ಬ್ರೆಜಿಲ್‌ಗೆ ಶರಣಾದ ಮೆಕ್ಸಿಕೊ

7
ಮೋಡಿ ಮಾಡಿದ ನೇಮರ್‌, ರಾಬರ್ಟೊ ಫಿರ್ಮಿನೊ: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದ ಸಾಂಬಾ ನಾಡಿನ ತಂಡ

ಬ್ರೆಜಿಲ್‌ಗೆ ಶರಣಾದ ಮೆಕ್ಸಿಕೊ

Published:
Updated:

ಸಮಾರ, ರಷ್ಯಾ: ಸಮಾರ ಅರೆನಾದಲ್ಲಿ ಸೋಮವಾರ ನೇಮರ್‌ ಮತ್ತು ರಾಬರ್ಟೊ ಫಿರ್ಮಿನೊ ಜಾದೂ ಮಾಡಿದರು.

ಇವರ ಕಾಲ್ಚಳಕದಲ್ಲಿ ಅರಳಿದ ತಲಾ ಒಂದು ಗೋಲುಗಳ ನೆರವಿನಿಂದ ಸಾಂಬಾ ನಾಡಿನ ತಂಡ 21ನೇ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿತು.

ವಿಶ್ವಕಪ್‌ನಲ್ಲಿ ಐದು ಬಾರಿ ಟ್ರೋಫಿ ಜಯಿಸಿರುವ ಏಕೈಕ ತಂಡ ಎಂಬ ಹಿರಿಮೆ ಹೊಂದಿರುವ ಬ್ರೆಜಿಲ್‌, ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ 2–0 ಗೋಲು ಗಳಿಂದ ಮೆಕ್ಸಿಕೊ ತಂಡವನ್ನು ಪರಾಭವಗೊಳಿಸಿತು.

4-4-2ರ ಯೋಜನೆಯೊಂದಿಗೆ ಅಂಗಳಕ್ಕಿಳಿದಿದ್ದ ಥಿಯಾಗೊ ಸಿಲ್ವ ಪಡೆ ಶುರುವಿನಿಂದಲೇ ಎದುರಾಳಿ ತಂಡದ ರಕ್ಷಣಾ ಕೋಟೆ ಭೇದಿಸಲು ಮುಂದಾಯಿತು.

ಮೆಕ್ಸಿಕೊ ಎದುರು 23–10ರ ಗೆಲುವಿನ ದಾಖಲೆ ಹೊಂದಿದ್ದ ಸಿಲ್ವ ಬಳಗಕ್ಕೆ ಆರಂಭದಲ್ಲೇ ಗೋಲು ಗಳಿಸುವ ಮೂರು ಅವಕಾಶಗಳು ಸಿಕ್ಕಿದ್ದವು. ಪ್ರಮುಖ ಆಟಗಾರ ನೇಮರ್‌ ಇವುಗಳನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾದರು.

4–3–3ರ ರಣನೀತಿ ಹೆಣೆದು ಆಡಿದ ಮೆಕ್ಸಿಕೊ ತಂಡ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿ ಅಂತ್ಯವಾಯಿತು.

ವಿರಾಮದ ನಂತರ ಬ್ರೆಜಿಲ್‌ ತಂಡ ಆಟದ ವೇಗ ಹೆಚ್ಚಿಸಿಕೊಂಡಿತು. 53ನೇ ನಿಮಿಷದಲ್ಲಿ ಈ ತಂಡಕ್ಕೆ ಮೊದಲ ಯಶಸ್ಸು ಸಿಕ್ಕಿತು.

ಮುಂಚೂಣಿ ವಿಭಾಗದ ಆಟಗಾರ ವಿಲಿಯನ್‌ ಎದುರಾಳಿ ಆವರಣದ ಎಡತುದಿಯಿಂದ ಒದ್ದು ಕಳುಹಿಸಿದ ಚೆಂಡನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಗೇಬ್ರಿಯಲ್‌ ಜೀಸಸ್‌ ವಿಫಲರಾದರು. ಆದರೆ ನೇಮರ್‌ ತಪ್ಪು ಮಾಡಲಿಲ್ಲ.

ಜೀಸಸ್‌ ಅವರನ್ನು ವಂಚಿಸಿ ಬಂದ ಚೆಂಡನ್ನು ಅವರು ಅಮೋಘ ರೀತಿಯಲ್ಲಿ ಗುರಿಯತ್ತ ತಳ್ಳಿ ಕ್ರೀಡಾಂಗಣದಲ್ಲಿ ಸಂತಸದ ಹೊನಲು ಹರಿಯುವಂತೆ ಮಾಡಿದರು. ಇದರೊಂದಿಗೆ ಮುಂಚೂಣಿ ವಿಭಾಗದ ಆಟಗಾರ ನೇಮರ್‌, ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟಾರೆ ಆರು ಗೋಲು ದಾಖಲಿಸಿದ ಹಿರಿಮೆ ತಮ್ಮದಾಗಿಸಿಕೊಂಡರು.

ಎದುರಾಳಿ ತಂಡ ಖಾತೆ ತೆರೆದಿ ದ್ದರಿಂದ ಅಲ್ಪ ಒತ್ತಡಕ್ಕೆ ಒಳಗಾದಂತೆ ಕಂಡ ಮೆಕ್ಸಿಕೊ ಆಟಗಾರರು ಒರಟು ಆಟಕ್ಕೆ ಮುಂದಾದರು. ಎದುರಾಳಿ ಆಟಗಾರರನ್ನು ತಳ್ಳಿದ ಕಾರಣ ಈ ತಂಡದ ಹೆಕ್ಟರ್‌ ಹೆರೆರಾ, ಕಾರ್ಲೊಸ್‌ ಸಲಸೆಡೊ ಅವರಿಗೆ ಪಂದ್ಯದ ರೆಫರಿ ಹಳದಿ ಕಾರ್ಡ್ ತೋರಿಸಿ ಎಚ್ಚರಿಕೆ ನೀಡಿದರು.

ಆಟಗಾರರ ಜಟಾಪ‍ಟಿಯಿಂದ ಪಂದ್ಯ ಕಾವೇರುತ್ತಿರುವಾಗಲೇ ಬ್ರೆಜಿಲ್‌ ಮುನ್ನಡೆ ಹೆಚ್ಚಿಸಿಕೊಂಡಿತು. 88ನೇ ನಿಮಿಷದಲ್ಲಿ ರಾಬರ್ಟೊ ಫಿರ್ಮಿನೊ ಮೋಡಿ ಮಾಡಿದರು.

ನೇಮರ್‌ ಬಾರಿಸಿದ ಚೆಂಡನ್ನು ಮೆಕ್ಸಿಕೊ ಗೋಲ್‌ಕೀಪರ್‌ ಗುಯೆ ಲ್ಲೆರ್ಮೊ ಒಚಾವೊ, ಗೋಲು ಪೆಟ್ಟಿಗೆ ಯಿಂದ ಮುಂದಕ್ಕೆ ಬಂದು ತಡೆಯಲು ಮುಂದಾದರು. ಅವರ ಎಡಗಾಲಿಗೆ ತಾಗಿ ತಮ್ಮತ್ತ ಬಂದ ಚೆಂಡನ್ನು ಫಿರ್ಮಿನೊ ಲೀಲಾಜಾಲವಾಗಿ ಗುರಿ ಸೇರಿಸಿ ಬ್ರೆಜಿಲ್‌ ತಂಡದ ಕ್ವಾರ್ಟರ್‌ ಫೈನಲ್‌ ಪ್ರವೇಶದ ಕನಸಿಗೆ ಬಲ ತುಂಬಿದರು. ನಂತರದ ಅವಧಿಯಲ್ಲೂ ಪರಿಣಾಮಕಾರಿ ಆಟ ಆಡಿದ ಸಿಲ್ವಾ ಪಡೆ ಖುಷಿಯ ಕಡಲಲ್ಲಿ ತೇಲಿತು.

ಕ್ವಾರ್ಟರ್‌ ಫೈನಲ್‌ಗೆ ಕ್ರೊವೇಷ್ಯಾ
ನಿಜ್ನಿ ನೊವ್‌ಗೊರೊದ್‌:
ಪೆನಾಲ್ಟಿ ಶೂಟೌಟ್‌ನಲ್ಲಿ ಮಿಂಚಿದ ಕ್ರೊವೇಷ್ಯಾ ತಂಡದವರು 21ನೇ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಕ್ರೊವೇಷ್ಯಾ ಮತ್ತು ಡೆನ್ಮಾರ್ಕ್‌ ನಡುವಣ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯ ನಿಗದಿತ ಅವಧಿಯಲ್ಲಿ 1–1 ಗೋಲುಗಳಿಂದ ಸಮಬಲವಾಯಿತು. ‍ಪೆನಾಲ್ಟಿ ಅವಕಾಶದಲ್ಲಿ ಕ್ರೊವೇಷ್ಯಾ 3–2 ಗೋಲುಗಳಿಂದ ಗೆದ್ದಿತು.

ಈ ತಂಡದ ಆ್ಯಂಡ್ರೆಜ್‌ ಕ್ರಾಮರಿಕ್‌, ಲೂಕಾ ಮಾಡ್ರಿಕ್‌ ಮತ್ತು ಇವಾನ್‌ ರ‍್ಯಾಕ್ಟಿಕ್‌ ಅವರು ಚೆಂಡನ್ನು ಗುರಿ ಮುಟ್ಟಿಸಿದರು.

ಡೆನ್ಮಾರ್ಕ್‌ ತಂಡದ ಕ್ರಿಸ್ಟಿಯನ್‌ ಎರಿಕ್‌ಸನ್‌, ಲಾಸೆ ಶೋನ್‌ ಮತ್ತು ನಿಕೊಲಾಯ್‌ ಜೋರ್ಗೆಸನ್‌ ಅವರು ಒದ್ದ ಚೆಂಡನ್ನು ಆಕರ್ಷಕ ರೀತಿಯಲ್ಲಿ ತಡೆದ ಗೋಲ್‌ಕೀಪರ್‌ ಡ್ಯಾನಿಜೆಲ್‌ ಸುಬಾಸಿಕ್‌ ಕ್ರೊವೇಷ್ಯಾ ಪಾಲಿಗೆ ಹೀರೊ ಆದರು.

ಕ್ರೊವೇಷ್ಯಾ ತಂಡ 1998ರ ನಂತರ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟ ಸಾಧನೆ ಮಾಡಿತು.

ಉಭಯ ತಂಡಗಳು ಮೊದಲ ನಾಲ್ಕು ನಿಮಿಷಗಳಲ್ಲಿ ತಲಾ ಒಂದು ಗೋಲು ದಾಖಲಿಸಿದ್ದವು. ಡೆನ್ಮಾರ್ಕ್‌ ತಂಡದ ಮಥಿಯಾಸ್‌ ಜೋರ್ಗೆನ್‌ಸನ್‌ ಮೊದಲ ನಿಮಿಷದಲ್ಲೇ ಚೆಂಡನ್ನು ಗುರಿ ಸೇರಿಸಿದರು. ಕ್ರೊವೇಷ್ಯಾ ಪರ ಮರಿಯೊ ಮಂಡಾಜುಕಿಕ್‌ ನಾಲ್ಕನೇ ನಿಮಿಷದಲ್ಲಿ ಗೋಲು ಬಾರಿಸಿದರು. ನಂತರದ ಅವಧಿಯಲ್ಲಿ ಎರಡು ತಂಡಗಳೂ ಸಮಬಲದ ಪೈಪೋಟಿ ನಡೆಸಿದವು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !