ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವ ಮೋಡಿ: ಬಿಎಫ್‌ಸಿ ಜಯಭೇರಿ

ಐಎಸ್‌ಎಲ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್‌ ಪರಾಭವ
Last Updated 28 ಜನವರಿ 2023, 20:19 IST
ಅಕ್ಷರ ಗಾತ್ರ

ಬೆಂಗಳೂರು: ಶಿವ ನಾರಾಯಣನ್‌ ಅವರ ಕಾಲ್ಚಳಕದ ಬಲದಿಂದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 3–1ರಿಂದ ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರುವ ಮೂಲಕ ಪ್ಲೇ ಆಫ್‌ ಹಂತಕ್ಕೇರುವ ವಿಶ್ವಾಸವನ್ನು ಇನ್ನಷ್ಟು ವೃದ್ಧಿಸಿಕೊಂಡಿತು.

16 ಪಂದ್ಯಗಳನ್ನು ಆಡಿರುವ ಬೆಂಗಳೂರು ಏಳರಲ್ಲಿ ಗೆದ್ದು, ಎಂಟರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಮಾಡಿಕೊಂಡಿದೆ.

ಚೆನ್ನೈ ಈ ಸೋಲಿನೊಂದಿಗೆ ಎಂಟನೇ ಸ್ಥಾನದಲ್ಲಿ ಉಳಿಯಿತು.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಬಿಎಫ್‌ಸಿ ಅದಕ್ಕೆ ಪ್ರತಿಫಲವನ್ನೂ ಪಡೆಯಿತು. ಮೊದಲಾರ್ಧದ ಅವಧಿಯಲ್ಲೇ ಮೂರೂ ಗೋಲುಗಳನ್ನು ದಾಖಲಿಸಿ ಮೇಲುಗೈ ಸಾಧಿಸಿತು. 15ನೇ ನಿಮಿಷದಲ್ಲಿ ರಾಯ್‌ಕೃಷ್ಣ ಅವರು ಬಲಭಾಗದಿಂದ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದ ಶಿವ ತವರಿನ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದರು.

23ನೇ ನಿಮಿಷದಲ್ಲಿ ಶಿವ ತಮ್ಮ ಎರಡನೇ ಗೋಲು ಗಳಿಸಿ, ಚೆನ್ನೈಯಿನ್‌ ತಂಡದ ಒತ್ತಡ ಹೆಚ್ಚಿಸಿದರು. ಚೆನ್ನೈನ ವಫಾ ಹಕಮನೇಶಿ ತಮ್ಮ ತಂಡದ ಜೀತೇಶ್ವರ್ ಸಿಂಗ್ ಅವರಿಗೆ ಪಾಸ್ ನೀಡಿದರು. ಆದರೆ ಈ ವೇಳೆಗೆ ಚುರುಕಾಗಿ ಚೆಂಡನ್ನು ತಮ್ಮತ್ತ ಪಡೆದ ಶಿವ ಸುಲಭವಾಗಿ ಗೋಲುಪೆಟ್ಟಿಗೆಗೆ ಸೇರಿಸಿದರು.

ರೋಹಿತ್‌ ಕುಮಾರ್ ಅವರು 30ನೇ ನಿಮಿಷದಲ್ಲಿ ಬೆಂಗಳೂರು ತಂಡದ ಮೂರನೇ ಗೋಲು ಗಳಿಸಿದರು. ಎದುರಾಳಿ ತಂಡದ ಕಳಪೆ ಡಿಫೆನ್ಸ್ ಲಾಭ ಪಡೆದ ಅವರು ಗೋಲ್‌ಕೀಪರ್ ಸಮಿಕ್ ಮಿತ್ರ ಅವರನ್ನು ವಂಚಿಸಿ ಚೆಂಡನ್ನು ಸೊಗಸಾಗಿ ಗುರಿ ತಲುಪಿಸಿದರು.

ಚೆನ್ನೈ ತಂಡಕ್ಕಾಗಿ ಎಡ್ವಿನ್‌ ವನ್ಸ್‌ಪಾಲ್‌ 59ನೇ ನಿಮಿಷದಲ್ಲಿ ಸಮಾಧಾನದ ಗೋಲು ದಾಖಲಿಸಿದರು. ಇದಾದ ಬಳಿಕ ಉಭಯ ತಂಡಗಳು ಪ್ರಯತ್ನಿಸಿದರೂ ಗೋಲು ಗಳಿಕೆ ಸಾಧ್ಯವಾಗಲಿಲ್ಲ.

ಬೆಂಗಳೂರು ತಂಡದ ರೋಹಿತ್‌ ಕುಮಾರ್, ರಾಯ್‌ಕೃಷ್ಣ ಮತ್ತು ಚೆನ್ನೈಯಿನ್‌ ತಂಡದ ಅಜಿತ್‌ ಕುಮಾರ್ ಹಳದಿ ಕಾರ್ಡ್‌ ದರ್ಶನ ಮಾಡಿದರು.

ಬಿಎಫ್‌ಸಿ ಈ ಪಂದ್ಯದಲ್ಲಿ ನಾಯಕ ಸುನಿಲ್ ಚೆಟ್ರಿ ಅವರಿಗೆ ವಿಶ್ರಾಂತಿ ನೀಡಿತ್ತು. ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ತಂಡವನ್ನು ಮುನ್ನಡೆಸಿದರು.

ಬಿಎಫ್‌ಸಿ ತಂಡವು ಮುಂದಿನ ಪಂದ್ಯದಲ್ಲಿ ಫೆಬ್ರುವರಿ 5ರಂದು ಎಟಿಕೆ ಮೋಹನ್ ಬಾಗನ್ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT