ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಯನ್ ಸೂಪರ್ ಲೀಗ್‌: ಬಿಎಫ್‌ಸಿಗೆ ಮಾಡು–ಮಡಿ ಪಂದ್ಯ

ಗೆಲ್ಲಲೇಬೇಕಾದ ಪಂದ್ಯದ ಒತ್ತಡದಲ್ಲಿ ಒಡಿಶಾ ಎಫ್‌ಸಿ
Last Updated 20 ಫೆಬ್ರುವರಿ 2022, 14:02 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್‌: ಮಾಜಿ ಚಾಂಪಿಯನ್ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು ಬಿಎಫ್‌ಸಿ ಎದುರಿಸಲಿದ್ದು ಪ್ಲೇ ಆಫ್‌ ಹಂತ ತಲುಪಬೇಕಾದರೆ ಒಡಿಶಾ ತಂಡಕ್ಕೂ ಗೆಲುವು ಅನಿವಾರ್ಯವಾಗಿದೆ.

17 ಪಂದ್ಯಗಳಲ್ಲಿ 23 ಪಾಯಿಂಟ್ ಗಳಿಸಿರುವ ಬೆಂಗಳೂರು ಎಫ್‌ಸಿ ಹಿಂದಿನ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್‌ ಎದುರು ನೀರಸ ಆಟವಾಡಿ ನಿರಾಸೆಗೆ ಒಳಗಾಗಿದೆ. ಟೂರ್ನಿಯಿಂದ ಬಹುತೇಕ ಹೊರಬಿದ್ದಿರುವ ತಂಡದ ಪ್ಲೇ ಆಫ್‌ ಆಸೆ ಜೀವಂತಾಗಿರಬೇಕಾದರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಒಡಿಶಾ 17 ಪಂದ್ಯಗಳಲ್ಲಿ 22 ಪಾಯಿಂಟ್ ಕಲೆಹಾಕಿದ್ದು ಸಂಕಷ್ಟದಲ್ಲಿದೆ.

ಸತತ ಒಂಬತ್ತು ಪಂದ್ಯಗಳಲ್ಲಿ ಸೋಲರಿಯದೆ ಮುನ್ನುಗ್ಗಿದ್ದ ಬೆಂಗಳೂರು ಬುಲ್ಸ್ ಸುಲಭವಾಗಿ ಪ್ಲೇ ಆಫ್ ಹಂತಕ್ಕೇರುವ ಭರವಸೆಯಲ್ಲಿತ್ತು. ಆದರೆ ಹಿಂದಿನ ಪಂದ್ಯದಲ್ಲಿ ಆಘಾತಕ್ಕೊಳಗಾಗಿದೆ.

‘ಸೆಟ್‌ಪೀಸ್’ ಮೂಲಕ ಬೆಂಗಳೂರು ಎಫ್‌ಸಿ ಈ ಬಾರಿ ಹೆಚ್ಚು ಗೋಲುಗಳನ್ನು ಗಳಿಸಿದೆ. ಆದರೆ ಒಡಿಶಾ ‘ಓಪನ್ ಪ್ಲೇ’ಯಿಂದಲೇ ಗೋಲು ಗಳಿಸುವಲ್ಲಿ ಸಮರ್ಥವಾಗಿದೆ. ಆದ್ದರಿಂದ ಬೆಂಗಳೂರು ತಂಡದ ರಕ್ಷಣಾ ವಿಭಾಗ ಹೆಚ್ಚು ಜಾಗರೂಕವಾಗಿ ಆಡಬೇಕಾಗಿದೆ.

ಈ ಬಾರಿ ಬಹುತೇಕ ಎಲ್ಲ ಪಂದ್ಯಗಳಲ್ಲೂ ಮಿಂಚಿರುವ ಕ್ಲೀಟನ್‌ ಸಿಲ್ವಾ ಮೇಲೆ ಬೆಂಗಳೂರು ಬುಲ್ಸ್ ಅವಲಂಬಿತವಾಗಿದೆ. ಒಡಿಶಾ ತಂಡಕ್ಕೆ ಜೊನಾಥಾಸ್ ಕ್ರಿಸ್ಟಿಯನ್ ಭರವಸೆ ತುಂಬಿದ್ದಾರೆ. ಕೊನೆಯಲ್ಲಿ ಆಡಿದ ಐದು ಪಂದ್ಯಗಳಲ್ಲೂ ಅವರು ಗೋಲು ಗಳಿಸಿದ್ದಾರೆ. ಈ ಮೂಲಕ ಸತತ ಐದು ಪಂದ್ಯಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಒಡಿಶಾ ಎಫ್‌ಸಿಯ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಕ್ಲೀಟನ್ ಸಿಲ್ವಾ ಹಿಂದಿನ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಗೋಲು ಗಳಿಸಿದ್ದಾರೆ. ಈ ಬಾರಿ ಲೀಗ್‌ನಲ್ಲಿ ಸೆಟ್ ಪೀಸ್ ಮೂಲಕ ಅತಿಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ಲೀಗ್‌ನ ಕಳೆದ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಒಡಿಶಾ 3–1ರಲ್ಲಿ ಜಯ ಗಳಿಸಿತ್ತು.

ಆರಂಭ: ರಾತ್ರಿ 7.30

ಸ್ಥಳ: ಬ್ಯಾಂಬೊಲಿಮ್

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT