ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾ ಲಿಗಾ ಫುಟ್‌ಬಾಲ್: ಖಾಲಿ ಕ್ರೀಡಾಂಗಣದಲ್ಲಿಯೂ ಮೆಸ್ಸಿ ಮ್ಯಾಜಿಕ್!

ಬಾರ್ಸಿಲೋನಾಗೆ ಲೆಗನೇಸ್ ವಿರುದ್ಧ ಜಯ
Last Updated 17 ಜೂನ್ 2020, 6:39 IST
ಅಕ್ಷರ ಗಾತ್ರ

ಮ್ಯಾಡ್ರಿಡ್: ಕಾಲ್ಚೆಂಡಿನ ಜಾದೂಗಾರ ಲಯೊನೆಲ್ ಮೆಸ್ಸಿ ಗೋಲು ಹೊಡೆದಾಗಲೆಲ್ಲ ಕ್ರೀಡಾಂಗಣದ ಗ್ಯಾಲರಿಯಲ್ಲಿ ಪ್ರೇಕ್ಷಕರ ಸಂಭ್ರಮ ಸಮುದ್ರದಂತೆ ಭೋರ್ಗರೆಯುತ್ತಿತ್ತು.

ಆದರೆ ಮಂಗಳವಾರ ರಾತ್ರಿ 99 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಇರುವ ಕ್ಯಾಂಪ್ ನೌ ಕ್ರೀಡಾಂಗಣದಲ್ಲಿ ಇಡೀ ಗ್ಯಾಲರಿ ಭಣಗುಟ್ಟುತ್ತಿತ್ತು. ಬಾರ್ಸಿಲೊನಾ ಎಫ್‌ಸಿ ತಂಡವು ಮೆಸ್ಸಿ ಗೋಲಿನ ಬಲದಿಂದ 2–0ಯಿಂದ ಲೆಗೆನ್ಸ್‌ ವಿರುದ್ಧ ಗೆದ್ದಾಗಲೂ ಖಾಲಿ ಕ್ರೀಡಾಂಗಣದ ನೀರವತೆ ಇತ್ತು. ಆದರೆ ಅಲ್ಲಿಯೇ ಇದ್ದ ಟಿವಿ ಪರದೆ ಮೇಲೆ ಪ್ರೇಕ್ಷಕರ ಸಂಭ್ರಮದ ವಿಡಿಯೊಗಳು ಮೂಡಿ ಬಂದವು. ಏಕತಾನತೆಯನ್ನ ತೊಡೆದು ಹಾಕಿದವು.

ಕೊರೊನಾ ವೈರಸ್ ಕಾರಣದಿಂದ ಪ್ರೇಕ್ಷಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಆಯೋಜಕರು ಇಲ್ಲಿ ಒಂದು ತಂತ್ರ ರೂಪಿಸಿದ್ದಾರೆ. ಟಿವಿಯಲ್ಲಿ ಪಂದ್ಯ ವೀಕ್ಷಿಸುವವರು ಕಳಿಸಿರುವ ವಿಡಿಯೊಗಳನ್ನು ಪರದೆಯಲ್ಲಿ ತೋರಿಸಲಾಯಿತು. ಸ್ಥಳೀಯ ಪಿಟಿಲು ವಾದಕರು ಕೋವಿಡ್–19 ಸೋಂಕಿಗೆ ಬಲಿಯಾದವರಿಗೆ ಸಂಗೀತನಮನ ಸಲ್ಲಿಸಿದರು.

ಜನರಿಲ್ಲದ ಅಂಗಳದಲ್ಲಿಯೂ ಮೆಸ್ಸಿ ಮ್ಯಾಜಿಕ್ ನೋಡುವ ಅವಕಾಶ ತಪ್ಪಿಸಿಕೊಂಡರು. ಆದರೆ, ಮೆಸ್ಸಿ ಆಟದ ರಂಗು ಮಾತ್ರ ಬದಲಾಗಲಿಲ್ಲ.

ಇದರ ಪರಿಣಾಮವಾಗಿ ಬಾರ್ಸಿಲೊನಾ ಲೆಗೆನಸ್ ವಿರುದ್ಧ ಜಯಿಸಿತು. ಬಾರ್ಸಿಲೊನಾದ ಅನ್ಷು ಫ್ಯಾಟಿ ಕೂಡ ಒಂದು ಗೋಲು ಗಳಿಸಿ ತಂಡದ ಜಯಕ್ಕೆ ಬಲ ತುಂಬಿದರು.

ಪಂದ್ಯದ ಮೊದಲ 40 ನಿಮಿಷಗಳಲ್ಲಿ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. ರಕ್ಷಣಾ ಆಟಗಾರರ ತುರುಸಿನ ಆಟದ ಫಲ ಇದಾಗಿತ್ತು. ಆದರೆ 42ನೇ ನಿಮಿಷದಲ್ಲಿ ಫ್ಯಾಟಿ ಚುರುಕುತನ ಮೆರೆದರು. ಇದರೊಂದಿಗೆ ಬಾರ್ಸಿಲೊನಾ ತಂಡವು 1–0 ಗೋಲಿನೊಂದಿಗೆ ಅರ್ಧವಿರಾಮಕ್ಕೆ ಹೋಯಿತು.

ಲೆಗನ್ಸ್‌ ರಕ್ಷಣಾ ಪಡೆಯು ಹೆಚ್ಚು ಕಾಲ ಮೆಸ್ಸಿ ಮೇಲೆ ಕಣ್ಣಿಟ್ಟಿತ್ತು. ಅದನ್ನು ಫ್ಯಾಟಿ ಸದುಪಯೋಗ ಪಡಿಸಿಕೊಂಡರು. ಲೀಗ್‌ನಲ್ಲಿ ಇದು ಅವರ 21ನೇ ಗೋಲು.

ವಿರಾಮದ ನಂತರ ಮೆಸ್ಸಿ ಮ್ಯಾಜಿಕ್ ಆರಂಭವಾಯಿತು. ಲೆಗೆನ್ಸ್‌ ತಂಡದ ಯಾವುದೇ ತಂತ್ರವೂ ಫಲಿಸಲಿಲ್ಲ. 69ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯಲ್ಲಿ ಮೆಸ್ಸಿ ಗೋಲು ಹೊಡೆದರು. ಇದು ಅವರ 699ನೇ ಗೋಲು.

ಕೊರೊನಾ ವೈರಸ್ ಹಾವಳಿಯಿಂದಾಗಿ ಮೂರು ತಿಂಗಳಿಗೂ ಹೆಚ್ಚು ಕಾಲ ಫುಟ್‌ಬಾಲ್ ಲೀಗ್ ಟೂರ್ನಿಗಳು ಸ್ಥಗಿತವಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT