ಮಂಗಳವಾರ, ಫೆಬ್ರವರಿ 25, 2020
19 °C
ದಕ್ಷಿಣ ಏಷ್ಯಾ ಕ್ರೀಡಾಕೂಟ: ಆತಿಥೇಯ ನೇಪಾಳವನ್ನು ಫೈನಲ್‌ನಲ್ಲಿ ಮಣಿಸಿದ ಭಾರತ

ಮಹಿಳಾ ಫುಟ್‌ಬಾಲ್ ತಂಡಕ್ಕೆ ಚಿನ್ನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೊಖಾರ, ನೇಪಾಳ: ಏಕಪಕ್ಷೀಯ ಪಂದ್ಯದಲ್ಲಿ ಆತಿಥೇಯರನ್ನು ಮಣಿಸಿದ ಭಾರತ ಮಹಿಳಾ ಫುಟ್‌ಬಾಲ್ ತಂಡದವರು ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳ ವಿರುದ್ಧ ಭಾರತ 2–0 ಗೋಲುಗಳ ಗೆಲುವು ಸಾಧಿಸಿತು. 

ಪ‍ಂದ್ಯದ ಎರಡೂ ಅವಧಿಗಳಲ್ಲಿ ಗೋಲುಗಳನ್ನು ಗಳಿಸಿದ ಬಾಲಾದೇವಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು. ಈ 2 ಗೋಲುಗಳ ಮೂಲಕ ಅವರು ಟೂರ್ನಿಯಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಎನಿಸಿಕೊಂಡರು. 4 ಪಂದ್ಯಗಳಲ್ಲಿ ಒಟ್ಟು 5 ಗೋಲುಗಳನ್ನು ಗಳಿಸಿದ ಸಾಧನೆ ಮಾಡಿದರು.

ಆರಂಭದಿಂದಲೇ ಭಾರತದ ಆಟಗಾರ್ತಿಯರು ರಕ್ಷಣಾತ್ಮಕ ಆಟಕ್ಕೆ ಮೊರೆಹೋದರು. ಮಿಡ್‌ಫೀಲ್ಡರ್‌ಗಳಾದ ಸಂಗೀತಾ ಬಸ್ಫೋರ್ ಮತ್ತು ರತನ್‌ಬಾಲಾ ದೇವಿ ಅವರು ಅಮೋಘ ಆಟದ ಮೂಲಕ ಎದುರಾಳಿಗಳನ್ನು ಕಂಗೆಡಿಸಿದರು. ರತನ್ ಬಾಲಾಗೆ ತಂಡದ ಪರವಾಗಿ ಮೊದಲ ಗೋಲು ಗಳಿಸುವ ಅವಕಾಶವೂ ಆರಂಭದಲ್ಲೇ ಲಭಿಸಿತ್ತು. ರಂಜನಾ ಚಾನು ನೀಡಿದ ಕ್ರಾಸ್‌ ನಿಯಂತ್ರಿಸಿದ ಅವರು ಚೆಂಡನ್ನು ಗುರಿಯತ್ತ ಒದ್ದರೂ ಅದು ಕ್ರಾಸ್ ಬಾರ್ ಮೇಲಿಂದ ಹೊರಗೆ ಚಿಮ್ಮಿತು.

ಖಾತೆ ತೆರೆಯಲು ನೆರವಾದ ಗೋಲ್ ಕೀಪರ್:ಕೂಟದಲ್ಲಿ ಒಂದು ಗೋಲು ಕೂಡ ಬಿಟ್ಟುಕೊಡದ ಭಾರತದ ಗೋಲ್ ಕೀಪರ್ ಅದಿತಿ ಚೌಹಾಣ್ 18ನೇ ನಿಮಿಷದಲ್ಲಿ ತಂಡ ಖಾತೆ ತೆರೆಯಲು ನೆರವಾದರು. ಅವರು ನೀಡಿದ ‘ಲಾಂಗ್ ಬಾಲ್’ ನಿಯಂತ್ರಿಸಿದ ಬಾಲಾದೇವಿ ಸುಲಭವಾಗಿ ಬಲೆಯೊಳಗೆ ತಳ್ಳಿದರು.

ಮೊದಲಾರ್ಧದ ಕೊನೆಯ ನಿಮಿಷದಲ್ಲಿ ಭಾರತಕ್ಕೆ ಮತ್ತೊಂದು ಅವಕಾಶ ಲಭಿಸಿತ್ತು. ರಂಜನಾ ಅವರ ಕಾರ್ನರ್ ಕಿಕ್‌ ಅನ್ನು ಹೆಡ್ ಮಾಡಿ ನೆಲಕ್ಕೆ ಹಾಕಿದ ನಾಯಕಿ ಆಶಾಲತಾ ದೇವಿ ನಂತರ ಸಂಧ್ಯಾಗೆ ಪಾಸ್ ನೀಡಿದರು. ಸಂಧ್ಯಾ ಚೆಂಡನ್ನು ಗುರಿಯತ್ತ ಸಾಗಿಸಿದರು. ಆದರೆ ಲೈನ್ ರೆಫರಿ ಅದನ್ನು ಆಫ್ ಸೈಡ್ ಎಂದು ಘೋಷಿಸಿದರು.

ಮೊದಲಾರ್ಧದ ಕೊನೆಯಲ್ಲಿ ಸಂಧ್ಯಾ ಬದಲಿಗೆ ಮನೀಷಾ ಅವರನ್ನು ಕೋಚ್ ಮೇಮಲ್ ರಾಕಿ ಕಣಕ್ಕೆ ಇಳಿಸಿದರು. ಅವರು ಉತ್ತಮ ಆಟದ ಮೂಲಕ ಗಮನ ಸೆಳೆದರು. 56ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದ ಬಾಲಾದೇವಿ ಎದುರಾಳಿಗಳ ಆತಂಕವನ್ನು ಹೆಚ್ಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು