ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸವರ್ಷದ ಮೊದಲ ಜಯಕ್ಕಾಗಿ ಮುಂಬೈ ಸಿಟಿ–ಕೇರಳ ಬ್ಲಾಸ್ಟರ್ಸ್ ಹಣಾಹಣಿ

Last Updated 1 ಜನವರಿ 2021, 13:58 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್, ಗೋವಾ: ಎರಡು ದಿನಗಳ ವಿರಾಮದ ನಂತರ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಮತ್ತೆ ಕಾಲ್ಚಳಕದ ಸೊಬಗು ಮೇಳೈಸಲಿದ್ದು ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್‌ ತಂಡಗಳು ಸೆಣಸಲಿವೆ.

ಏಳನೇ ಆವೃತ್ತಿಯಲ್ಲಿ ಮುಂಬೈ ಸಿಟಿ ತಂಡ ಉತ್ತಮ ಲಯದಲ್ಲಿ ಆಡುತ್ತಿದೆ. ಏಳು ಪಂದ್ಯಗಳಲ್ಲಿ ಐದನ್ನು ಗೆದ್ದಿರುವ ತಂಡ ಸೋತಿರುವುದು ಒಮ್ಮೆ ಮಾತ್ರ. 16 ಪಾಯಿಂಟ್ ಕಲೆ ಹಾಕಿರುವ ಮುಂಬೈ ಸಿಟಿ ಎಫ್‌ಸಿ 12 ದಿನಗಳ ವಿಶ್ರಾಂತಿಯ ನಂತರ ಮತ್ತೆ ಕಣಕ್ಕೆ ಇಳಿಯುತ್ತಿದೆ. ಕೇರಳ ಬ್ಲಾಸ್ಟರ್ಸ್‌ಗೆ ಈ ವರೆಗೆ ಸಹಜ ಆಟ ಆಡಲು ಆಗಲಿಲ್ಲ. ಏಳು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿರುವ ತಂಡ ತಲಾ ಮೂರು ಡ್ರಾ ಮತ್ತು ಮೂರು ಸೋಲು ಕಂಡಿದೆ.

ಮುಂಬೈ ಸಿಟಿಯ ಕೋಚ್ ಸರ್ಜಿಯೊ ಲೊಬೆರೊ ಅವರಿಗೆ ಕೇರಳ ಬ್ಲಾಸ್ಟರ್ಸ್‌ನ ಮರ್ಮ ಚೆನ್ನಾಗಿ ಗೊತ್ತು. ಅವರು ತರಬೇತಿ ನೀಡಿರುವ ತಂಡಗಳು ಬ್ಲಾಸ್ಟರ್ಸ್‌ ವಿರುದ್ಧ ಹಿಂದಿನ ಆರು ಪಂದ್ಯಗಳಲ್ಲಿ ಅಜೇಯವಾಗಿದೆ. ಈ ಪೈಕಿ ಐದರಲ್ಲಿ ಜಯ ಗಳಿಸಿದೆ. ಆದರೆ ಶನಿವಾರದ ಪಂದ್ಯದಲ್ಲಿ ಹಿಂದಿನ ಸೋಲು–ಗೆಲುವು ಲೆಕ್ಕಕ್ಕೆ ಬರಲಾರದು ಎಂದು ಲೊಬೆರಾ ಅವರೇ ಒಪ್ಪಿಕೊಂಡಿದ್ದಾರೆ.

‘ಶನಿವಾರದ ಪಂದ್ಯ ವಿಭಿನ್ನವಾಗಿರಲಿದೆ. ಕೇರಳ ಬ್ಲಾಸ್ಟರ್ಸ್ ಬಲಿಷ್ಠ ತಂಡವಾಗಿದ್ದು ಈಗ ಅದರ ಕೋಚ್ ಕೂಡ ಸಮರ್ಥರಾಗಿದ್ದಾರೆ. ನಮ್ಮ ಆಟಗಾರರು ಆ ತಂಡದ ವಿರುದ್ಧ ಉತ್ತಮ ಆಟ ಆಡುವ ವಿಶ್ವಾಸವಿದೆ’ ಎಂದು ಲೊಬೆರಾ ಹೇಳಿದರು. ‘ಹ್ಯೂಗೊ ಬೌಮೋಸ್ ಪಂದ್ಯಕ್ಕೆ ಲಭ್ಯ ಇದ್ದು ಯಾರಿಗೂ ಗಾಯದ ಸಮಸ್ಯೆ ಇಲ್ಲ’ ಎಂದೂ ಅವರು ಸ್ಪಷ್ಟಪಡಿಸಿದರು.

ಮುಂಬೈ ಸಿಟಿ ಈ ಬಾರಿ ಇಲ್ಲಿಯ ವರೆಗೆ ಕೇವಲ ಮೂರು ಗೋಲು ಬಿಟ್ಟುಕೊಟ್ಟಿದೆ. 11 ಗೋಲುಗಳನ್ನು ಗಳಿಸಿದ್ದು ರಕ್ಷಣೆ ಮತ್ತು ಆಕ್ರಮಣ ವಿಭಾಗಗಳಲ್ಲಿ ಸಮಬಲವನ್ನು ಪ್ರದರ್ಶಿಸಿದೆ. ಕೇರಳ ಬ್ಲಾಸ್ಟರ್ಸ್ ಹಿಂದಿನ ಮೂರು ಪಂದ್ಯಗಳಲ್ಲಿ ನಿಧಾನವಾಗಿ ಚೇತರಿಸಿಕೊಂಡಿದೆ. ಒಟ್ಟು ಎಂಟು ಗೋಲುಗಳ ಪೈಕಿ ಐದನ್ನು ಈ ಮೂರು ಪಂದ್ಯಗಳಲ್ಲಿ ಗಳಿಸಿದೆ. ಲೊಬೆರಾ ಎದುರಿನ ಸೋಲಿನ ಸರಪಳಿಯನ್ನು ತುಂಡರಿಸುವ ಲೆಕ್ಕಾಚಾರದೊಂದಿಗೆ ಶನಿವಾರ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT