆ ಮರಳಿತ್ತು. ಆದರೆ ಆ ಮೇಲೆ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾದವು. ಸತತ ನಾಲ್ಕು ಪಂದ್ಯಗಳನ್ನು ಸೋತಿತ್ತು. ಹಂಗಾಮಿ ಕೋಚ್ ನೌಶಾದ್ ಮೂಸಾ ಮಾರ್ಗದರ್ಶನದಲ್ಲೂ ತಂಡಕ್ಕೆ ನಿರೀಕ್ಷಿತ ಸಾಮರ್ಥ್ಯ ತೋರಲು ಆಗುತ್ತಿಲ್ಲ. ಹಿಂದಿನ ಮೂರು ಪಂದ್ಯಗಳಲ್ಲಿ ಎರಡು ಡ್ರಾ ಮಾಡಿಕೊಂಡಿದ್ದು ಒಂದರಲ್ಲಿ ಅದು ಸೋತಿದೆ. ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಒಡಿಶಾ ಎದುರಿನ ಕಳೆದ ಪಂದ್ಯವನ್ನು ಕೂಡ ಗೆಲ್ಲಲು ಸಾಧ್ಯವಾಗದ್ದು ತಂಡದ ನೈತಿಕ ಶಕ್ತಿಯನ್ನು ಕುಗ್ಗಿಸಿದೆ. ಮಾನಸಿಕವಾಗಿ ಬಲ ಪಡೆದುಕೊಳ್ಳಲು ಮತ್ತು ಲೀಗ್‌ನಲ್ಲಿ ಮುಂದಿನ ಹಂತಕ್ಕೆ ಸಾಗಲು ಗುರುವಾರ ಬಿಎಫ್‌ಸಿಗೆ ಗೆಲುವು ಅನಿವಾರ್ಯವಾಗಿದೆ. ಈ ಬಾರಿ ಉತ್ತಮ ಆರಂಭ ಕಂಡಿರುವ ಹೈದರಾಬಾದ್ ಎಫ್‌ಸಿ ಈಚಿನ ಕೆಲವು ಪಂದ್ಯಗಳಲ್ಲಿ ನಿರಾಸೆ ಕಂಡಿದೆ. ಆದರೂ ಪಾಯಿಂಟ್‌ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ. ಬಿಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸಿದರೆ ಆ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಾಧ್ಯ. ಕಳೆದ ಮೂರು ಪಂದ್ಯಗಳಲ್ಲಿ ಹೈದರಾಬಾದ್ ಪಡೆ ಎರಡು ಕ್ಲೀನ್ ಶೀಟ್ ಸಾಧನೆ ಮಾಡಿದೆ. ಹೀಗಾಗಿ ಬಿಎಫ್‌ಸಿ ಗೋಲು ಗಳಿಸಲು ಕಠಿಣ ಪ್ರಯತ್ನ ನಡೆಸಬೇಕಾಗಿದೆ.

ಪಂದ್ಯದಿಂದ ಪಂದ್ಯಕ್ಕೆ ಸಾಮರ್ಥ್ಯ ಕುಗ್ಗುತ್ತಿರುವ ಬಿಎಫ್‌ಸಿ ಹಿಂದಿನ 10 ಪಂದ್ಯಗಳಲ್ಲಿ ಕ್ಲೀನ್‌ಶೀಟ್ ಸಾಧಿಸಲು ವಿಫಲವಾಗಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಆದರೂ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಲು ತಂಡಕ್ಕೆ ಇನ್ನೂ ಅವಕಾಶ ಇದೆ. ಒಂದು ಪಂದ್ಯದಲ್ಲಿ ಗೆದ್ದು ಒಂದನ್ನು ಡ್ರಾ ಮಾಡಿಕೊಂಡರೂ ಸುನಿಲ್ ಚೆಟ್ರಿ ಬಳಗದ ಆಸೆ ಈಡೇರಲಿದೆ.

‘ಪ್ಲೇ ಆಫ್ ಹಂತ ತಲುಪುವ ಆಸೆ ಇನ್ನೂ ಕಮರಿಲ್ಲ. ಮುಂದಿನ ಆವೃತ್ತಿಯನ್ನು ಕೂಡ ಗಮನದಲ್ಲಿರಿಸಿಕೊಂಡು ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಐಎಸ್ಎಲ್‌ನಲ್ಲಿ ಆಡುವ ಮಟ್ಟವನ್ನು ತಿಳಿದುಕೊಳ್ಳಲು ಅವರಿಗೆ 20ರಿಂದ 30 ನಿಮಿಷಗಳ ಅವಕಾಶ ನೀಡಲಾಗುತ್ತಿದೆ’ ಎಂದು ನೌಶಾದ್ ಮೂಸಾ ತಿಳಿಸಿದರು.

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು