ಸೋಮವಾರ, ಜುಲೈ 4, 2022
24 °C

ಡ್ರಾ ಪಂದ್ಯದಲ್ಲಿ ಡೆಲ್ಲಿ–ಪುಣೆ ಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಪುಣೆ ಆರಂಭದಲ್ಲೇ ಆಕ್ರಮಣಕಾರೀ ಆಟವಾಡಿತು. 16ನೇ ನಿಮಿಷದಲ್ಲಿ ಡೆಲ್ಲಿ ಕೂಡ ಹಿಡಿತ ಬಿಗಿಗೊಳಿಸಿತು. ಮೊದಲಾರ್ಧದಲ್ಲಿ ಪುಣೆ ತಂಡಕ್ಕೆ ಒಟ್ಟು ಏಳು ಕಾರ್ನರ್ ಅವಕಾಶಗಳು ಲಭಿಸಿದವು. 38ನೇ ನಿಮಿಷದಲ್ಲಿ ಫ್ರೀ ಕಿಕ್ ಅವಕಾಶವೂ ಲಭಿಸಿತು. ಆದರೆ ಮಾರ್ಕೊ ಸ್ಟಾಂಕೊವಿಚ್‌ ತೆಗೆದ ಕಿಕ್‌ ಗುರಿ ಮುಟ್ಟಲಿಲ್ಲ.

45ನೇ ನಿಮಿಷದಲ್ಲಿ ಡೆಲ್ಲಿ ಡೈನಾಮೋಸ್‌ನ ರಾಣಾ ಘರಾಮಿ ಮೋಡಿ ಮಾಡಿದರು. 30 ಗಜ ದೂರದಲ್ಲಿ ಚೆಂಡನ್ನು ನಿಯಂತ್ರಿಸಿದ ಅವರು ನೇರವಾಗಿ ನೆಟ್‌ ಕಡೆಗೆ ಒದ್ದರು. ಚೆಂಡು ಗಾಳಿಯಲ್ಲಿ ತೇಲಿ ಗೋಲು ಪೆಟ್ಟಿಗೆಯ ಒಳಗೆ ತೂರಿತು. ಎದುರಾಳಿ ತಂಡದ ಗೋಲ್‌ಕೀಪರ್ ಮತ್ತು ರಕ್ಷಣಾ ವಿಭಾಗದ ಆಟಗಾರರಿಗೆ ಅಚ್ಚರಿಯಿಂದ ನೋಡಲಷ್ಟೇ ಸಾಧ್ಯವಾಯಿತು. 36ನೇ ನಿಮಿಷದಲ್ಲಿ ಡೆಲ್ಲಿ ತಂಡದ ವಿಕ್ರಂ ಜೀತ್ ಸಿಂಗ್ ಗಾಯಗೊಂಡು ಮರಳಿದರು. ಅವರ ಬದಲಿಗೆ ವಿನೀತ್ ರಾಯ್ ಕಣಕ್ಕೆ ಇಳಿದರು.

ಜಯದ ನಿರೀಕ್ಷೆಯಲ್ಲಿ ಎಟಿಕೆ–ಯುನೈಟೆಡ್

ಅಟ್ಲೆಟಿಕೊ ಡಿ ಕೋಲ್ಕತ್ತಾ (ಎಟಿಕೆ) ಹಾಗೂ ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಗುರುವಾರ ಸೆಣಸಲಿವೆ.

ಐದನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ತವರಿನಲ್ಲೇ ಸೋತಿದ್ದ ಎಟಿಕೆ ತಂಡ ಈಗ ಒತ್ತಡದಲ್ಲಿದ್ದು ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವಿನ ಮೂಲಕ ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದೆ.

ಗುವಾಹಟಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಎಫ್‌ಸಿ ಗೋವಾ ಜೊತೆ 2–2 ಗೋಲುಗಳ ಡ್ರಾ ಸಾಧಿಸಿರುವ ನಾರ್ತ್‌ ಈಸ್ಟ್‌ ಯುನೈಟೆಡ್‌ ಕೂಡ ಈ ಬಾರಿಯ ಟೂರ್ನಿಯಲ್ಲಿ ಮೊದಲ ಜಯದ ನಿರೀಕ್ಷೆಯಲ್ಲಿದೆ.

ಕಳೆದ ಬಾರಿ ಟೂರ್ನಿ ಆರಂಭಕ್ಕೂ ಮೊದಲು ಬಲಿಷ್ಠ ತಂಡ ಎಂದೆನಿಸಿಕೊಂಡಿದ್ದ ಎಟಿಕೆ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಿರಲಿಲ್ಲ. ಈ ಬಾರಿಯೂ ಮೊದಲ ಪಂದ್ಯ ಸೋತ ಕಾರಣ ತಂಡಕ್ಕೆ ಆಘಾತ ಉಂಟಾಗಿದೆ. ಹೊಸ ಕೋಚ್‌ ಮತ್ತು ಆಟಗಾರರಲ್ಲಿ ಇನ್ನೂ ಹೊಂದಾಣಿಕೆ ಕಂಡುಬಂದಿಲ್ಲ ಎಂಬುದು ಆ ಪಂದ್ಯದಲ್ಲಿ ಸಾಬೀತಾಗಿತ್ತು.

‘ತಂಡದ ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯಕ್ಕೆ ಮೊದಲ ಪಂದ್ಯ ಸಾಕ್ಷಿಯಾಗಿತ್ತು. ಟೂರ್ನಿ ಆರಂಭವಾಗಲು ಆರು ವಾರಗಳು ಬಾಕಿ ಇದ್ದಾಗ ತಂಡ ಅಭ್ಯಾಸ ಪಂದ್ಯಗಳನ್ನು ಆಡಲು ಶುರು ಮಾಡಿತ್ತು. ಕೆಲವರಿಗೆ ಗಾಯದ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಇನ್ನೂ ‍ಪೂರ್ಣ ಪ್ರಮಾಣದ ಸಾಮರ್ಥ್ಯ ಮೆರೆಯಲು ತಂಡಕ್ಕೆ ಸಾಧ್ಯವಾಗಿಲ್ಲ. ಮುಂದಿನ ಪಂದ್ಯಗಳಲ್ಲಿ ಆಟಗಾರರು ಲಯಕ್ಕೆ ಮರಳಲಿದ್ದಾರೆ’ ಎಂದು ಎಟಿಕೆ ಕೋಚ್ ಸ್ಟೀವ್ ಕೊಪೆಲ್ ಹೇಳಿದರು.

ನಾರ್ತ್ ಈಸ್ಟ್ ತಂಡದಲ್ಲೂ ಹೊಂದಾಣಿಕೆಯ ಕೊರತೆ ಇರುವುದು ಮೊದಲ ಪಂದ್ಯದಲ್ಲಿ ಕಂಡುಬಂದಿತ್ತು. ಆದರೂ ಗೋವಾ ಜೊತೆ ಡ್ರಾ ಮಾಡಿಕೊಂಡಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು