ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

7
ಎಎಫ್‌ಸಿ ಏಷ್ಯಾ ಕಪ್‌ ಫುಟ್‌ಬಾಲ್ ಟೂರ್ನಿ: ಥಾಯ್ಲೆಂಡ್ ವಿರುದ್ಧ ಚೆಟ್ರಿ ಬಳಗದ ಮೊದಲ ಪಂದ್ಯ

ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

Published:
Updated:
Prajavani

ಅಬುಧಾಬಿ: ಭಾರತ ತಂಡ ಎಎಫ್‌ಸಿ ಏಷ್ಯಾ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾರಿ ನಿರೀಕ್ಷೆಯೊಂದಿಗೆ ಭಾನುವಾರ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಇತ್ತೀಚಿನ ವರ್ಷಗಳಲ್ಲಿ ಏಷ್ಯಾಮಟ್ಟದಲ್ಲಿ ತೋರುತ್ತಿರುವ ಉತ್ತಮ ಸಾಮರ್ಥ್ಯವು ತಂಡದಲ್ಲಿ ಭರವಸೆ ಮೂಡಿಸಿದೆ. ಆದರೆ ಪ್ರಬಲ ಆಕ್ರಮಣ ವಿಭಾಗವನ್ನು ಹೊಂದಿರುವ ಥಾಯ್ಲೆಂಡ್‌ ಸವಾಲು ಮೀರಿ ನಿಲ್ಲುವುದು ಸುನಿಲ್ ಚೆಟ್ರಿ ಬಳಗಕ್ಕೆ ಅಷ್ಟು ಸುಲಭವಲ್ಲ.

ದಶಕಗಳ ಇತಿಹಾಸವಿರುವ ಎಎಫ್‌ಸಿ ಕಪ್ ಟೂರ್ನಿಯಲ್ಲಿ 1964ರಲ್ಲಿ ರನ್ನರ್ ಅಪ್ ಆಗಿದ್ದು ಬಿಟ್ಟರೆ ಭಾರತದ ಸಾಧನೆ ತೀರಾ ಕಡಿಮೆ.ಈ ಹಿಂದೆ ಕೇವಲ ಮೂರು ಬಾರಿ ಮಾತ್ರ ಅರ್ಹತೆ ಗಳಿಸಿತ್ತು. 2011ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದ ಭಾರತ ತಂಡ ನಂತರ ಬಲಿಷ್ಠವಾಗಿ ಬೆಳೆದಿದೆ. ಈ ಬಾರಿಯ ವಿವಿಧ ಪಂದ್ಯಗಳಲ್ಲಿ ಇದು ಸಾಬೀತಾಗಿದೆ. ಬಲಿಷ್ಠ ಚೀನಾ ಮತ್ತು ಒಮನ್ ಎದುರು ಡ್ರಾ ಸಾಧಿಸಿದ್ದ ತಂಡ ಜೋರ್ಡನ್ ವಿರುದ್ಧ 1–2ರ ಅಂತರದಿಂದ ಸೋತಿತ್ತು. ಅದಕ್ಕೂ ಮೊದಲು ನಡೆದ 13 ಸೌಹಾರ್ದ ಪಂದ್ಯಗಳಲ್ಲಿ ತಂಡ ಅಜೇಯವಾಗಿ ಉಳಿದಿತ್ತು.

ಥಾಯ್ಲೆಂಡ್ ಎದುರಿನ ಮೊದಲ ಪಂದ್ಯದಲ್ಲಿ ಗೆದ್ದರೆ ಭಾರತಕ್ಕೆ ಪ್ರೀ ಕ್ವಾರ್ಟರ್ ಫೈನಲ್ ಹಂತದ ಹಾದಿ ಸುಗಮವಾಗಲಿದೆ. ಈ ಪಂದ್ಯದಲ್ಲಿ ಗೆದ್ದರೆ ಜನವರಿ 10ರಂದು ನಡೆಯಲಿರುವ ಯುಎಇ ಎದುರಿನ ಮತ್ತು 14ರಂದು ನಡೆಯಲಿರುವ ಬಹರೇನ್ ವಿರುದ್ಧದ ಪಂದ್ಯಗಳಲ್ಲಿ ಡ್ರಾ ಸಾಧಿಸಿದರೂ ಸಾಕು.

ಡಿಫೆಂಡರ್‌ಗಳಿಗೆ ಸವಾಲು: ಏಷ್ಯನ್ ಫುಟ್‌ಬಾಲ್ ಫೆಡರೇಷನ್ ಚಾಂಪಿಯನ್‌ಷಿಪ್ ಪಂದ್ಯಗಳಲ್ಲಿ ಗೋಲು ಮಳೆ ಸುರಿಸಿರುವ ಥಾಯ್ಲೆಂಡ್‌ ತಂಡದ ಫಾರ್ವರ್ಡ್ ವಿಭಾಗದವರು ಶಕ್ತಿಯನ್ನು ಸಾಬೀತು ಮಾಡಿದ್ದಾರೆ. ಹೀಗಾಗಿ ಭಾರತದ ಡಿಫೆಂಡರ್‌ಗಳಿಗೆ ಭಾನುವಾರದ ಪಂದ್ಯ ಸವಾಲಿನದ್ದಾಗಲಿದೆ. 

ನಾಯಕ ಮತ್ತು ಪ್ರಮುಖ ಸ್ಟ್ರೈಕ್‌ ಸುನಿಲ್ ಚೆಟ್ರಿ ಇತ್ತೀಚಿನ ಪಂದ್ಯಗಳಲ್ಲಿ ಗೋಲು ಗಳಿಸಲು ವಿಫಲರಾಗಿರುವುದು ಭಾರತ ಪಾಳಯದಲ್ಲಿ ಆತಂಕ ಉಂಟುಮಾಡಿದೆ. ಮತ್ತೊಬ್ಬ ಸ್ಟ್ರೈಕರ್ ಜೆಜೆ ಲಾಲ್‌ಫೆಕ್ಲುವಾ ಕೂಡ ಇತ್ತೀಚೆಗೆ ನಿರಂತರ ವೈಫಲ್ಯ ಕಾಣುತ್ತಿದ್ದಾರೆ. 2011ರಲ್ಲಿ ಆಡಿದ ತಂಡದಲ್ಲಿ ಸುನಿಲ್ ಚೆಟ್ರಿ ಮತ್ತು ಗುರುಪ್ರೀತ್‌ ಸಿಂಗ್ ಸಂಧು ಇದ್ದರು. ಆದರೆ ಸಂಧು ಅವರಿಗೆ ಒಂದು ಪಂದ್ಯದಲ್ಲೂ ಆಡಲು ಅವಕಾಶ ಸಿಕ್ಕಿರಲಿಲ್ಲ.

ರಕ್ಷಣಾ ವಿಭಾಗದಲ್ಲಿ ಸಂದೇಶ್ ಜಿಂಘಾನ ಮತ್ತು ಅನಾಸ್ ಎಡತೋಡಿಕಾ ಮಿಂಚುವ ನಿರೀಕ್ಷೆ ಇದೆ. ಗೋಲ್‌ಕೀಪರ್‌ ಗುರುಪ್ರೀತ್ ಸಿಂಗ್ ಸಂಧು ಉತ್ತಮ ಫಾರ್ಮ್‌ನಲ್ಲಿರುವುದು ಕೂಡ ಭಾರತದ ಭರವಸೆಗೆ ಕಾರಣವಾಗಿದೆ. ಉದಾಂತ ಸಿಂಗ್‌ ಮತ್ತು ಹಲಿಚರಣ್ ನಜರೆ ಮಿಡ್‌ಫೀಲ್ಡ್ ವಿಭಾಗಕ್ಕೆ ಶಕ್ತಿ ತುಂಬಲಿದ್ದಾರೆ.

ಪ್ರಮುಖ ಅಂಶಗಳು

* ಭಾರತ ಮತ್ತು ಥಾಯ್ಲೆಂಡ್‌ 2010ರಲ್ಲಿ ಕೊನೆಯದಾಗಿ ಮುಖಾಮುಖಿಯಾಗಿದ್ದವು. ಆಗ ನಡೆದ ಎರಡೂ ಪಂದ್ಯಗಳಲ್ಲಿ ಥಾಯ್ಲೆಂಡ್‌ 2–1, 1–0ಯಿಂದ ಗೆದ್ದಿತ್ತು.

* ಭಾರತವು ಥಾಯ್ಲೆಂಡ್‌ ವಿರುದ್ಧ 1986ರಲ್ಲಿ ಕ್ವಾಲಾಲಂಪುರದಲ್ಲಿ ನಡೆದಿದ್ದ ಮೆರ್ಡೆಕಾ ಕಪ್‌ ನಂತರ ಒಮ್ಮೆಯೂ ಜಯಿಸಿಲ್ಲ.

* ಥಾಯ್ಲೆಂಡ್ 1972ರಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಉಳಿದ ಎಲ್ಲ ಆವೃತ್ತಿಯಲ್ಲೂ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಇಲ್ಲಿಗೆ ಬರುವ ಮುನ್ನ ತಂಡ ಎಎಫ್‌ಎಫ್‌ ಚಾಂಪಿಯ್‌ಷಿಪ್‌ನ ಸೆಮಿಫೈನಲ್‌ನಲ್ಲಿ ಸೋತಿತ್ತು.

* ಥಾಯ್ಲೆಂಡ್‌ಗೆ ನಾಯಕ ಮತ್ತು ಸ್ಟ್ರೈಕರ್ ತೀರಾಸಿಲ್‌ ದಂಗ್ಡ, ಥೀರಾತನ್‌ ಬುನ್ಮಾಥನ್‌ ಮತ್ತು ಮಿಡ್‌ಫೀಲ್ಡರ್‌ ಚನಾತಿಪ್ ಸೊಂಕ್ರಾಸಿನ್‌ ಅವರ ಬಲವಿದೆ. 

ಫಿಫಾ ರ‍್ಯಾಂಕಿಂಗ್‌

ಭಾರತ  97

ಥಾಯ್ಲೆಂಡ್‌ 118

***
ಇಂದಿನ ಪಂದ್ಯಗಳು

ಬಿ ಗುಂಪು

ಆಸ್ಟ್ರೇಲಿಯಾ–ಜೋರ್ಡನ್‌

ಸ್ಥಳ: ಹಜಾ ಬಿನ್‌ ಸೈಯದ್ ಕ್ರೀಡಾಂಗಣ

ಆರಂಭ: ಮಧ್ಯಾಹ್ನ 4.30

***
ಎ ಗುಂಪು

ಭಾರತ–ಥಾಯ್ಲೆಂಡ್‌

ಸ್ಥಳ: ಅಲ್‌ ನಹ್ಯಾನ್ ಕ್ರೀಡಾಂಗಣ, ಅಬುಧಾಬಿ

ಆರಂಭ: ಸಂಜೆ 7.00

ಬಿ ಗುಂಪು

ಸಿರಿಯಾ – ಪ್ಯಾಲೆಸ್ಟೀನ್‌

ಸ್ಥಳ: ಶಾರ್ಜಾ ಕ್ರೀಡಾಂಗಣ, ಶಾರ್ಜಾ

ಆರಂಭ: ರಾತ್ರಿ 9.30

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !