ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಯಾರ್ಕ್‌ ಟೈಮ್ಸ್‌ ಸ್ಕ್ವೇರ್‌ನಲ್ಲಿ ಮಿಂಚಿದ ಮೋಹನ್ ಬಾಗನ್

ನಾಸ್ಟ್ಯಾಕ್‌ ಬಿಲ್‌ಬೋರ್ಡ್‌ನಲ್ಲಿ ಪ್ರದರ್ಶಿತವಾದ ಭಾರತದ ಮೊದಲ ಕ್ರೀಡಾ ಕ್ಲಬ್
Last Updated 29 ಜುಲೈ 2020, 15:43 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತದ ಫುಟ್‌ಬಾಲ್ ಪ್ರಿಯರಿಗೆ ಬುಧವಾರವು ಸಂಭ್ರಮದ ದಿನವಾಯಿತು. ನ್ಯೂಯಾರ್ಕ್‌ ಟೈಮ್ಸ್‌ ಸ್ಕೇರ್‌ನಲ್ಲಿರುವ ನಾಸ್ಟಾಕ್ ಬಿಲ್‌ಬೋರ್ಡ್‌ನಲ್ಲಿ ಕೋಲ್ಕತ್ತದ ಮೋಹನ್ ಬಾಗನ್ ಅಥ್ಲೆಟಿಕ್ ಕ್ಲಬ್‌ ಹೆಸರು ಮಿರಿಮಿರಿ ಮಿಂಚಿತು.

ಅಮೆರಿಕದ ಶೇರು ವಿನಿಮಯ ಕೇಂದ್ರವಾದ ನಾಸ್ಕಾಕ್‌ ಬಿಲ್‌ಬೋರ್ಡ್‌ನಲ್ಲಿ ಈ ಗೌರವ ಗಳಿಸಿದ ಭಾರತದ ಮೊದಲ ಕ್ರೀಡಾ ಕ್ಲಬ್‌ ಎಂಬ ಹೆಗ್ಗಳಿಕೆಗೆ ಮೋಹನ್ ಬಾಗನ್ ಪಾತ್ರವಾಯಿತು.

’131 ವರ್ಷಗಳ ಯಾರಿಗೂ ಸಾಟಿಯಾಗದ ಪರಂಪರೆ ಇಂದಿಗೂ ಮುಂದುವರಿದಿದೆ‘, ’ಮತ್ತೆ ಮತ್ತೆ ವಿಶ್ವಾಸವಿಡುವ ಕಾಲ ಈಗ ಬಂದಿದೆ‘ ಎಂದು ಎರಡು ಸಾಲುಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

1911ರ ಜುಲೈ 29ರಂದು ಬಾಗನ್ ಫುಟ್‌ಬಾಲ್ ತಂಡವು ಈಸ್ಟ್‌ ಯಾರ್ಕ್‌ಶೈರ್ ರೆಜಿಮೆಂಟ್ ತಂಡದ ಎದುರು 2–1 ಗೋಲುಗಳಿಂದ ಗೆದ್ದಿತ್ತು. ಅಲ್ಲಿಯವರೆಗೆ ಯಾವುದೇ ಭಾರತೀಯ ಫುಟ್‌ಬಾಲ್ ಕ್ಲಬ್‌ ಬ್ರಿಟಿಷ್ ತಂಡಗಳ ಎದುರು ಗೆದ್ದಿರಲಿಲ್ಲ. ಇದರಿಂದಾಗಿ ಫುಟ್‌ಬಾಲ್‌ನಲ್ಲಿ ಬ್ರಿಟಿಷರ ಏಕಸ್ವಾಮ್ಯ ಅಂತ್ಯವಾಗಿತ್ತು. ಆ ಐತಿಹಾಸಿಕ ಜಯವನ್ನು ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಬಾರಿ ಅದೇ ದಿನದಂದು ನಾಸ್ಡಾಕ್‌ ತನ್ನ ಫಲಕದಲ್ಲಿ ಬಾಗನ್ ತಂಡದ ಲಾಂಛನ ಪ್ರದರ್ಶಿಸಿ ಗೌರವಿಸಿದೆ.

’ಮೋಹನ್ ಬಾಗನ್ ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಇದು ಬಹಳ ಹೆಮ್ಮೆಯ ವಿಷಯವಾಗಿದೆ. ಇವತ್ತಿಗೂ ಕ್ಲಬ್‌ ತನ್ನ ಘನತೆಯನ್ನು ಉಳಿಸಿಕೊಂಡು ಬಂದಿರುವುದರ ಸಂಕೇತ ಇದು. ಭಾರತದ ಯಾವುದೇ ಕ್ಲಬ್‌ ಮಾಡದಿರುವ ಸಾಧನೆಯನ್ನು ಬಾಗನ್ ಮಾಡಿದೆ‘ ಎಂದು ಕ್ಲಬ್‌ ಪದಾಧಿಕಾರಿ ದೇವಾಶಿಶ್ ದತ್ತಾ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಬಾಗನ್ ಕ್ಲಬ್‌ ಅಭಿಮಾನಿಗಳ ಸಂಭ್ರಮದ ಮಹಾಪೂರವೇ ಹರಿದಿದೆ.

ಐ ಲೀಗ್‌ ಟೂರ್ನಿಯಲ್ಲಿ ಮೋಹನ್ ಬಾಗನ್ ತಂಡವು ಮೂರು ಬಾರಿ ಪ್ರಶಸ್ತಿ ಜಯಿಸಿದೆ. ಈ ವರ್ಷ ಕೊರೊನಾ ವೈರಸ್‌ ತಡೆಗೆ ಲಾಕ್‌ಡೌನ್‌ ಆಗುವ ಕೆಲವೇ ದಿನಗಳ ಮುನ್ನ ಮುಕ್ತಾವಾಗಿದ್ದ ಟೂರ್ನಿಯಲ್ಲಿಯೂ ತಂಡವು ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಎಟಿಕೆ ಕ್ಲಬ್‌ನೊಂದಿಗೆ ಮೋಹನ್ ಬಾಗನ್ ಕೈಜೋಡಿಸಿದೆ. ಇದರಿಂದಾಗಿ ಎಟಿಕೆ–ಮೋಹನ್ ಬಾಗನ್ ತಂಡವು ಲೀಗ್‌ನಲ್ಲಿ ಕಣಕ್ಕಿಳಿಯಲಿದೆ.

ಬುಧವಾರ ಸಂಜೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಕಿ ದಿಗ್ಗಜ ಅಶೋಕಕುಮಾರ್ ಧ್ಯಾನಚಂದ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುರುಭಕ್ಷ್ ಸಿಂಗ್ ಮತ್ತು ಪಲಾಶ್ ನಂದಿ ಅವರಿಗೆ ಮೋಹನ್ ಬಾಗನ್ ರತ್ನ ಗೌರವ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT