ಬುಧವಾರ, ಜನವರಿ 22, 2020
25 °C
ಪಂಜಾಬ್‌ ಎಫ್‌ಸಿಗೆ ನಿರಾಸೆ

ಐ–ಲೀಗ್‌ ಫುಟ್‌ಬಾಲ್‌: ಜುವಾನ್‌ ಗೋಲು, ಡ್ರಾ ಪಂದ್ಯದಲ್ಲಿ ಬೆಂಗಾಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ಲೂಧಿಯಾನ: ಕೊನೆಯ ಹಂತದಲ್ಲಿ ಗೋಲು ಗಳಿಸಿದ ಜುವಾನ್‌ ಮೆರಾ ಈಸ್ಟ್ ಬೆಂಗಾಲ್‌ ತಂಡದ ಸೋಲು ತಪ್ಪಿಸಿದರು. ಇಲ್ಲಿನ ಗುರುನಾನಕ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐ–ಲೀಗ್‌ ಫುಟ್‌ಬಾಲ್‌ ಪಂದ್ಯದಲ್ಲಿ ಆ ತಂಡ ಪಂಜಾಬ್‌ ಎಫ್‌ಸಿ ಎದುರು 1–1 ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು.

ಪಂದ್ಯದ 13ನೇ ನಿಮಿಷದಲ್ಲಿ ಗೋಲು ಹೊಡೆದ ಡ್ಯಾನಿಲೊ ಆಗಸ್ಟೊ ಪಂಜಾಬ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಪಂದ್ಯ ಗೆದ್ದು ಪೂರ್ಣ (ಮೂರು) ಪಾಯಿಂಟ್ಸ್ ಕಲೆಹಾಕಬೇಕೆಂದಿದ್ದ ಆ ತಂಡದ ಆಸೆಗೆ ಜುವಾನ್‌ ತಣ್ಣೀರೆರೆಚಿದರು. 84ನೇ ನಿಮಿಷದಲ್ಲಿ ಸಮಬಲದ ಗೋಲು ದಾಖಲಿಸಿ ತಮ್ಮ ತಂಡ ನಿಟ್ಟುಸಿರು ಬಿಡುವಂತೆ ಮಾಡಿದರು.

ಎರಡೂ ತಂಡಗಳು ಶುರುವಿನಿಂದಲೇ ಜಿದ್ದಾಜಿದ್ದಿಯ ಆಟಕ್ಕೆ ತೊಡಗಿದವು. 10ನೇ ನಿಮಿಷದಲ್ಲಿ ಕೋಲ್ಕತ್ತ ಮೂಲದ ತಂಡಕ್ಕೆ ಗೋಲು ಗಳಿಸುವ ಉತ್ತಮ ಅವಕಾಶವಿತ್ತು. ಪಿಂಟು ಮಹಾಹಾ ಒದ್ದ ಚೆಂಡು ಗೋಲು ಪೆಟ್ಟಿಗೆಗೆ ಕೂದಲೆಳೆ ಅಂತರದಿಂದ ಹೊರಗೆ ಸಾಗಿತು.

13ನೇ ನಿಮಿಷದಲ್ಲಿ ಸಂಜು ಪ್ರಧಾನ್‌ ಫ್ರೀ ಕಿಕ್‌ನಲ್ಲಿ ಹೊಡೆದ ಚೆಂಡನ್ನು ಆಗಸ್ಟೊ ಹೆಡರ್‌ ಮೂಲಕ ಗುರಿ ಸೇರಿಸಿದರು. ನಂತರ ಎರಡೂ ತಂಡಗಳು ಶತ‍ಪ್ರಯತ್ನ ಮಾಡಿದರೂ ಯಶಸ್ಸು ಸಿಕ್ಕಿರಲಿಲ್ಲ. ಪಂದ್ಯದ ಪೂರ್ಣ ಅವಧಿ ಕೊನೆಗೊಳ್ಳಲು ಆರು ನಿಮಿಷಗಳಿರುವಾಗ ಸ್ಪೇನ್‌ ಮೂಲದ ಜುವಾನ್‌ ಮೋಡಿ ಮಾಡಿದರು. ಸೊಗಸಾದ ಗೋಲು ಗಳಿಸಿ ಸಂಭ್ರಮಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು