ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌ ಲೀಗ್‌ ಇಂದಿನಿಂದ: ಕಣದಲ್ಲಿ 12 ತಂಡಗಳು

ಬೆಂಗಳೂರಿನ ಎರಡು ತಂಡಗಳು
Last Updated 23 ಜನವರಿ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಯುವ ಆಟಗಾರ್ತಿಯರ ಪ್ರತಿಭಾ ಶೋಧಕ್ಕೆ ವೇದಿಕೆಯಾಗುವ ನಾಲ್ಕನೇ ಹೀರೊ ಇಂಡಿಯನ್‌ ವಿಮೆನ್ಸ್‌ ಫುಟ್‌ಬಾಲ್‌ ಲೀಗ್‌ ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾಗಲಿದೆ. ಈ ಟೂರ್ನಿ ಮೊದಲ ಬಾರಿಗೆ ದಕ್ಷಿಣ ಭಾರತದ ನಗರವೊಂದರಲ್ಲಿ ನಡೆಯುತ್ತಿದೆ.

ತವರಿನಲ್ಲಿ ನಡೆಯುತ್ತಿರುವ ಈ ಲೀಗ್‌ನಲ್ಲಿ ಬೆಂಗಳೂರಿನ ಎರಡು ತಂಡ ಗಳು– ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ ಮತ್ತು ಬೆಂಗಳೂರು ಯುನೈಟೆಡ್‌ ಎಫ್‌ಸಿ– ಭಾಗವಹಿಸುತ್ತಿರುವುದು ವಿಶೇಷ. 21 ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಕಳೆದ ಬಾರಿಯ ಚಾಂಪಿಯನ್‌ ಚೆನ್ನೈನ ಸೇತು ಎಫ್‌ಸಿ ಸೇರಿದಂತೆ 12 ತಂಡಗಳು ಭಾಗವಹಿಸು ತ್ತಿವೆ. ತಂಡಗಳನ್ನು ‘ಎ’ ಮತ್ತು ‘ಬಿ’ ಗುಂಪುಗಳಲ್ಲಿ ವಿಂಡಿಸಲಾಗಿದೆ.

ಅರ್ಧ ಡಜನ್‌ನಷ್ಟು ಇಂಡಿಯನ್‌ ರೈಲ್ವೆ ಆಟಗಾರ್ತಿಯರನ್ನು ಹೊಂದಿ ರುವ, ಕರ್ನಾಟಕದ ಲೀಗ್‌ ಚಾಂಪಿಯನ್‌ ಕಿಕ್‌ಸ್ಟಾರ್ಟ್‌ ತಂಡ ಮೊದಲ ಪಂದ್ಯದಲ್ಲಿ ಇಂಪಾಲಾದ (ಮಣಿಪುರ) ಕ್ರಿಪ್‌ಶಾ ತಂಡವನ್ನು ಎದುರಿಸಲಿದೆ.

ಈ ಲೀಗ್‌ನ ಮೊದಲ ಆವೃತ್ತಿ ದೆಹಲಿಯಲ್ಲಿ ನಡೆದಿತ್ತು. ನಂತರದ ಟೂರ್ನಿಗಳು ಕ್ರಮವಾಗಿ ಶಿಲ್ಲಾಂಗ್‌, ಲುಧಿಯಾನಾದಲ್ಲಿ ನಡೆದಿದ್ದವು.‌

ಭಾರತ ತಂಡದ ನಾಯಕಿ ಆಶಾ ಲತಾ ದೇವಿ, ಅಮೂಲ್ಯಾ, ಮಿಶೆಲ್‌ ಕಾಸ್ಟಾನ್ಹಾ ಸೇರಿ ಹಲವು ಹಾಲಿ ಮತ್ತು ಮಾಜಿ ಅಂತರರಾಷ್ಟ್ರೀಯ ಆಟಗಾರ್ತಿಯರು ಇಲ್ಲಿ ಭಾಗವಹಿಸಲಿದ್ದಾರೆ. ‘ಈ ಟೂರ್ನಿಯಿಂದ ಯುವ ಆಟಗಾರ್ತಿಯರು ಬೆಳಕಿಗೆ ಬರುವುದನ್ನು ಎದುರುನೋಡು ತ್ತಿದ್ದೇನೆ’ ಎಂದು ರಾಷ್ಟ್ರೀಯ ಮಹಿಳಾ ತಂಡದ ಮುಖ್ಯ ತರಬೇತುದಾರರಾದ ಮೆಮೋಲ್‌ ರಾಖಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಐಎಸ್‌ಎಫ್‌ ಸಿಇಒ ಸುನಂದೊ ಧರ್‌ ಮಾತನಾಡಿ, ‘ಬೆಂಗಳೂರಿನ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲು ಅಡ್ಡಿಯಾಗದು. ಆಡಲು ಸಾಧ್ಯವಾಗದ ಪರಿಸ್ಥಿತಿಯೇನೂ ಇಲ್ಲಿ ಇಲ್ಲ. ಮುಂದಿನ ದಿನಗಳಲ್ಲಿ ಹೊಸ ಟರ್ಫ್‌ ಹಾಸುವ ಮೂಲಕ ಸೌಕರ್ಯಗಳು ಸುಧಾರಣೆಗೊಳ್ಳುವ ವಿಶ್ವಾಸವಿದೆ’ ಎಂದರು.

ಗುಂಪಿನಲ್ಲಿ ಪ್ರತಿ ತಂಡಗಳು ರೌಂಡ್‌ರಾಬಿನ್‌ ಲೀಗ್‌ ಮಾದರಿಯಲ್ಲಿ ಐದು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆಯುವ ಎರಡು ತಂಡಗಳು ಸಮಿಫೈನಲ್‌ನಲ್ಲಿ ಆಡಲಿವೆ.

ತಂಡಗಳು ಇಂತಿವೆ

‘ಎ’ ಗುಂಪು:
ಕಿಕ್‌ಸ್ಟಾರ್ಟ್‌ ಎಫ್‌ಸಿ ಕರ್ನಾಟಕ, ಎಫ್‌ಸಿ ಕೊಲ್ಹಾಪುರ, ಕ್ರಿಪ್‌ಶಾ ಎಫ್‌ಸಿ, ಬಿಬಿಕೆ ಡಿಎವಿ ಎಫ್‌ಸಿ, ಸೇತು ಎಫ್‌ಸಿ, ಬರೋಡಾ ಎಫ್‌ಎ.

‘ಬಿ’ ಗುಂಪು: ಕೆಂಕ್ರೆ ಎಫ್‌ಸಿ, ಮುಂಬೈ, ಗೋಕುಲಂ ಕೇರಳ ಎಫ್‌ಸಿ, ಒಡಿಶಾ ಪೊಲೀಸ್‌, ಬೆಂಗಳೂರು ಯುನೈಟೆಡ್‌ ಎಫ್‌ಸಿ, ಶ್ರೀಭೂಮಿ ಎಫ್‌ಸಿ, ಬಿದೇಶ್‌ ಇಲೆವನ್‌ ಸ್ಪೋರ್ಟ್ಸ್‌ ಕ್ಲಬ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT