ಸೋಮವಾರ, ಫೆಬ್ರವರಿ 17, 2020
25 °C

ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌: ಸೆಮಿಗೆ ಗೋಕುಲಂ ಎಫ್‌ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗೋಕುಲಂ ಎಫ್‌ಸಿ ಕೇರಳ ತಂಡ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ ಲೀಗ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೋಕುಲಂ 5–0 ಗೋಲುಗಳಿಂದ ಬಿದೇಶ್‌ ಸ್ಪೋರ್ಟ್ಸ್‌ ಕ್ಲಬ್‌ ತಂಡವನ್ನು ಮಣಿಸಿತು.

ಸೋಮವಾರ ನಡೆಯುವ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಗೋಕುಲಂ ತಂಡ ಹಾಲಿ ಚಾಂಪಿಯನ್‌ ಸೇತು ಎಫ್‌ಸಿ ವಿರುದ್ಧ ಸೆಣಸಲಿದೆ.

ಇನ್ನೊಂದು ಸೆಮಿಫೈನಲ್‌ನಲ್ಲಿ ಕ್ರಿಪ್‌ಶಾ ಎಫ್‌ಸಿ ಮತ್ತು ಕೆಂಕ್ರೆ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.

ಬಿದೇಶ್‌ ಇಲೆವನ್‌ ಎದುರಿನ ಪಂದ್ಯದಲ್ಲಿ ಗೋಕುಲಂ ತಂಡ ನಾಲ್ಕನೇ ನಿಮಿಷದಲ್ಲಿ ಖಾತೆ ತೆರೆಯಿತು. ಯಮನಮ್‌ ಕಮಲಾ ದೇವಿ ಕಾಲ್ಚಳಕ ತೋರಿದರು.

57ನೇ ನಿಮಿಷದಲ್ಲಿ ಬಿದೇಶ್‌ ತಂಡದ ಸಿಂಧಿಯಾ ಸೌಂದತಿಕರ್‌ ತಮ್ಮದೇ ಗೋಲುಪೆಟ್ಟಿಗೆಯೊಳಗೆ ಚೆಂಡನ್ನು ಗುರಿ ಸೇರಿಸಿದರು. ಹೀಗಾಗಿ ಗೋಕುಲಂ ಖಾತೆಗೆ ‘ಉಡುಗೊರೆ’ ಗೋಲು ಸೇರ್ಪಡೆಯಾಯಿತು.

ನಂತರ ಸಬಿತ್ರಾ ಭಂಡಾರಿ (63), ಥೊಕಚೊಮ್‌ ಉಮಾಪತಿ ದೇವಿ (82) ಮತ್ತು ಕರಿಷ್ಮಾ ಪುರುಷೋತ್ತಮ್‌ ಶಿರ್ವೋಯಿಕರ್‌ (86) ಅವರು ತಲಾ ಒಂದು ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಒಡಿಶಾ ಪೊಲೀಸ್‌ ಮತ್ತು ಶ್ರೀಭೂಮಿ ಎಫ್‌ಸಿ ನಡುವಣ ‘ಬಿ’ ಗುಂಪಿನ ಮತ್ತೊಂದು ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು.

ಒಡಿಶಾ ಪರ ಟಿಕಿನಾ ಸಮಾಲ್‌ (26) ಗೋಲು ಗಳಿಸಿದರೆ, 79ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಶ್ರೀಭೂಮಿ ತಂಡದ ಪೂನಂ ಚೆಂಡನ್ನು ಗುರಿ ಮುಟ್ಟಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು