ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟರ ಘಟ್ಟಕ್ಕೆ ಶ್ರೀಕಾಂತ್‌; ಸೋತ ಸಿಂಧು

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ: ಪ್ರಣವ್‌–ಸಿಕ್ಕಿ ರೆಡ್ಡಿ ಜೋಡಿಗೆ ನಿರಾಸೆ
Last Updated 4 ಏಪ್ರಿಲ್ 2019, 19:18 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಎದುರಾಳಿಯನ್ನು ನೇರ ಗೇಮ್‌ಗಳಿಂದ ಮಣಿಸಿದ ಭಾರತದ ಕಿದಂಬಿ ಶ್ರೀಕಾಂತ್‌ ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ ಹಂತ ತಲುಪಿದರು. ಏಕಪಕ್ಷೀಯ ಪಂದ್ಯದಲ್ಲಿ ಎದುರಾಳಿಗೆ ಮಣಿದ ಪಿ.ವಿ.ಸಿಂಧು ಕಣದಿಂದ ಹೊರಗೆ ಬಿದ್ದರು.

ಎಂಟನೇ ಶ್ರೇಯಾಂಕಿತ ಶ್ರೀಕಾಂತ್ ಥಾಯ್ಲೆಂಡ್‌ನ ಖೋಸಿಟ್‌ ಫೆಟ್ರಾದಬ್ ಅವರನ್ನು 21–11, 21–15ರಿಂದ ಸೋಲಿಸಿದರು. ಪಂದ್ಯ ಕೇಲವ ಅರ್ಧ ತಾಸಿನಲ್ಲಿ ಮುಕ್ತಾಯಗೊಂಡಿತು. ಎಂಟರ ಘಟ್ಟದ ಪಂದ್ಯದಲ್ಲಿ ಭಾರತದ ಆಟಗಾರ ಒಲಿಂಪಿಕ್ ಚಾಂಪಿಯನ್‌ ಹಾಗೂ ನಾಲ್ಕನೇ ಶ್ರೇಯಾಂಕಿತ ಚೀನಾದ ಚೆನ್‌ ಲಾಂಗ್‌ ಎದುರು ಸೆಣಸಲಿದ್ದಾರೆ.

ಕಳೆದ ವಾರ ನಡೆದ ಇಂಡಿಯಾ ಓ‍ಪನ್ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ಶ್ರೀಕಾಂತ್ 17 ತಿಂಗಳ ನಂತರ ಪ್ರಮುಖ ಟೂರ್ನಿಯೊಂದರ ಪ್ರಶಸ್ತಿ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದ್ದರು. ಮಲೇಷ್ಯಾ ಓಪನ್‌ನ ಆರಂಭದಿಂದಲೇ ಮಿಂಚುತ್ತಿರುವ ಅವರು ಈಗ ಭಾರತದ ಏಕೈಕ ಭರವಸೆಯಾಗಿದ್ದಾರೆ.

ಆರಂಭದಲ್ಲಿ 6–2ರ ಮುನ್ನಡೆ ಗಳಿಸಿ ವಿಶ್ವಾಸ ಗಳಿಸಿದ ಶ್ರೀಕಾಂತ್‌ ನಂತರ ಮುನ್ನಡೆಯನ್ನು 14–6ಕ್ಕೆ ಹೆಚ್ಚಿಸಿಕೊಂಡರು. ಹೀಗಾಗಿ ಮೊದಲ ಗೇಮ್‌ನಲ್ಲಿ ಸುಲಭ ಜಯ ಸಾಧಿಸಿದರು. ಎರಡನೇ ಗೇಮ್‌ನಲ್ಲೂ ಆಧಿಪತ್ಯ ಮುಂದುವರಿಸಿದರು. ಆದ್ದರಿಂದ ಎದುರಾಳಿ ನಿರುತ್ತರರಾದರು.

ಸಿಂಧುಗೆ ಆಘಾತ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಪಿ.ವಿ.ಸಿಂಧು 18–21, 7–21ರಿಂದ ದಕ್ಷಿಣ ಕೊರಿಯಾದ ಸಂಗ್ ಜಿ ಹ್ಯೂನ್‌ ಎದುರು ಸೋತರು. ಮೊದಲ ಗೇಮ್‌ನಲ್ಲಿ 13–10ರಿಂದ ಮುನ್ನಡೆದಿದ್ದ ಸಿಂಧು ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ತಿರುಗೇಟು ನೀಡಿದ ಎದುರಾಳಿ ನಂತರ ಆಧಿಪತ್ಯ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು.

ಮೊದಲ ಗೇಮ್‌ನಲ್ಲಿ ಸೊಗಸಾದ ರ‍್ಯಾಲಿಗಳ ಮೂಲಕ ಉಭಯ ಆಟಗಾರ್ತಿಯರು ಪ್ರೇಕ್ಷಕರನ್ನು ರಂಜಿಸಿದರು. ಈ ನಡುವೆ ಸಿಂಧು 8–5ರ ಮುನ್ನಡೆ ಸಾಧಿಸಿದರು. ಪಟ್ಟು ಬಿಡದ ಸಂಗ್‌ ಜಿ ತಿರುಗೇಟು ನೀಡಿದರು. ಪ್ರಬಲ ಕ್ರಾಸ್ ಕೋರ್ಟ್ ಶಾಟ್ ಮೂಲಕ ಸಮಬಲ ಸಾಧಿಸಿದರು. ಸಿಂಧು ಕೂಡ ಪಟ್ಟು ಬಿಡದೆ ಕಾದಾಡಿ 11–9ರಿಂದ ಮುನ್ನಡೆದರು. ವಿರಾಮದ ನಂತರ ಸಂಗ್ ಜಿ ಹಿನ್ನಡೆಯ ಅಂತರ ಕಡಿಮೆ ಮಾಡಲು ಪ್ರಯತ್ನಿಸಿದರು. ಎರಡು ಶಾಟ್‌ಗಳಲ್ಲಿ ವೈಫಲ್ಯ ಕಂಡ ಸಿಂಧು 14–16ರಿಂದ ಹಿನ್ನಡೆದರು. ನಂತರ ಸಂಗ್‌ ಜಿ ಹಿಂದಿರುಗಿ ನೋಡಲಿಲ್ಲ.

ಎರಡನೇ ಗೇಮ್‌ನ ಆರಂಭದಲ್ಲಿ 5–0 ಮುನ್ನಡೆ ಗಳಿಸಿದ ಸಂಗ್ ಜಿ ನಂತರ ಇದನ್ನು 10–5ಕ್ಕೆ ಹಿಗ್ಗಿಸಿದರು. ಸತತ ಆರು ಪಾಯಿಂಟ್‌ಗಳನ್ನು ಗಳಿಸಿ ಹಿಡಿತ ಸಾಧಿಸಲು ಸಿಂಧು ಪ್ರಯತ್ನಿಸಿದರು. ನಂತರ ನೀರಸ ಆಟವಾಡಿ ಸೋಲೊಪ್ಪಿಕೊಂಡರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿ ಸ್ಥಳೀಯರಾದ ಟಾನ್‌ ಕಿಯಾನ್‌ ಮೆಂಗ್ ಮತ್ತು ಲಾಯಿ ಪೇಯಿ ಜಿಂಗ್ ಎದುರು 21–15, 17–21, 13–21ರಿಂದ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT