ಭಾನುವಾರ, ನವೆಂಬರ್ 17, 2019
21 °C

ಐಎಸ್‌ಎಲ್‌: ಮತ್ತೊಂದು ಜಯದ ಮೇಲೆ ಹೈದರಾಬಾದ್‌ ಕಣ್ಣು

Published:
Updated:
Prajavani

ಹೈದರಾಬಾದ್‌: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಹೋದ ವಾರ ಚೊಚ್ಚಲ ಗೆಲುವಿನ ಸಿಹಿ ಸವಿದು ವಿಶ್ವಾಸ ಹೆಚ್ಚಿಸಿಕೊಂಡಿರುವ ಹೈದರಾಬಾದ್‌ ಎಫ್‌ಸಿ ತಂಡ ಈಗ ಮತ್ತೊಂದು ಸವಾಲಿಗೆ ಸಜ್ಜಾಗಿದೆ.

ತವರಿನ ಅಂಗಳದಲ್ಲಿ ಬುಧವಾರ ನಡೆಯುವ ಪಂದ್ಯದಲ್ಲಿ ಈ ತಂಡವು, ನಾರ್ತ್‌ಈಸ್ಟ್‌ ಯುನೈಟೆಡ್‌ ಎಫ್‌ಸಿ ಎದುರು ಹೋರಾಡಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಸೋತು ಟೀಕೆಗೆ ಗುರಿಯಾಗಿದ್ದ ಹೈದರಾಬಾದ್‌ ತಂಡ ಹಿಂದಿನ ಪಂದ್ಯದಲ್ಲಿ 2–1 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡವನ್ನು ಮಣಿಸಿತ್ತು.

ಪ್ರಮುಖ ಆಟಗಾರರಾದ ಬೊಬೊ, ರಫೆಲ್‌ ಗೋಮೆಜ್‌ ಮತ್ತು ಗಿಲೆಸ್‌ ಬಾರ್ನೆಸ್‌ ಅವರು ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ನೆಸ್ಟರ್‌ ಗಾರ್ಡಿಲ್ಲೊ ನಿಷೇಧ ಶಿಕ್ಷೆ ಎದುರಿಸುತ್ತಿದ್ದಾರೆ. ಇದರಿಂದ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಬ್ರೆಜಿಲ್‌ನ ಮುಂಚೂಣಿ ವಿಭಾಗದ ಆಟಗಾರ ಮಾರ್ಷೆಲಿನ್ಹೊ ಉತ್ತಮ ಲಯದಲ್ಲಿರುವುದು ಆತಿಥೇಯ ತಂಡಕ್ಕೆ ವರವಾಗಿ ಪರಿಣಮಿಸಿದೆ. ಕೇರಳ ಎದುರು ಫ್ರೀ ಕಿಕ್‌ನಲ್ಲಿ ಗೋಲು ಹೊಡೆದಿದ್ದ ಅವರು ನಾರ್ತ್‌ಈಸ್ಟ್‌ ಎದುರೂ ಮೋಡಿ ಮಾಡುವ ಉತ್ಸಾಹದಲ್ಲಿದ್ದಾರೆ.

ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನಾರ್ತ್‌ಈಸ್ಟ್‌ ಕೂಡ ಗೆಲುವಿನ ವಿಶ್ವಾಸದಲ್ಲಿದೆ.

ಅಸಮೊಹ್‌ ಗ್ಯಾನ್‌ ಮತ್ತು ಮಾರ್ಟಿನ್‌ ಚಾವೆಸ್‌ ಅವರು ಹೈದರಾಬಾದ್‌ ತಂಡದ ರಕ್ಷಣಾ ವಿಭಾಗಕ್ಕೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ರೆಡೀಮ್‌ ತಲಾಂಗ್‌ ಕೂಡ ನಾರ್ತ್‌ಈಸ್ಟ್‌ ತಂಡದ ಭರವಸೆಯಾಗಿದ್ದಾರೆ.

ಆರಂಭ: ರಾತ್ರಿ 7.30.

ನೇರ ಪ್ರಸಾರ: ಸ್ಟಾರ್‌ ನೆಟ್‌ವರ್ಕ್‌.

ಪ್ರತಿಕ್ರಿಯಿಸಿ (+)