ಮಂಗಳೂರು: ಯೆನೆಪೋಯ ಸಂಸ್ಥೆಗಳ ‘ಎ’ ಮತ್ತು ‘ಬಿ’ ತಂಡಗಳು ಇಂಡಿಪೆಂಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಿಯ ಪದವಿ ಕಾಲೇಜು ವಿಭಾಗದ ಫೈನಲ್ ಪಂದ್ಯದಲ್ಲಿ ಸೆಣಸಲಿವೆ.
ಜಿಲ್ಲಾ ಫುಟ್‌ಬಾಲ್ ಸಂಸ್ಥೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯ ಸೆಮಿಫೈನಲ್‌ನಲ್ಲಿ ಯೆನೆಪೋಯ ‘ಎ’ ತಂಡ ಪಿಎ ಕಾಲೇಜು ‘ಎ’ ತಂಡವನ್ನು ಸುಲಭವಾಗಿ ಮಣಿಸಿದರೆ ಯೆನೆಪೋಯ ‘ಬಿ’ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಮಂಗಳ ಇನ್‌ಸ್ಟಿಟ್ಯೂಷನ್ ಎದುರು ಜಯ ಸಾಧಿಸಿತು.
ಪಿಎ ಕಾಲೇಜು ಎದುರಿನ ಪಂದ್ಯದಲ್ಲಿ 21 ಮತ್ತು 44ನೇ ನಿಮಿಷದಲ್ಲಿ ಯೆನೆಪೋಯ ಕಾಲೇಜಿನ ಸಿನಾನ್ ಗೋಲು ಗಳಿಸಿ ಮಿಂಚಿದರು. 7ನೇ ನಿಮಿಷದಲ್ಲಿ ಅರ್ಷದ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಯೆನೆಪೋಯ ‘ಬಿ’ ಮತ್ತು ಮಂಗಳ ತಂಡಗಳಿಗೆ ನಿಗದಿತ ಅವಧಿಯಲ್ಲಿ ಗೋಲು ಗಳಿಸಲಾಗಲಿಲ್ಲ. ಟೈ ಬ್ರೇಕರ್‌ನಲ್ಲಿ ಯೆನೆಪೋಯ 6–4ರಲ್ಲಿ ಜಯ ಗಳಿಸಿತು. ಫೈನಲ್ ಪಂದ್ಯ ಬುಧವಾರ ಸಂಜೆ 4ಕ್ಕೆ ನಡೆಯಲಿದೆ.
ಪಿಯು ಕಾಲೇಜು ವಿಭಾಗದ ಸೆಮಿಫೈನಲ್ ರೋಚಕ ಅಂತ್ಯ ಕಂಡಿತು. ಟಿಪ್ಪು ಸುಲ್ತಾನ್ ‘ಎ’ ಮತ್ತು ಪಾಂಡ್ಯರಾಜ್ ಬಳ್ಳಾಲ್ ‘ಎ’ ತಂಡಗಳ ನಡುವಿನ ಈ ಪಂದ್ಯ ನಿಗದಿತ ಅವಧಿಯಲ್ಲಿ ಗೋಲುರಹಿತ ಡ್ರಾ ಆಗಿತ್ತು. ಪೆನಾಲ್ಟಿ ಶೂಟೌಟ್‌ನಲ್ಲೂ ಪಂದ್ಯ ಡ್ರಾ ಆಯಿತು. ಸಡನ್ ಡೆತ್‌ನಲ್ಲಿ ಟಿಪ್ಪು ಸುಲ್ತಾನ್ ತಂಡ 7–6ರಲ್ಲಿ ಗೆದ್ದಿತು.
ಹೈಸ್ಕೂಲ್ ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ಕಣಚೂರು ಶಾಲೆ ಪೆನಾಲ್ಟಿ ಶೂಟೌಟ್‌ನಲ್ಲಿ (5–4) ಮೌಲಾನಾ ಆಜಾದ್ ಶಾಲಾ ತಂಡವನ್ನು ಸೋಲಿಸಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದು ಗೋಲು ಗಳಿಸಿದ್ದವು.
ಸೆಮಿಫೈನಲ್ ಪಂದ್ಯದಲ್ಲಿ ಮಂಗಳಾ ಇನ್‌ಸ್ಟಿಟೂಷನ್ಸ್ (ಎಡ) ತಂಡದ ಆಟಗಾರನಿಂದ ಚೆಂಡು ಕಸಿದುಕೊಳ್ಳಲು ಯೆನೆಪೋಯ ಕಾಲೇಜು ‘ಬಿ’ ತಂಡದ ಆಟಗಾರ ಮುಂದಾದರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್