ಮಂಗಳವಾರ, ಜನವರಿ 21, 2020
29 °C

ಇಂಡಿಯನ್ ಸೂಪರ್ ಲೀಗ್: ಹೈದರಾಬಾದ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಅಂತಿಮ ನಿಮಿಷಗಳಲ್ಲಿ ಜಾದೂ ಮಾಡುವ ರಾಯ್‌ ಕೃಷ್ಣ ಮತ್ತೊಮ್ಮೆ ಕಾಲ್ಚಳಕ ತೋರಿ ಎಟಿಕೆ ತಂಡದ ರಕ್ಷಣೆಗೆ ನಿಂತರು. 90ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲಿನ ಮೂಲಕ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ 2–2ರ ಡ್ರಾ ಸಾಧಿಸಿತು.

ಹೈದರಾಬಾದ್ ಎಫ್‌ಸಿ ವಿರುದ್ಧ ಇಲ್ಲಿನ ಬಾಲಯೋಗಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ 15ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಕೃಷ್ಣ ಗೋಲು ಗಳಿಸಿದರು. 39 ಮತ್ತು 85ನೇ ನಿಮಿಷಗಳಲ್ಲಿ ಬೋಬೊ ಅವರ ಗೋಲಿನ ಬಲದಿಂದ ಆತಿಥೇಯರು ಗೆಲುವಿನತ್ತ ದಾ‍‍ಪುಗಾಲು ಹಾಕಿದರು. ಆದರೆ ಇಂಜುರಿ ಅವಧಿಯಲ್ಲಿ ಕೃಷ್ಣ ಸುಲಭವಾಗಿ ಗೋಲು ಗಳಿಸಿ ಎಟಿಕೆ ನಿಟ್ಟುಸಿರುವ ಬಿಡುವಂತೆ ಮಾಡಿದರು.

ಗೋವಾಗೆ ಅಗ್ರ ಸ್ಥಾನದ ಮೇಲೆ ಕಣ್ಣು: ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಫ್‌ಸಿ ಗೋವಾ ತಂಡ ಭಾನುವಾರದ ಪಂದ್ಯದಲ್ಲಿ ಒಡಿಶಾ ಎಫ್‌ಸಿಯನ್ನು ಎದುರಿಸಲಿದೆ. ಮಡ್ಗಾಂವ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದರೆ ಗೋವಾದ ಪಾಯಿಂಟ್‌ ಗಳಿಕೆ 18ಕ್ಕೆ ಏರಲಿದೆ. 16 ಪಾಯಿಂಟ್ ಗಳಿಸಿ ಅಗ್ರ ಸ್ಥಾನದಲ್ಲಿರುವ ಬಿಎಫ್‌ಸಿ ಎರಡನೇ ಸ್ಥಾನಕ್ಕೆ ಕುಸಿಯಲಿದೆ. ಒಡಿಶಾ ಒಂಬತ್ತು ಪಾಯಿಂಟ್‌ಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಎಟಿಕೆ ವಿರುದ್ಧ ಕಳೆದ ಪಂದ್ಯದಲ್ಲಿ ಗೋವಾ 2–1ರಲ್ಲಿ ಗೆದ್ದಿತ್ತು. ಹೀಗಾಗಿ ತವರಿನಲ್ಲಿ ಆತ್ಮವಿಶ್ವಾಸದೊಂದಿಗೆ ಆಡಲಿದೆ. ಗಾಯಗೊಂಡಿದ್ದ ಫೆರಾನ್ ಕೊರೊಮಿನಾಸ್ ವಾಪಸಾಗಿರುವುದು ತಂಡದ ಬಲ ಹೆಚ್ಚಿಸಿದೆ. ಬಲಿಷ್ಠ ಆಕ್ರಮಣ ವಿಭಾಗವನ್ನು ಹೊಂದಿರುವ ಗೋವಾ ಆಟಗಾರರಿಗೆ ಒಡಿಶಾದ ದುರ್ಬಲ ರಕ್ಷಣಾ ವಿಭಾಗವನ್ನು ವಂಚಿಸಿ ಗೋಲು ಗಳಿಸಲು ಕಷ್ಟವಾಗದು.

ಒಡಿಶಾದ ವಿನೀತ್ ರಾಜ್ ಅಮಾನತುಗೊಂಡಿದ್ದು ಈ ಪಂದ್ಯಕ್ಕೆ ಲಭ್ಯವಿಲ್ಲ. ಆದ್ದರಿಂದ ತಂಡವು ಅರಿದೇನ್ ಸಂಟಾನ ಅವರನ್ನು ಅವಲಂಬಿಸಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿರುವುದರಿಂದ ಈ ತಂಡವೂ ವಿಶ್ವಾಸದಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು