ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಜಯದ ಲಯಕ್ಕೆ ಮರಳುವ ಕನಸು

ಇಂಡಿಯನ್ ಸೂಪರ್ ಲೀಗ್‌: ‘ಹ್ಯಾಟ್ರಿಕ್ ಸೋಲಿನಿಂದ’ ತಪ್ಪಿಸಿಕೊಳ್ಳಲು ಆತಿಥೇಯರ ‍ಪ್ರಯತ್ನ
Last Updated 12 ಫೆಬ್ರುವರಿ 2019, 18:58 IST
ಅಕ್ಷರ ಗಾತ್ರ

ಮುಂಬೈ: ಸತತ ಎರಡು ಸೋಲಿನಿಂದ ತತ್ತರಿಸಿರುವ ಮುಂಬೈ ಸಿಟಿ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್‌) ಬುಧವಾರದ ಪಂದ್ಯದಲ್ಲಿ ಜಯದ ಲಯಕ್ಕೆ ಮರಳಲು ಪ್ರಯತ್ನಿಸಲಿದೆ.

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ನಡೆಯಲಿರುವ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ಎದುರಿನ ಪಂದ್ಯದಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದತ್ತ ಹೆಜ್ಜೆ ಹಾಕುವ ಕನಸಿನೊಂದಿಗೆ ತಂಡ ಕಣಕ್ಕೆ ಇಳಿಯಲಿದೆ.

ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಪುಣೆ ಎಫ್‌ಸಿಯನ್ನು 2–0 ಗೋಲುಗಳಿಂದ ಮಣಿಸಿದ ಮುಂಬೈ ನಂತರದ ಪಂದ್ಯದಲ್ಲಿ ಗೋವಾಗೆ 0–5ರಿಂದ ಮಣಿದಿತ್ತು. ಆ ನಂತರ ಸತತ ಒಂಬತ್ತು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಈ ಮೂಲಕ ಬಿಎಫ್‌ಸಿಯನ್ನು ಹಿಂದಿಕ್ಕಿ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಸೋತಿರುವ ತಂಡ ಮತ್ತೆ ಎರಡನೇ ಸ್ಥಾನಕ್ಕೆ ಇಳಿದೆ.

ಮೊದಲ ಸ್ಥಾನದಲ್ಲಿರುವ ಬಿಎಫ್‌ಸಿ 15 ಪಂದ್ಯಗಳಿಂದ ಒಟ್ಟು 31 ಪಾಯಿಂಟ್ ಕಲೆ ಹಾಕಿದ್ದು ಮುಂಬೈ ಇಷ್ಟೇ ಪಂದ್ಯಗಳಿಂದ 27 ಪಾಯಿಂಟ್‌ ಕಲೆ ಹಾಕಿದೆ. ಬುಧವಾರದ ಪಂದ್ಯದಲ್ಲಿ ಗೆದ್ದರೆ ತಂಡ 30 ಪಾಯಿಂಟ್‌ಗಳೊಂದಿಗೆ ಬಿಎಫ್‌ಸಿಯ ಸಮೀಪ ತಲುಪಲಿದೆ.

ನಾರ್ತ್ ಈಸ್ಟ್‌ಗೂ ಮಹತ್ವದ ಪಂದ್ಯ:ನಾರ್ತ್ ಈಸ್ಟ್ ಯುನೈಟೆಡ್ 15 ಪಂದ್ಯಗಳಿಂದ 24 ಪಾಯಿಂಟ್‌ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಮುಂಬೈ ಸಿಟಿ ವಿರುದ್ಧ ಗೆದ್ದರೆ ತಂಡದ ಪ್ಲೇ ಆಫ್ ಕನಸು ಜೀವಂತವಾಗಿ ಉಳಿಯಲಿದೆ.

ಆತಿಥೇಯರು ಸೆನೆಗಲ್‌ನ ಮಿಡಿಯೊ ಮೊಡೊ ಸೊಗೊ ಅವರ ಮೇಲೆ ಭರವಸೆ ಇರಿಸಿಕೊಂಡಿದ್ದಾರೆ. ಅವರು ಈ ವರೆಗೆ ಒಟ್ಟು ಒಂಬತ್ತು ಗೋಲುಗಳನ್ನು ಗಳಿಸಿದ್ದಾರೆ. ಕಾಂಗೊದ ಸ್ಟ್ರೈಕರ್‌ ಅರ್ನಾಲ್ಡ್ ಇಸೊಕೊ ಕೂಡ ತಂಡದ ನಿರೀಕ್ಷೆಗಳಿಗೆ ಜೀವ ತುಂಬಿದ್ದಾರೆ. ಅವರು ಕೂಡ ಒಂಬತ್ತು ಗೋಲು ಗಳಿಸಿದ್ದಾರೆ. ಬ್ರೆಜಿಲ್‌ನ ಸ್ಟ್ರೈಕರ್‌ ರಾಫೆಲ್‌ ಬಾಸ್ಟೊಸ್ ಅವರ ಬಲವೂ ತಂಡಕ್ಕಿದೆ. ಗೋವಾ ಎದುರಿನ ಪಂದ್ಯದಲ್ಲಿ ಮುಗ್ಗರಿಸಿದ್ದ ಸೊಗೊ ಈ ಪಂದ್ಯದಲ್ಲಿ ಮತ್ತೆ ಲಯಕ್ಕೆ ಮರಳಲು ಪ್ರಯತ್ನಿಸಲಿದ್ದಾರೆ.

ಮುಂಬೈ ತಂಡ ಬಲಿಷ್ಠ ರಕ್ಷಣಾ ವಿಭಾಗವನ್ನೂ ಹೊಂದಿದೆ. ಆದರೆ ದೌರ್ಬಲ್ಯಗಳನ್ನು ಮೀರಿ ನಿಲ್ಲಬೇಕಾಗಿದೆ. ಗೋಲ್ ಕೀಪರ್‌, ಅನುಭವಿ ಅಮರಿಂದರ್ ಸಿಂಗ್‌ ಗೋವಾ ಎದುರಿನ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರು ಕೂಡ ಈಗ ಒತ್ತಡದಲ್ಲಿದ್ದಾರೆ.

ನಾರ್ತ್ ಈಸ್ಟ್‌ ತಂಡದ ಬಾರ್ತೊಲೊಮೆ ಒಗ್ಬೆಚೆ, ಜಿರಿಕ್ ಖೋಸ್ಲಾ, ಜುವಾನ್‌ ಮಸಿಕಾ ಮತ್ತು ಕಿವಿ ಜಿಮೋಜಿ ಅವರನ್ನು ಕಟ್ಟಿಹಾಕಲು ಸಾಧ್ಯವಾದರೆ ಆತಿಥೇಯರ ಜಯದ ಆಸೆ ಈಡೇರಲಿದೆ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT