ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂದ್ಯಕ್ಕಾಗಿ 70 ಕಿಮೀ ಪಯಣಿಸಿದ ‘ಗೋಲ್ಡನ್ ಬೇಬಿ’ಗಳು

Last Updated 8 ನವೆಂಬರ್ 2020, 19:15 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲ ಅಡೆತಡೆಗಳನ್ನೂ ದಾಟಿ ಅವರು ಕ್ರೀಡಾಂಗಣಕ್ಕೆ ತಲುಪಿದ್ದಾರೆ. ಪ್ರಯಾಣದ ಆಯಾಸವನ್ನು ಮೆಟ್ಟಿನಿಂತು ಕಣಕ್ಕೆ ಇಳಿದಿದ್ದಾರೆ; ಆಟವಾಡಿ ಸಂಭ್ರಮಿಸಿದ್ದಾರೆ. ಎಳೆಯ ಮಕ್ಕಳಲ್ಲಿ ಕ್ರೀಡಾಪ್ರೀತಿ ಬೆಳೆಸುವ ಉದ್ದೇಶದಿಂದ ಆಯೋಜಿಸುತ್ತಿರುವ ’ಗೋಲ್ಡನ್ ಬೇಬಿ‘ ಫುಟ್‌ಬಾಲ್ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮಕ್ಕಳು 70 ಕಿಲೋಮೀಟರ್ ದೂರ ಪ್ರಯಾಣಿಸಿದ್ದಾರೆ.

ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) 2018ರಲ್ಲಿ ಗೋಲ್ಡನ್ ಬೇಬಿ ಲೀಗ್ ಯೋಜನೆಯನ್ನು ಜಾರಿಗೆ ತಂದಿತ್ತು. ಲಿಂಗ, ಜಾತಿ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ನೆಲೆಯನ್ನು ಮೀರಿ ಎಲ್ಲರಿಗೂ ಫುಟ್‌ಬಾಲ್ ಆಡಲು ಅವಕಾಶ ಸಿಗಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿತ್ತು. ಆರರಿಂದ 12 ವಯಸ್ಸಿನೊಳಗಿನವರಿಗೆ ಮಾತ್ರ ಟೂರ್ನಿಯಲ್ಲಿ ಆಡಲು ಅವಕಾಶ.ಮೇಘಾಲಯದ ಗುಡ್ಡಗಾಡು ಪ್ರದೇಶದಲ್ಲಿ ನಡೆಯುವ ಟೂರ್ನಿಗೆ ಹತ್ತಾರು ಕಿಲೋಮೀಟರ್ ದೂರದಿಂದ ಮಕ್ಕಳು ಬಂದಿದ್ದಾರೆ ಎಂದು ಎಐಎಫ್‌ಎಫ್ ವೆಬ್‌ಸೈಟ್ ವರದಿ ಮಾಡಿದೆ.

‘ಈ ವರ್ಷ ಯೋಜನೆಯ ಮೊದಲ ಲೀಗ್ ಆಯೋಜಿಸಲಾಗುತ್ತಿದೆ. ದೇಶದ ವಿವಿಧ ಪ್ರದೇಶಗಳ ಆಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವರು ಕಷ್ಟಪಟ್ಟು ತಮ್ಮೂರಿಂದ ಇಲ್ಲಿಗೆ ಬರಬೇಕಾಗಿದೆ. ಮೇಘಾಲಯದ ಕೆಲವು ಭಾಗಗಳಿಂದ ಮಕ್ಕಳು ಮುಂಜಾನೆ ಆರಕ್ಕೆ ಎದ್ದು ಸಿದ್ಧಗೊಂಡು 70 ಕಿಲೋಮೀಟರ್‌ಗೂ ಅಧಿಕ ದೂರ ಪ್ರಯಾಣ ಬೆಳೆಸುತ್ತಿದ್ದಾರೆ’ ಎಂದು ಲೀಗ್‌ನ ಕಾರ್ಯಕರ್ತ ಗಿಲ್ಬರ್ಟ್‌ ಜಾಕ್ಸನ್ ಹೇಳಿರುವುದಾಗಿ ಎಐಎಫ್‌ಎಫ್‌ ವೆಬ್‌ಸೈಟ್‌ ವರದಿ ಮಾಡಿದೆ.

‘ಸಣ್ಣ ವಯಸ್ಸಿನಲ್ಲೇ ಫುಟ್‌ಬಾಲ್ ಆಡುವ ಹುಮ್ಮಸ್ಸು ಮೂಡಿಸಿಕೊಳ್ಳುವ ಹೊಸ ತಲೆಮಾರನ್ನು ಸಿದ್ಧಗೊಳಿಸುವುದು ಲೀಗ್‌ನ ಉದ್ದೇಶ. ಈ ಮಕ್ಕಳಿಗೆ ಫುಟ್‌ಬಾಲ್‌ನಲ್ಲಿ ಅತಿಯಾದ ಆಸಕ್ತಿ ಇದೆ. ನೈಜ ಪ್ರೇಮ ಇಲ್ಲದವರು ಇಷ್ಟೊಂದು ಕಷ್ಟಪಟ್ಟು ಕ್ರೀಡಾಂಗಣಕ್ಕೆ ಬರಲಾರರು’ ಎಂದು ಅವರು ಅಭಿಪ್ರಾಯಪಟ್ಟರು.

‘ಭಾರತದ ಮೂಲೆ ಮೂಲೆಯಲ್ಲಿರುವ ಫುಟ್‌ಬಾಲ್ ಸಂಸ್ಥೆಗಳು ಇಲ್ಲಿ ಆಡಿದ ಮಕ್ಕಳ ಪ್ರತಿಭೆಯನ್ನು ಪರಿಗಣಿಸಲಿದ್ದಾರೆ. ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ಲೀಗ್ ಆಯೋಜಿಸುವ ಚಿಂತನೆಯೂ ಅವರಿಗೆ ಇದೆ’ ಎಂದು ಅವರು ಜಾಕ್ಸನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT