ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್ | ಎಂಬಾಪೆ ಮೂಗಿಗೆ ಪೆಟ್ಟು: ಫ್ರಾನ್ಸ್‌ಗೆ ಜಯ

ಆಸ್ಟ್ರಿಯಾ ತಂಡಕ್ಕೆ ಸೋಲು
Published 19 ಜೂನ್ 2024, 0:00 IST
Last Updated 19 ಜೂನ್ 2024, 0:00 IST
ಅಕ್ಷರ ಗಾತ್ರ

ಡಸೆಲ್‌ಡಾರ್ಫ್‌, ಜರ್ಮನಿ: ಫ್ರಾನ್ಸ್‌ ನಾಯಕ ಕಿಲಿಯನ್ ಎಂಬಾಪೆ ಮಂಗಳವಾರ ನಡೆದ ಯುರೋ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಮೂಗು ಮುರಿದುಕೊಂಡರು. ಆದರೆ ಅವರ ತಂಡವು 1–0ಯಿಂದ ಆಸ್ಟ್ರಿಯಾ ವಿರುದ್ಧ ಜಯಭೇರಿ ಬಾರಿಸಿತು.

ಪಂದ್ಯದಲ್ಲಿ ಮೇಲಕ್ಕೆ ಚಿಮ್ಮಿದ ಚೆಂಡಿನ ಮೇಲೆ ನಿಯಂತ್ರಣದ ಸಾಧಿಸುವ ಭರದಲ್ಲಿ ಎಂಬಾಪೆಯವರು, ಆಸ್ಟ್ರ್ರೀಯಾದ ಡಿಫೆಂಡರ್ ಕೆವಿನ್ ಡೆನ್ಸೊ ಅವರಿಗೆ ಡಿಕ್ಕಿ ಹೊಡೆದರು.  ಅವರ ಮೂಗಿಗೆ ಬಲವಾದ ಪೆಟ್ಟಾಗಿ ತೀವ್ರ ರಕ್ತಸ್ರಾವವಾಯಿತು. ಇದರಿಂದಾಗಿ ಪಂದ್ಯದ 90ನೇ ನಿಮಿಷದಲ್ಲಿ ಎಂಬಾಪೆ ಮೈದಾನ ತೊರೆದರು. 

‘ಅವರಿಗೆ (ಎಂಬಾಪೆ) ತೀವ್ರ ಪೆಟ್ಟಾಗಿದೆ. ಅವರ ಮೂಗಿನ ಸ್ಥಿತಿ ಗಂಭೀರವಾದಂತಿದೆ. ಈ ಸಂಜೆ ನಮ್ಮ ತಂಡದ ಪಾಲಿಗೆ ಈ ಘಟನೆಯು ಅತ್ಯಂತ ದುಃಖದಾಯಕವಾಗಿದೆ’ ಎಂದು ಫ್ರಾನ್ಸ್ ಕೋಚ್ ಡಿಡೀರ್ ದೇಶ್‌ಚಾಂಪ್ಸ್‌ ಸುದ್ದಿಗಾರರಿಗೆ ಹೇಳಿದರು. 

ಎಂಬಾಪೆ ಗಾಯಗೊಂಡಿದ್ದರೂ ಆಟ ಮುಂದುವರಿದಿತ್ತು. ಆದರೆ ಇದನ್ನು ನೋಡಿದ ಆಸ್ಟ್ರಿಯಾ ಗೋಲ್‌ಕೀಪರ್ ಪ್ಯಾಟ್ರಿಕ್ ಪೆಂಜ್ ಅವರು ರೆಫರಿಯ ಗಮನಕ್ಕೆ ತಂದರು. ಆಗ ಆಟ ಕೆಲಹೊತ್ತು ಸ್ಥಗಿತವಾಯಿತು. ಫ್ರಾನ್ಸ್ ತಂಡದ ವೈದ್ಯಕೀಯ ಸಿಬ್ಬಂದಿ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದರು. ಎಂಬಾಪೆಯವರ ಪೋಷಾಕು ರಕ್ತಸಿಕ್ತವಾಗಿತ್ತು.  ಅವರನ್ನು ಚಿಕಿತ್ಸೆಗಾಗಿ ಹೊರಗೆ ಕರೆದೊಯ್ಯಲಾಯಿತು.  ಎಂಬಾಪೆ ಬದಲಿಗೆ ಅನುಭವಿ ಆಟಗಾರ ಒಲಿವರ್ ಗಿರೋದ್ ಅವರು ಆಡಿದರು. 

ಪಂದ್ಯದ ನಂತರ ಎಂಬಾಪೆಯವರ ಗಾಯದ ಕುರಿತು ಮಾಹಿತಿ ನೀಡಿದ ಫ್ರೆಂಚ್ ಫುಟ್‌ಬಾಲ್ ಫೆಡರೇಷನ್ ಅಧ್ಯಕ್ಷ ಫಿಲಿಪ್ ಡಿಯಾಲೊ ‘ಶಸ್ತ್ರಚಿಕಿತ್ಸೆಗೆ ಅಗತ್ಯವಿರಲಾರದು’ ಎಂದರು. 

ಪಂದ್ಯವು ಬಹಳಷ್ಟು ಕುತೂಹಲ ಕೆರಳಿಸಿತ್ತು. ಮೊದಲ 37 ನಿಮಿಷಗಳಲ್ಲಿ ಉಭಯ ತಂಡಗಳ ಆಟಗಾರರು ಗೋಲು ಗಳಿಸಲು ಮಾಡಿದ ಪ್ರಯತ್ನಗಳಿಗೆ ಫಲ ಸಿಗಲಿಲ್ಲ. ಆದರೆ 38ನೇ ನಿಮಿಷದಲ್ಲಿ ಫ್ರಾನ್ಸ್‌ ತಂಡದ ಅದೃಷ್ಟ ಖುಲಾಯಿಸಿತು. ಆಸ್ಟ್ರಿಯಾದ ಮ್ಯಾಕ್ಸಿಮಿಲಿಯನ್ ವೋಬರ್ ಗೋಲು ‘ಉಡುಗೊರೆ’ ನೀಡಿದರು. ಇದರಿಂದಾಗಿ ಫ್ರಾನ್ಸ್ ತಂಡವು 1–0 ಮುನ್ನಡೆ ಗಳಿಸಿತು. ಇದನ್ನು ಕೊನೆಯವರೆಗೂ ಉಳಿಸಿಕೊಂಡಿತು. 

ಮುಖಗವಸು ಧರಿಸಿ ಆಡುವರೇ ಎಂಬಾಪೆ?

ಡಸೆಲ್‌ಡಾರ್ಫ್‌ ಜರ್ಮನಿ (ಎಪಿ): ಆಸ್ಟ್ರಿಯಾ ಎದುರಿನ ಪಂದ್ಯದಲ್ಲಿ ಎಂಬಾಪೆ ಅವರ ಮೂಗಿಗೆ ತೀವ್ರ ಗಾಯವಾಗಿದೆ. ಒಂದೊಮ್ಮೆ ಅವರು ಮುಂದಿನ ಪಂದ್ಯದಲ್ಲಿ ಆಡಬಹುದು. ಅದಕ್ಕಾಗಿ ಮುಖಗವಸು ಧರಿಸಬೇಕಾಗುತ್ತದೆ ಎಂದು ಫ್ರೆಂಚ್‌ ಫುಟ್‌ಬಾಲ್ ಫೆಡರೇಷನ್‌ ಮೂಲಗಳು ತಿಳಿಸಿವೆ. ‘ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ತಂಡವು ತೀವ್ರ ನಿಗಾ ವಹಿಸಿದೆ. ಆದಷ್ಟು ಶಸ್ತ್ರಚಿಕಿತ್ಸೆ ಮಾಡದಿರಲು ಚಿಕಿತ್ಸೆ ನೀಡಲಾಗುತ್ತಿದೆ. ಗಾಯ ಶಮನಕ್ಕೆ ಕೆಲವು ದಿನಗಳ ಸಮಯ ಬೇಕಾಗಬಹುದು. ಒಂದೊಮ್ಮೆ ಅವರು ಮುಂದಿನ ಪಂದ್ಯದಲ್ಲಿ ಆಡಬೇಕಾದರೆ ಮತ್ತೆ ಪೆಟ್ಟಾಗದಂತೆ ಮೂಗಿಗೆ ಮಾಸ್ಕ್‌ ಧರಿಸಬೇಕಾಗಬಹುದು’ ಎಂದು ಫೆಡರೇಷನ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT